×
Ad

ದಿಲ್ಲಿಯಲ್ಲಿ ಮನೆಗೆ ರೇಷನ್‌ ತಲುಪಿಸುವ ಯೋಜನೆಗೆ ಕೇಂದ್ರ ಸರಕಾರ ತಡೆ ನೀಡಿದೆ: ಆಪ್‌ ಸರಕಾರದ ಮೂಲಗಳು

Update: 2021-06-05 19:11 IST

ಹೊಸದಿಲ್ಲಿ: ಮುಂದಿನ ವಾರದಿಂದ ಮನೆಮನೆಗೆ ಪಡಿತರ ಸಾಮಗ್ರಿಗಳನ್ನು ವಿತರಣೆ ಮಾಡುವ ದಿಲ್ಲಿ ಸರಕಾರದ ಯೋಜನೆಗೆ ಕೇಂದ್ರ ಸರಕಾರವು ತಡೆ ನೀಡಿದ್ದಾಗಿ ಅರವಿಂದ್‌ ಕೇಜ್ರಿವಾಲ್‌ ಆಡಳಿತದ ಮೂಲಗಳು ತಿಳಿಸಿದ್ದಾಗಿ ndtv.com ವರದಿ ಮಾಡಿದೆ.

"ದಿಲ್ಲಿಯ ಆಮ್‌ ಆದ್ಮಿ ಸರಕಾರವು ಪ್ರತಿಯೊಂದು ಮನೆಯ ಬಾಗಿಲಿಗೆ ಪಡಿತರಗಳನ್ನು ವಿತರಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿತ್ತು. ಇದರಿಂದಾಗಿ 72 ಲಕ್ಷ ಮಂದಿಗೆ ಸಹಾಯವಾಗುತ್ತಿತ್ತು. ಆದ್ದರಿಂದಲೇ ಮುಂದಿನ ವಾರದಿಂದ ಈ ಯೋಜನೆ ಜಾರಿಗೆ ತರಲು ನಾವು ನಿರ್ಧರಿಸಿದ್ದೆವು. ಆದರೆ ಇದೀಗ ಕೇಂದ್ರ ಸರಕಾರವು ತಮ್ಮ ಅನುಮತಿಯಿಲ್ಲದೇ ಈ ಯೋಜನೆಯನ್ನು ಪ್ರಾರಂಭಿಸಬಾರದು" ಎಂದು ತಡೆ ಹಿಡಿದಿದ್ದಾಗಿ ಆಮ್‌ ಆದ್ಮಿ ಪಕ್ಷದ ಮೂಲಗಳು ತಿಳಿಸಿದ್ದಾಗಿ ವರದಿಯಾಗಿದೆ.

ಈ ಕುರಿತಾದಂತೆ ಟ್ವಿಟರ್‌ ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಆಮ್‌ ಆದ್ಮಿ ಪಕ್ಷ, " ಮಿಸ್ಟರ್‌ ಪ್ರೈಮ್‌ ಮಿನಿಸ್ಟರ್...‌ ಕೇಜ್ರಿವಾಲ್‌ ಸರಕಾರದ ಮನೆಮನೆಗೆ ರೇಶನ್‌ ತಲುಪಿಸುವ ಯೋಜನೆಯನ್ನು ನಿಲ್ಲಿಸಲು ನೀವು ರೇಶನ್‌ ಮಾಫಿಯಾದವರೊಂದಿಗೆ ಯಾವ ವ್ಯವಸ್ಥೆಗಳನ್ನು ಮಾಡುತ್ತಿದ್ದೀರಿ?" ಎಂದು ಟ್ವೀಟ್‌ ಮಾಡಿದೆ.

ಮಾರ್ಚ್‌ ತಿಂಗಳಲ್ಲಿ ಈ ಯೋಜನೆಯ ಕುರಿತು ಕೇಂದ್ರ ಸರಕಾರವು ಕಳವಳ ವ್ಯಕ್ತಪಡಿಸಿತ್ತು. ಕೇಂದ್ರೀಯ ನಿಯಮಗಳ ಪ್ರಕಾರ ರೇಶನ್‌ ಕಾರ್ಡ್‌ ಹೊಂದಿರುವವರಿಗೆ ಸಿಗಬೇಕಾದ ದರಕ್ಕಿಂತ ಹೆಚ್ಚು ದರದಲ್ಲಿ ಆಹಾರ ಸಾಮಗ್ರಿಗಳು ಮಾರಾಟವಾಗುವ ಸಾಧ್ಯತೆಗಳಿವೆ" ಎಂದು ಹೇಳಿಕೆ ನೀಡಿದ್ದಾಗಿ ವರದಿ ಉಲ್ಲೇಖಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News