ನಾಯಕತ್ವ ಬದಲಾವಣೆ ಮುತ್ಸದ್ದಿತನವಲ್ಲ

Update: 2021-06-09 09:10 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

‘ವರಿಷ್ಠರು ಸೂಚಿಸಿದರೆ ರಾಜೀನಾಮೆ ನೀಡಲು ಸಿದ್ಧ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆ ನೀಡಿರುವುದು, ‘ರಾಜೀನಾಮೆ’ಯ ರೆಕ್ಕೆ ಪುಕ್ಕಗಳಿಗೆ ಮಾಂಸವೂ ಒದಗಿದಂತಾಗಿದೆ. ರಾಜ್ಯದಲ್ಲಿ ನಾಯಕತ್ವ ಬದಲಾವಣೆಗಾಗಿ ಒತ್ತಡಗಳು ಹೆಚ್ಚುತ್ತಿರುವುದು ನಿಜ ಎನ್ನುವುದನ್ನು ಅವರೇ ಪರೋಕ್ಷವಾಗಿ ಈ ಮೂಲಕ ಒಪ್ಪಿಕೊಂಡಿದ್ದಾರೆ. ಹಾಗೆಂದು ಅವರು ರಾಜೀನಾಮೆ ನೀಡುವುದಕ್ಕೆ ಸಿದ್ಧ ಎಂದೇನೂ ಹೇಳಿಲ್ಲ. ಆ ಹೇಳಿಕೆಯ ಮೂಲಕ ಅವರು ಭಿನ್ನಮತೀಯರಿಗೆ ಸವಾಲು ಹಾಕಿದ್ದಾರೆ. ‘ನೀವು ಹೇಳಿದರೆ ರಾಜೀನಾಮೆ ನೀಡಲು ಸಾಧ್ಯವಿಲ್ಲ, ವರಿಷ್ಠರ ಕೈಯಲ್ಲಿ ನಿಮಗೆ ತಾಕತ್ತಿದ್ದರೆ ಹೇಳಿಸಿ’ ಎಂಬ ಸವಾಲಿನ ಧ್ವನಿ ಅದರಲ್ಲಿದೆ. ವರಿಷ್ಠರಿಗೂ ಯಡಿಯೂರಪ್ಪ ಅವರನ್ನು ಇಳಿಸುವುದಕ್ಕೆ ಮನಸ್ಸಿಲ್ಲದೇ ಅಲ್ಲ. ಯಡಿಯೂರಪ್ಪ ಎನ್ನುವ ಗಂಟಲ ಮುಳ್ಳನ್ನು ನಾಜೂಕಾಗಿ ಹೊಟ್ಟೆಗಿಳಿಸಿಕೊಂಡು, ಸಹಜವಾಗಿ ವಿಸರ್ಜಿಸುವ ಪ್ರಯತ್ನದಲ್ಲಿ ಅವರಿದ್ದಾರೆ. ಯಡಿಯೂರಪ್ಪ ಅವರ ಬೆನ್ನಿಗಿರುವ ಜಾತಿ ಬೆಂಬಲ ವರಿಷ್ಠರಿಗೆ ಅತಿ ದೊಡ್ಡ ಸವಾಲಾಗಿದೆ. ಲಿಂಗಾಯತ ಜಾತಿ ಇಂದು ಬಿಜೆಪಿಯ ಜೊತೆಗಿದ್ದರೆ ಅದಕ್ಕೆ ಮುಖ್ಯ ಕಾರಣ ಯಡಿಯೂರಪ್ಪ.

