ಟ್ವಿಟರ್ ನಲ್ಲಿ ಆದಿತ್ಯನಾಥ್ ಗೆ ಜನ್ಮದಿನ ಶುಭಾಶಯ ಕೋರದ ಪ್ರಧಾನಿ ಮೋದಿ: ಬಿಜೆಪಿ ಹೇಳಿದ್ದೇನು?

Update: 2021-06-05 18:17 GMT

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಹಾಗೂ  ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಡುವೆ ಎಲ್ಲವೂ ಚೆನ್ನಾಗಿಲ್ಲವೇ? ಜೂನ್ 5 ರ ಶನಿವಾರ ಆದಿತ್ಯನಾಥ್ ಅವರ ಜನ್ಮದಿನದಂದು ಪ್ರಧಾನ ಮಂತ್ರಿಯವರು ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಶುಭಾಶಯ ಕೋರದೇ ಇರುವುದು  ಈ ರೀತಿಯ ಊಹಾಪೋಹಗಳು ಹರಿದಾಡಲು ಕಾರಣವಾಗಿದೆ ಎಂದು India Today ವರದಿ ಮಾಡಿದೆ.

ಭಾರತದ ನಾಯಕರಿಗೆ ಮಾತ್ರವಲ್ಲದೆ ವಿದೇಶಿ ನಾಯಕರಿಗೆ  ಅಭಿನಂದನಾ ಸಂದೇಶಗಳನ್ನು ನೀಡುವುದನ್ನು ತಪ್ಪಿಸಿಕೊಳ್ಳದ ಪ್ರಧಾನಿ ಮೋದಿಯವರು ಈ ವರ್ಷ ಸಿಎಂ ಆದಿತ್ಯನಾಥ್ ಅವರಿಗೆ ಜನ್ಮದಿನದ ಶುಭಾಶಯಗಳನ್ನು ಟ್ವೀಟ್ ಮಾಡಲು ವಿಫಲರಾಗಿದ್ದಾರೆ ಎಂದು ಟ್ವೀಟ್ ಬಳಕೆದಾರರು  ಅಸಮಾಧಾನ ವ್ಯಕ್ತಪಡಿಸಿದರು.

"ಕಾಣೆಯಾದ ಹುಟ್ಟುಹಬ್ಬದ ಶುಭಾಶಯಗಳು" ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ವದಂತಿಗಳಿಗೆ ಉತ್ತೇಜನ ನೀಡಿತ್ತು. ಉತ್ತರಪ್ರದೇಶ ವಿಧಾನಸಭಾ ಚುನಾವಣೆಗೆ ತಿಂಗಳುಗಳ ಮುಂಚೆಯೇ ದಿಲ್ಲಿಯ ಬಿಜೆಪಿ ಉನ್ನತ ನಾಯಕರು ಉತ್ತರಪ್ರದೇಶ ಮುಖ್ಯಮಂತ್ರಿ ವಿರುದ್ಧದ ಭಿನ್ನಾಭಿಪ್ರಾಯವನ್ನು ಹತ್ತಿಕ್ಕಲು ಹೆಣಗಾಡುತ್ತಿದ್ದಾರೆ ಎಂಬ ವರದಿಗಳು ಬಂದಿವೆ.

ಈ ವಾರದ ಆರಂಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಲಕ್ನೋದಲ್ಲಿ ಮಂತ್ರಿಗಳು ಮತ್ತು ಪಕ್ಷದ ಮುಖಂಡರೊಂದಿಗೆ ಆದಿತ್ಯನಾಥ್ ಸರಕಾರದ ಬಗ್ಗೆ ಪ್ರತಿಕ್ರಿಯೆ ಸಂಗ್ರಹಿಸಲು ಹಾಗೂ  2022 ರ ವಿಧಾನಸಭೆಗೆ ರಾಜ್ಯ ಘಟಕದ ಸಿದ್ಧತೆಗಳನ್ನು ನಿರ್ಣಯಿಸಲು ಮಾಹಿತಿ ಸಂಗ್ರಹಿಸಿದರು. ದಿಲ್ಲಿಯ ನಾಯಕರು  ಮುಚ್ಚಿದ ಬಾಗಿಲುಗಳ ಹಿಂದೆ ಸಿಎಂ ಆದಿತ್ಯನಾಥ್  ಅವರನ್ನು ಭೇಟಿಯಾಗಿದ್ದರು.

ಪ್ರಧಾನಮಂತ್ರಿ ಮೋದಿಯವರು  ಆದಿತ್ಯ ನಾಥ್ ಗೆ ಶುಭಾಶಯಗಳನ್ನುಕೋರದೇ ಇರುವುದು  ಬಿಜೆಪಿಯಲ್ಲಿನ ಬಿರುಕಿನ ಸಂಕೇತವಾಗಿದೆ ಎನ್ನುವ ಮಾತನ್ನು ಸರಕಾರದ ಮೂಲಗಳು ತಳ್ಳಿ ಹಾಕಿದವು. ದೇಶದಲ್ಲಿ ಕೋವಿಡ್ -19 ಎರಡನೇ ಅಲೆಯ ಅಬ್ಬರದ ಬಳಿಕ  ಪ್ರಧಾನ ಮಂತ್ರಿ ತಮ್ಮ ಸಾಂಪ್ರದಾಯಿಕ ಜನ್ಮದಿನದ ಶುಭಾಶಯಗಳನ್ನು ರಾಜಕೀಯ ಮುಖಂಡರಿಗೆ ಪೋಸ್ಟ್ ಮಾಡುವುದನ್ನು ನಿಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

“ಎಪ್ರಿಲ್ ಕೊನೆಯ ವಾರದಿಂದ ಪ್ರಧಾನಿ ಯಾವುದೇ ನಾಯಕನಿಗೆ ಶುಭಾಶಯ ಕೋರಿಲ್ಲ. ಇದು ರಾಷ್ಟ್ರಕ್ಕೆ ವಿಷಾದಕರ ಅವಧಿ. ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹಬ್ಬದ ಸಂದರ್ಭ ಪ್ರಧಾನಿ ಜನರಿಗೆ ಶುಭಾಶಯ ಕೋರಿದ್ದಾರೆ.  ಆದರೆ ಯಾವ ನಾಯಕರಿಗೂ ವೈಯಕ್ತಿಕ ಶುಭಾಶಯಗಳನ್ನು ಕೋರುವುದನ್ನು ನಿಲ್ಲಿಸಲಾಗಿದೆ’’ ಎಂದು ಸರಕಾರದ ಹಿರಿಯ ಸಚಿವರು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News