ಅಧಿಕಾರ ದಾಹ ಅರಾಜಕತೆಗೆ ಕಾರಣವಾದೀತು : ಉದ್ಧವ್ ಠಾಕ್ರೆ ಎಚ್ಚರಿಕೆ

Update: 2021-06-06 05:14 GMT

ಮುಂಬೈ: ದೇಶದಲ್ಲಿ ಕೊರೋನ ವೈರಸ್‌ನ ಎರಡನೇ ಅಲೆ ವ್ಯಾಪಕವಾಗಿ ಹಬ್ಬಿದ್ದರೂ ಅಧಿಕಾರ ದಾಹದ ಪ್ರವೃತ್ತಿ ಅರಾಜಕತೆಗೆ ಎಡೆಮಾಡಿಕೊಟ್ಟೀತು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಪರೋಕ್ಷವಾಗಿ ಮಾಜಿ ಮಿತ್ರಪಕ್ಷವಾದ ಬಿಜೆಪಿ ವಿರುದ್ಧ ಚಾಟಿ ಬೀಸಿದ್ದಾರೆ.

"ಕೋವಿಡ್-19 ಸಾಂಕ್ರಾಮಿಕದಿಂದ ತತ್ತರಿಸಿರುವ ರಾಜ್ಯ ಹಾಗೂ ನಮಗೆ ಮತ ಹಾಕಿದ ಜನರನ್ನು ರಕ್ಷಿಸುವ ಹೊಣೆ ನನ್ನ ಮೇಲಿದೆ. ಅದಾಗದಿದ್ದರೆ ಅಧಿಕಾರದಲ್ಲಿ ಇದ್ದೂ ವ್ಯರ್ಥ" ಎಂದು ಠಾಕ್ರೆ ಹೇಳಿದ್ದಾರೆ. "ನಮಗೆ ಮತ ಹಾಕಿದ ಜನರೇ ಕೋವಿಡ್-19 ಸಾಂಕ್ರಾಮಿಕದಿಂದ ಉಳಿಯದಿದ್ದರೆ, ಅಧಿಕಾರ ಇದ್ದು ಏನು ಪ್ರಯೋಜನ ? ಇಂಥ ಸಾಂಕ್ರಾಮಿಕದ ಸಂಕಷ್ಟದಲ್ಲೂ ಅಧಿಕಾರ ದಾಹ ಅರಾಜಕತೆಗೆ ದಾರಿ ಮಾಡಿಕೊಡುತ್ತದೆ" ಎಂದು ನುಡಿದರು. ಯಾವುದೇ ವಿರೋಧ ಪಕ್ಷವನ್ನು ನೇರವಾಗಿ ಠಾಕ್ರೆ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿಲ್ಲ.

ಮರಾಠಿ ದೈನಿಕ ’ಲೋಕಸತ್ತಾ’ ಆಯೋಜಿಸಿದ್ದ ಆನ್‌ಲೈನ್ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಠಾಕ್ರೆ ಈ ಅಭಿಪ್ರಾಯ ವ್ಯಕ್ತಪಡಿಸಿದರು. ನಾನು ಏಕೆ ಅಧಿಕಾರದಲ್ಲಿದ್ದೇನೆ ಎನ್ನುವುದನ್ನು ಸ್ಪಷ್ಟಪಡಿಸದಿದ್ದರೆ ಜನ ಕ್ಷಮಿಸಲಾರರು ಎಂದು ಹೇಳಿದರು.

ಬಿಜೆಪಿ ನಾಯಕರಾದ ಪ್ರಮೋದ್ ಮಹಾಜನ್ ಹಾಗೂ ಗೋಪಿನಾಥ್ ಮುಂಢೆ ನಿಧನದ ಬಳಿಕ ಬಿಜೆಪಿ ಹಾಗೂ ಶಿವಸೇನೆ ನಡುವಿನ ವಿಶ್ವಾಸ ಕಡಿಮೆಯಾಗುತ್ತಾ ಬಂತು. ಈಗ ಇರುವ ಪಾಲುದಾರ ಪಕ್ಷಗಳಾದ ಕಾಂಗ್ರೆಸ್ ಹಾಗೂ ಎನ್‌ಸಿಪಿ, ತಮ್ಮನ್ನು ಗೌರವದಿಂದ ನಡೆಸಿಕೊಳ್ಳುತ್ತಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

"ನಾನು ರಾಜಕೀಯಕ್ಕೆ ಬಂದದ್ದು ತಂದೆಯವರಿಂದಾಗಿ. ಅವರಿಗೆ ಯಾವುದೇ ರಾಜಕೀಯ ಒಲವು ಇರಲಿಲ್ಲ. ಸೇನಾ ಕಾರ್ಯಕರ್ತನೊಬ್ಬ ಈ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎನ್ನುವ ನನ್ನ ಕನಸು ಇನ್ನೂ ಈಡೇರಿಲ್ಲ ಎಂದು ಅವರು ಹೇಳುತ್ತಿದ್ದರು" ಎಂದು ಠಾಕ್ರೆ ಬಹಿರಂಗಪಡಿಸಿದರು.

"ನನಗೆ ರಾಜಕೀಯ ಒಲವು ಇರಲಿಲ್ಲ. ತಂದೆಗೆ ಸಹಾಯ ಮಾಡುವ ಸಲುವಾಗಿ ರಾಜಕೀಯಕ್ಕೆ ಬಂದೆ. 100 ವರ್ಷಗಳ ಬಳಿಕ ಭೀಕರ ಸಾಂಕ್ರಾಮಿಕ ನನ್ನ ಆಡಳಿತಾವಧಿಯಲ್ಲಿ ಬಂತು. ನಾನು ನನ್ನ ಹೊಣೆಗಾರಿಕೆಯಿಂದ ಓಡಿಹೋಗುವುದಿಲ್ಲ. ನನ್ನಿಂದ ಸಾಧ್ಯವಾದಷ್ಟೂ ಕೆಲಸ ಮಾಡುತ್ತಿದ್ದೇನೆ" ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News