ಯಡಿಯೂರಪ್ಪ ಅವರನ್ನು ಕಿತ್ತು ಹಾಕಿದರೆ ಅಥವಾ ರಾಜೀನಾಮೆ ಕೊಡಿಸಿದರೆ ಅದು ರಾಜ್ಯ ಬಿಜೆಪಿಯ ಮೇಲೆ ಸರಿಪಡಿಸಲಾಗದಷ್ಟು ದುಷ್ಪರಿಣಾಮ ಬೀರಬಹುದು ಎನ್ನುವ ಭಯ ವರಿಷ್ಠರಿಗಿದೆ. ರಾಜ್ಯದಲ್ಲಿ ನಡೆಯುತ್ತಿರುವುದು ಲಿಂಗಾಯತ-ಬ್ರಾಹ್ಮಣ ಲಾಬಿಗಳ ನಡುವಿನ ಮುಸುಕಿನ ಗುದ್ದಾಟದ ಮುಂದುವರಿದ ಭಾಗ. ಈ ಹಿಂದೆ ಹಲವು ಬಾರಿ ಯಡಿಯೂರಪ್ಪರ ಸ್ಥಾನಕ್ಕೆ ಬ್ರಾಹ್ಮಣ ಸಮುದಾಯದ ಮುಖಂಡರನ್ನು ತಂದು ಕೂರಿಸುವ ವಿಫಲ ಪ್ರಯತ್ನಗಳನ್ನು ಆರೆಸ್ಸೆಸ್ ಮಾಡಿತ್ತು. ಒಂದು ಹಂತದಲ್ಲಿ ಯಡಿಯೂರಪ್ಪ ಅವರು ಬಹಿರಂಗವಾಗಿಯೇ ಆರೆಸ್ಸೆಸ್ ವಿರುದ್ಧ್ದ ಅಸಮಾಧಾನ ವ್ಯಕ್ತಪಡಿಸಿದ್ದರು. ಸಾಧಾರಣವಾಗಿ ಬ್ರಾಹ್ಮಣ ರಾಜಕೀಯ ಲಾಬಿಯ ಹಿಂದಿರುವವರು ಬಹಿರಂಗವಾಗಿ ಕಾಣಿಸಿಕೊಳ್ಳುವುದಿಲ್ಲ. ನೇರ ತಿಕ್ಕಾಟಕ್ಕಿಳಿಯದೇ ಶೂದ್ರರ ಮೂಲಕವೇ ತಮ್ಮ ರಾಜಕೀಯ ಉದ್ದೇಶಗಳನ್ನು ಸಾಧಿಸಿಕೊಳ್ಳುತ್ತಾ ಬರುತ್ತಾರೆ. ಯಡಿಯೂರಪ್ಪರನ್ನು ವರಿಷ್ಠರು ಕಿತ್ತು ಹಾಕಿದಲ್ಲಿ ಅವರು ಲಿಂಗಾಯತ ಜಾತಿಯನ್ನು ಮುಂದಿಟ್ಟು ಆರೆಸ್ಸೆಸ್ ಮತ್ತು ಬ್ರಾಹ್ಮಣ ರಾಜಕೀಯ ಲಾಬಿಗಳ ವಿರುದ್ಧ ಬಹಿರಂಗ ಕದನಕ್ಕಿಳಿಯುವ ಅಪಾಯದ ಅರಿವು ಆರೆಸ್ಸೆಸ್‌ಗೂ ಇದೆ. ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ರಾಜ್ಯದಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಇದೆ. ಒಂದು ವೇಳೆ ಯಡಿಯೂರಪ್ಪ ಅವರನ್ನು ಬಿಜೆಪಿ ಮೂಲೆಗುಂಪು ಮಾಡಿದ್ದೇ ಆದಲ್ಲಿ, ಬಿಜೆಪಿಯೊಳಗಿರುವ ಲಿಂಗಾಯತರ ಒಂದು ದೊಡ್ಡ ಗುಂಪು ಬಿಜೆಪಿ ಮತ್ತು ಆರೆಸ್ಸೆಸ್ ವಿರುದ್ಧ ಸಿಡಿದು ನಿಲ್ಲುವ ಎಲ್ಲ ಸಾಧ್ಯತೆಗಳಿವೆ.

ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಆರೆಸ್ಸೆಸ್ ಈ ಬಾರಿಯೂ ಮರೆಯಲ್ಲಿ ನಿಂತು ಕೆಲಸ ಮಾಡುತ್ತಿದೆ. ಭಿನ್ನಮತೀಯರಿಗೆ ಧೈರ್ಯ ತುಂಬುವ, ವರಿಷ್ಠರ ಬಳಿ ದೂರು ಕೊಂಡೊಯ್ಯಲು ಪ್ರೇರೇಪಿಸುವ ಕೆಲಸವನ್ನು ದಿಲ್ಲಿಯಲ್ಲೇ ಕುಳಿತು ಕೆಲವರು ಮಾಡುತ್ತಿದ್ದಾರೆ. ಅವರಿಗೀಗ ಸಮಸ್ಯೆ ಯಡಿಯೂರಪ್ಪ ಅಲ್ಲವೇ ಅಲ್ಲ. ಯಡಿಯೂರಪ್ಪ ಅವರ ಸ್ಥಾನವನ್ನು ತುಂಬಲು ಯತ್ನಿಸುತ್ತಿರುವ ಅವರ ಪುತ್ರ ವಿಜಯೇಂದ್ರರಿಂದ ಹೆಚ್ಚು ಆತಂಕಗೊಂಡಿದ್ದಾರೆ. ಇನ್ನೇನು ಎರಡು ವರ್ಷದಲ್ಲಿ ಯಡಿಯೂರಪ್ಪ ಅವರ ಮುಖ್ಯಮಂತ್ರಿ ಅವಧಿ ಮುಗಿದರೆ ಅವರನ್ನು ‘ಹಿರಿತನ’ದ ಆಧಾರದಲ್ಲಿ ಮನೆಗೆ ಕಳುಹಿಸಿ, ಬಳಿಕ ರಾಜ್ಯದ ಚುಕ್ಕಾಣಿಯನ್ನು ಪೂರ್ಣವಾಗಿ ತನ್ನ ಕೈವಶ ಮಾಡಿಕೊಳ್ಳುವುದು ಆರೆಸ್ಸೆಸ್ ಮುಖಂಡರ ಈವರೆಗಿನ ಲೆಕ್ಕಾಚಾರವಾಗಿತ್ತು. ಆದರೆ ಸರಕಾರದೊಳಗಿದ್ದು ವಿಜಯೇಂದ್ರ ಬೆಳೆಯುತ್ತಿರುವ ರೀತಿಗೆ ಅವರೀಗ ಕಂಗಾಲಾಗಿದ್ದಾರೆ. ಯಡಿಯೂರಪ್ಪರ ರಾಜಕೀಯ ಶಕ್ತಿಯನ್ನು ಬಳಸಿಕೊಂಡು ಯುವ ನಾಯಕನೂ ಆಗಿರುವ ವಿಜಯೇಂದ್ರ ಮುಖ್ಯಮಂತ್ರಿ ಅಭ್ಯರ್ಥಿಯಾದರೆ, ಆರೆಸ್ಸೆಸ್‌ನ ಕನಸು ಶಾಶ್ವತವಾಗಿ ನುಚ್ಚು ನೂರಾಗುತ್ತದೆ.

ಮುಂದಿನ ಎರಡು ವರ್ಷ ಯಡಿಯೂರಪ್ಪ ಅವರು ಮುಂದುವರಿದದ್ದೇ ಆದರೆ, ಯಡಿಯೂರಪ್ಪ ಅವರ ಜೊತೆ ಜೊತೆಗೆ ವಿಜಯೇಂದ್ರ ಸರ್ವ ರೀತಿಯಲ್ಲೂ ಬೆಳೆಯುವ ಸಾಧ್ಯತೆಗಳಿವೆ. ಆದುದರಿಂದಲೇ ಹೇಗಾದರೂ ಮಾಡಿ ಯಡಿಯೂರಪ್ಪ ಅವರನ್ನು ಆರೆಸ್ಸೆಸ್‌ಗೆ ತುರ್ತಾಗಿ ಕೆಳಗಿಳಿಸಬೇಕಾಗಿದೆ. ಇಲ್ಲವಾದರೆ, ಕೊರೋನದ ಈ ಸಂಕಟ ಕಾಲದಲ್ಲಿ ನಾಯಕತ್ವ ಬದಲಾವಣೆಯ ಕೂಗನ್ನು ಎಬ್ಬಿಸುವ ಧೈರ್ಯ ಕೆಲವು ಶಾಸಕರಿಗೆ ಬರುತ್ತಿರಲಿಲ್ಲ. ‘ವರಿಷ್ಠರು ಸೂಚನೆ ನೀಡಿದರೆ ರಾಜೀನಾಮೆ ನೀಡಲು ಸಿದ್ಧ’ ಎಂಬ ಯಡಿಯೂರಪ್ಪ ಅವರ ಹೇಳಿಕೆ ತಲುಪ ಬೇಕಾದವರಿಗೆ ತಲುಪಿದೆ. ತನ್ನ ವಿರುದ್ಧ ನಡೆಯುತ್ತಿರುವ ಸಹಿಸಂಗ್ರಹಕ್ಕೆ ಪ್ರತಿಯಾಗಿ ಯಡಿಯೂರಪ್ಪ ಅವರೂ ಸಹಿಸಂಗ್ರಹಿಸಲು ಮುಂದಾಗಿದ್ದಾರೆ. ಪರಿಣಾಮವಾಗಿ, ‘ಮುಖ್ಯಮಂತ್ರಿ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಅಶೋಕ್, ನಳಿನ್ ಕುಮಾರ್ ಕಟೀಲು, ಈಶ್ವರಪ್ಪ ಮೊದಲಾದವರು ಸ್ಪಷ್ಟನೆ ನೀಡುತ್ತಿದ್ದಾರೆ. ಇದರ ಅರ್ಥ, ಭಿನ್ನಮತದಲ್ಲಿ ನಮ್ಮ ಪಾತ್ರ ಇಲ್ಲ ಎನ್ನುವುದನ್ನು ಯಡಿಯೂರಪ್ಪರಿಗೆ ಮನವರಿಕೆ ಮಾಡಿಸುವುದಷ್ಟೇ ಆಗಿದೆ.

ಒಳಗೊಳಗೆ ಈ ಎಲ್ಲ ನಾಯಕರೂ ಯಡಿಯೂರಪ್ಪ ಅವರನ್ನು ಕೆಳಗಿಳಿಸಲು ಭಿನ್ನಮತೀಯರಿಗೆ ಕುಮ್ಮಕ್ಕು ನೀಡುತ್ತಿರುವವರೇ. ಇದೇ ಸಂದರ್ಭದಲ್ಲಿ ಅಶ್ಲೀಲ ಸೀಡಿ ಮತ್ತು ವಿಜಯೇಂದ್ರ ಅವರ ಭ್ರಷ್ಟಾಚಾರಗಳನ್ನು ಮುಂದಿಟ್ಟುಕೊಂಡು ಯಡಿಯೂರಪ್ಪ ಅವರನ್ನು ಕೆಳಗಿಳಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ಆದುದರಿಂದಲೇ, ಕೆಲವು ನಾಯಕರು ಯಡಿಯೂರಪ್ಪ ರಾಜೀನಾಮೆಯ ಕುರಿತಂತೆ ಇನ್ನೂ ಆಶಾದಾಯಕವಾಗಿದ್ದಾರೆ. ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ಅಪ್ಪ ಮಗನನ್ನು ಬೆದರಿಸಿ ಮೂಲೆಗುಂಪು ಮಾಡುವ ಕಟ್ಟ ಕಡೆಯ ಪ್ರಯತ್ನವೂ ಬಿಜೆಪಿಯೊಳಗೆ ನಡೆಯುತ್ತಿದೆ. ಜೊತೆಗೆ ‘ಯಡಿಯೂರಪ್ಪ ಅವರ ಆರೋಗ್ಯ ಸರಿಯಿಲ್ಲ, ಅವರಿಗೆ ಮರೆವಿನ ಕಾಯಿಲೆ ಬಂದಿದೆ’ ಎಂಬ ವದಂತಿಯನ್ನೂ ಆರೆಸ್ಸೆಸ್ ಐಟಿ ಸೆಲ್ ವ್ಯಾಪಕವಾಗಿ ಹರಡುತ್ತಿದೆ. ವಿಷಾದಕರ ಸಂಗತಿಯೆಂದರೆ, ಇಂದು ಈ ನಾಯಕತ್ವ ಬದಲಾವಣೆಗಳು ನಡೆಯುತ್ತಿರುವುದು ಕೊರೋನ ನಿರ್ವಹಣೆಯ ವೈಫಲ್ಯವನ್ನು ಮುಂದಿಟ್ಟು ಅಲ್ಲ. ಕೊರೋನ ಮತ್ತು ಲಾಕ್‌ಡೌನ್‌ನಿಂದ ಜನರು ಪಡುತ್ತಿರುವ ಕಷ್ಟಗಳು ಯಾರಿಗೂ ಬೇಡವಾಗಿದೆ.

