ಆನ್ ಲೈನ್ ಜಾಹೀರಾತಿನಲ್ಲಿ ಪ್ರಭಾವದ ದುರುಪಯೋಗ: ಗೂಗಲ್ ಗೆ 1,945 ಕೋಟಿ ರೂ. ದಂಡ ವಿಧಿಸಿದ ಫ್ರಾನ್ಸ್

Update: 2021-06-07 15:51 GMT

ಪ್ಯಾರಿಸ್ (ಫ್ರಾನ್ಸ್), ಜೂ. 7: ಇಂಟರ್ನೆಟ್ ನಲ್ಲಿ ಜಾಹೀರಾತುಗಳನ್ನು ಹಾಕುವಾಗ ಗೂಗಲ್ ತನ್ನ ಮಾರುಕಟ್ಟೆ ಪ್ರಭಾವವನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಆರೋಪಿಸಿ ಫ್ರಾನ್ಸ್ ಗೂಗಲ್ ಗೆ ಸೋಮವಾರ 220 ಮಿಲಿಯ ಯುರೋ (ಸುಮಾರು 1,945 ಕೋಟಿ ರೂಪಾಯಿ) ದಂಡ ವಿಧಿಸಿದೆ.

ಆನ್ ಲೈನ್ ಜಾಹೀರಾತುಗಳ ಮಾರಾಟದಲ್ಲಿ ಗೂಗಲ್ ಏಕಸ್ವಾಮ್ಯವನ್ನು ಹೊಂದಿದೆ ಎಂಬುದಾಗಿ ನ್ಯೂಸ್ ಕಾರ್ಪ್, ಫ್ರೆಂಚ್ ದಿನಪತ್ರಿಕೆ ಲೆ ಫಿಗರೊ ಮತ್ತು ಬೆಲ್ಜಿಯಮ್ ನ ಗ್ರೂಪ್ ರೊಸೆಲ್ ಎಂಬ ಮಾಧ್ಯಮ ಗುಂಪುಗಳು ಆರೋಪಿಸಿದ ಬಳಿಕ ಗೂಗಲ್ ಗೆ ಈ ಬೃಹತ್ ಮೊತ್ತದ ದಂಡವನ್ನು ವಿಧಿಸಲಾಗಿದೆ.

ಗೂಗಲ್ ತನ್ನದೇ ಆಗಿರುವ ಜಾಹೀರಾತು ಹರಾಜು ವೇದಿಕೆಗಳಾದ ಎಡಿಎಕ್ಸ್ ಮತ್ತು ಡಬಲ್‌ ಕ್ಲಿಕ್ ಆ್ಯಡ್ ಎಕ್ಸ್ ಚೇಂಜ್ ಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂಬುದಾಗಿ ಫ್ರಾನ್ಸ್ ನ ಏಕಸ್ವಾಮ್ಯ ನಿಗ್ರಹ ಸಂಸ್ಥೆ ನಿರ್ಧರಿಸಿದೆ.

ಎದುರಾಳಿ ವೇದಿಕೆಗಳನ್ನು ಬಳಸಿ ಇಂಟರ್ನೆಟ್ ಸೈಟ್ ಗಳು ಅಥವಾ ಮೊಬೈಲ್ ಆ್ಯಪ್ ಗಳಲ್ಲಿ ಜಾಹೀರಾತು ನೀಡಲು ಬಯಸುವವರಿಗೆ ಇದು ಗೂಗಲ್ ವೇದಿಕೆಗಳಿಗಿಂತ ಹೆಚ್ಚು ವೆಚ್ಚದಾಯಕ ಎಂದು ಅನಿಸುತ್ತದೆ ಎಂದು ಅದು ಹೇಳಿದೆ. ನಾವು ಕಂಡುಕೊಂಡ ಅಂಶಗಳನ್ನು ಗೂಗಲ್ ಪ್ರಶ್ನಿಸಿಲ್ಲ ಹಾಗೂ ಈ ಪ್ರಕ್ರಿಯೆಯಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳುವುದಾಗಿ ಹೇಳಿದೆ ಎಂದು ಅದು ಹೇಳಿದೆ‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News