ಟ್ವೆಂಟಿ-20 ವಿಶ್ವಕಪ್ ಭಾರತದಿಂದ ಯುಎಇ, ಓಮಾನ್ ಗೆ ಸ್ಥಳಾಂತರವಾಗುವ ಸಾಧ್ಯತೆ

Update: 2021-06-05 11:53 GMT
photo: twitter

ಹೊಸದಿಲ್ಲಿ, ಜೂ.5: ಭಾರತದಲ್ಲಿನ ಕೋವಿಡ್-19ನಿಂದ ಉಂಟಾಗಿರುವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅಕ್ಟೋಬರ್-ನವೆಂಬರ್ ನಲ್ಲಿ ನಿಗದಿಯಾಗಿರುವ ಟ್ವೆಂಟಿ-20 ವಿಶ್ವಕಪ್ ಟೂರ್ನಿಯು ಯುಎಇ ಹಾಗೂ ಓಮಾನ್ ಗೆ ಸ್ಥಳಾಂತರವಾಗುವ ಸಾಧ್ಯತೆ ಇದೆ. ವಿಶ್ವಕಪ್ ಗೆ ತಯಾರಿ ನಡೆಸುವುದನ್ನು ಮುಂದುವರಿಸಲು ಬಿಸಿಸಿಐ ಆಂತರಿಕವಾಗಿ ಐಸಿಸಿಗೆ ಸಮ್ಮತಿ ನೀಡಿದೆ ಎಂದು ತಿಳಿದುಬಂದಿದೆ.

ಅಕ್ಟೋಬರ್ ಕೊನೆಯ ವಾರದಲ್ಲಿ ಆರಂಭವಾಗಲಿರುವ ವಿಶ್ವಕಪ್ ಅಬುಧಾಬಿ, ದುಬೈ, ಶಾರ್ಜಾ ಹಾಗೂ ಓಮಾನ್ ರಾಜಧಾನಿ ಮಸ್ಕತ್ ನಲ್ಲಿ ನಡೆಯಲಿದೆ.

ಹೌದು, ಐಸಿಸಿ ಮಂಡಳಿ ಸಭೆಯಲ್ಲಿ ವಿಶ್ವಕಪ್ ಕುರಿತಾಗಿ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಔಪಚಾರಿಕವಾಗಿ 4 ವಾರಗಳ ಸಮಯಾವಕಾಶ ನೀಡುವಂತೆ ಬಿಸಿಸಿಐ ಕೇಳಿಕೊಂಡಿತ್ತು. ತಾನು ಟೂರ್ನಿಯ ಆತಿಥ್ಯದ ಹಕ್ಕನ್ನು  ಉಳಿಸಿಕೊಳ್ಳಲು ಬಯಸಿದ್ದು, ಟೂರ್ನಿಯು ಯುಎಇ ಹಾಗೂ ಓಮಾನ್ ನಲ್ಲಿ ನಡೆಯುವ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಹೇಳಿದೆ ಎಂದು ಹಿರಿಯ ಮಂಡಳಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಒಂದು ವೇಳೆ 2021ರ ಐಪಿಎಲ್ ಟೂರ್ನಿಯ 31 ಪಂದ್ಯಗಳು ಅಕ್ಟೋಬರ್ 10ರ ವೇಳೆ ಮುಕ್ತಾಯವಾದರೆ ಯುಎಇನಲ್ಲಿ ವಿಶ್ವಕಪ್ ಟೂರ್ನಿಯು ನವೆಂಬರ್ ನಲ್ಲಿ ನಡೆಯಲಿದೆ. ಜಾಗತಿಕ ಟೂರ್ನಿಗೆ ಪಿಚ್ ಗಳನ್ನು ಸಜ್ಜುಗೊಳಿಸಲು 3 ವಾರ ಸಮಯ ಸಿಗುತ್ತದೆ.

ಪ್ರಾಯೋಗಿಕವಾಗಿ ಯೋಚಿಸುವುದಾದರೆ ಭಾರತದಲ್ಲಿ ಈಗ ಸುಮಾರು 1,20,000 ಕೊರೋನ ಕೇಸ್ ಗಳು ವರದಿ ಯಾಗುತ್ತಿವೆ. ಇದು ಎಪ್ರಿಲ್ ಕೊನೆಯಲ್ಲಿ ಹಾಗೂ ಈ ತಿಂಗಳ ಆರಂಭದಲ್ಲಿ ವರದಿಯಾಗಿರುವ ಪ್ರಕರಣದ ಮೂರನೇ ಒಂದು ಭಾಗದಷ್ಟಿದೆ.  ಅಕ್ಟೋಬರ್‍ನಲ್ಲಿ ಕೋವಿಡ್ ನ 3ನೇ ಅಲೆ ಬರುವ ಸಾಧ್ಯತೆಯಿರುವ ಕಾರಣ ಆಗ ದೇಶದ ಆರೋಗ್ಯ ಸ್ಥಿತಿಯನ್ನು ಈಗಲೇ ಊಹಿಸಲು ಸಾಧ್ಯವಿಲ್ಲ. 16 ತಂಡಗಳು ಭಾಗವಹಿಸಲಿರುವ ವಿಶ್ವಕಪ್ ಟೂರ್ನಿಯಲ್ಲಿ ಒಂದು ತಂಡ ಸೋಂಕಿತವಾದರೆ 14ರಿಂದ 15 ಆಟಗಾರರನ್ನು ಬದಲಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News