ತಮ್ಮ ತಮ್ಮ ಸ್ವಾರ್ಥಗಳಿಗಾಗಿ ಇವರಿಗೆಲ್ಲ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯಾಗಬೇಕಾಗಿದೆ. ಸದ್ಯದ ಸ್ಥಿತಿಯಲ್ಲಿ ಯಡಿಯೂರಪ್ಪ ಅವರ ಸ್ಥಾನಕ್ಕೆ ಯಾರನ್ನೇ ತಂದು ಕೂರಿಸಿದರೂ, ರಾಜ್ಯಕ್ಕೆ ಅದರಿಂದ ಯಾವ ಪ್ರಯೋಜನವೂ ಆಗದು. ನಾಡಿನ ಸಂಕಟಗಳನ್ನು ಕೇಂದ್ರದ ಮುಂದೆ ತೋಡಿಕೊಳ್ಳಲು ಹೆದರುವ ಗುಲಾಮಿ ಮನಸ್ಥಿತಿಯ ಸಂಸದರಿರುವವರೆಗೆ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ನಡೆಯುವುದು ಕಷ್ಟ. ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಪರಿಹಾರದ ಹಣವಾದರೂ ಬಂದಿದ್ದರೆ ರಾಜ್ಯದ ಜನರ ಸ್ಥಿತಿ ಹೀಗಿರುತ್ತಿರಲಿಲ್ಲವೇನೋ. ಒಂದೆಡೆ, ಕೇಂದ್ರದ ಮಲತಾಯಿ ಧೋರಣೆ, ಮಗದೊಂದೆಡೆ ಸರಕಾರದೊಳಗಿರುವ ತನ್ನದೇ ಜನರಿಂದ ಅಡೆತಡೆಗಳು, ತಂದೆಯ ವರ್ಚಸ್ಸನ್ನು ಸರ್ವ ರೀತಿಯಲ್ಲಿ ಬಳಸಿ ರಾಜಕೀಯವಾಗಿ ಮುನ್ನೆಲೆಗೆ ಬರಲು ಪ್ರಯತ್ನಿಸುತ್ತಿರುವ ಮಗ ಇವೆಲ್ಲದರ ನಡುವೆ ಯಡಿಯೂರಪ್ಪ ಸಮರ್ಥವಾದ ಆಡಳಿತ ನೀಡುವುದು ಕಷ್ಟ. ಕೋಮುದ್ವೇಷವನ್ನು ಹಚ್ಚಿ, ಅದರ ಮರೆಯಲ್ಲೇ ಬೆಡ್ ಬ್ಲಾಕ್ ದಂಧೆಯಲ್ಲಿ ತೊಡಗಿರುವ ನಾಯಕರಲ್ಲೊಬ್ಬ ಬಂದು ಮುಖ್ಯಮಂತ್ರಿ ಗಾದಿಯನ್ನೇರಿದರೆ, ಕೊರೋನ ವೈರಸ್ ಜೊತೆಗೆ ಕೋಮು ವೈರಸ್‌ಗಳಿಗೂ ಅಂಜುತ್ತಾ ಜನರು ಶಾಶ್ವತವಾಗಿ ಮನೆಯೊಳಗೆ ಬಂದಿಯಾಗಬೇಕಾದೀತು. ಆದುದರಿಂದ ನಾಯಕತ್ವ ಬದಲಾವಣೆ ನಾಡಿನ ಅಗತ್ಯವಲ್ಲ. ಇರುವ ನಾಯಕನಿಗೆ ಆಡಳಿತ ನಡೆಸಲು ಸರಕಾರದೊಳಗಿರುವವರು ಸಹಕರಿಸುವುದೇ ಸದ್ಯದ ಅಗತ್ಯ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News