ಚೋಕ್ಸಿ ‘ಅಪಹರಣ’ದ ಬಗ್ಗೆ ತನಿಖೆಗೆ ಆದೇಶ: ಆ್ಯಂಟಿಗ ಮತ್ತು ಬಾರ್ಬುಡ ಪ್ರಧಾನಿ

Update: 2021-06-07 16:15 GMT

ಸೇಂಟ್ ಜೋನ್ಸ್ (ಆ್ಯಂಟಿಗ ಮತ್ತು ಬಾರ್ಬುಡ), ಜೂ. 7: ಭಾರತದ ಬ್ಯಾಂಕ್ ಗಳಿಗೆ ವಂಚಿಸಿ ಅಲ್ಲಿಂದ ಪರಾರಿಯಾಗಿರುವ ವಜ್ರದ ವ್ಯಾಪಾರಿ ಮೆಹುಲ್ ಚೋಕ್ಸಿಯನ್ನು ನೆರೆಯ ಡೊಮಿನಿಕ ದೇಶಕ್ಕೆ ಅಪಹರಿಸಲಾಗಿದೆ ಎಂಬುದಾಗಿ ಅವರ ವಕೀಲರು ದೂರು ನೀಡಿದ ಬಳಿಕ ಆ್ಯಂಟಿಗ ಮತ್ತು ಬಾರ್ಬುಡ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಪ್ರಧಾನಿ ಗ್ಯಾಸ್ಟನ್ ಬ್ರೌನ್ ಹೇಳಿದ್ದಾರೆ.

ಅಪಹರಣದಲ್ಲಿ ಶಾಮೀಲಾಗಿರುವರೆನ್ನಲಾದ ವ್ಯಕ್ತಿಗಳ ಹೆಸರುಗಳನ್ನು ಪೊಲೀಸ್ ಕಮಿಶನರ್ ಗೆ ಸಲ್ಲಿಸಿರುವ ದೂರಿನಲ್ಲಿ ಚೋಕ್ಸಿಯ ವಕೀಲರು ನೀಡಿದ್ದಾರೆ ಎಂದು ಪ್ರಧಾನಿ ಬ್ರೌನ್ ಹೇಳಿದ್ದಾರೆ ಎಂದು ಆ್ಯಂಟಿಗ ನ್ಯೂಸ್ ರೂಮ್ ಸುದ್ದಿಸಂಸ್ಥೆ ವರದಿ ಮಾಡಿದೆ.
ಆರೋಪಗಳು ನಿಜವೆಂದು ಸಾಬೀತಾರೆ, ಅದು ಗಂಭೀರ ವಿಷಯವಾಗಿದೆ ಎಂದು ಪ್ರಧಾನಿ ಹೇಳಿದರು.

ಪೊಲೀಸರು ದೂರನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಪ್ರಧಾನಿ ಬ್ರೌನ್ ತಿಳಿಸಿದರು. ‘‘ತನ್ನನ್ನು ಅಪಹರಿಸಲಾಗಿದೆ ಎಂಬುದಾಗಿ ಆರೋಪಿಸಿ ಚೋಕ್ಸಿ ಆ್ಯಂಟಿಗ ಮತ್ತು ಬಾರ್ಬುಡದ ರಾಯಲ್ ಪೊಲೀಸ್ ಪಡೆಯಲ್ಲಿ ದೂರು ದಾಖಲಿಸಿದ್ದಾರೆ. ತನ್ನನ್ನು ಆ್ಯಂಟಿಗದಿಂದ ಅಪಹರಿಸಿ ಡೋಮಿನಿಕಕ್ಕೆ ಕರೆದೊಯ್ಯಲಾಗಿದೆ ಎಂಬುದಾಗಿ ಚೋಕ್ಸಿ ತನ್ನ ವಕೀಲರ ಮೂಲಕ ಹೇಳಿಕೆ ನೀಡಿದ್ದಾರೆ. ಹಾಗಾಗಿ ಪೊಲೀಸರು ಆ ದೂದರನ್ನು ಗಂಭೀರವಾಗಿ ಪರಿಗಣಿಸಿದ್ದಾರೆ ಹಾಗೂ ಅದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ’’ ಎಂದು ಪ್ರಧಾನಿ ಬ್ರೌನ್ ಹೇಳಿದರು. ಮೆಹುಲ್ ಚೋಕ್ಸಿ ಈಗ ಡೋಮಿನಕದಲ್ಲಿ ಪೊಲೀಸರ ಬಂಧನದಲ್ಲಿದ್ದಾರೆ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News