ಕೊಲೋನಿಯಲ್ ಪೈಪ್ ಲೈನ್‌ ನ ಒತ್ತೆಹಣ ವಶದ ಬಳಿಕ ಬಿಟ್ಕಾಯಿನ್ ಮೌಲ್ಯ ಕುಸಿತ

Update: 2021-06-09 16:43 GMT
photo :twitter (@GoodvibrasCom)

ನ್ಯೂಯಾರ್ಕ್, ಜೂ. 9: ಸೈಬರ್ ಕನ್ನಗಾರರಿಗೆ ಅಮೆರಿಕದ ಬೃಹತ್ ತೈಲ ಪೈಪ್ ಲೈನ್‌ ಕಂಪೆನಿಯಾಗಿರುವ ಕೊಲೋನಿಯಲ್ ಪೈಪ್ ಲೈನ್‌ ಕಂಪೆನಿಯು ಬಿಟ್ಕಾಯಿನ್ ರೂಪದಲ್ಲಿ ಪಾವತಿಸಿದ ಒತ್ತೆಹಣವನ್ನು ಅಮೆರಿಕದ ತನಿಖಾ ಸಂಸ್ಥೆ ಎಫ್ಬಿಐ ವಶಪಡಿಸಿಕೊಂಡ ಬೆನ್ನಿಗೇ ಬಿಟ್ಕಾಯಿನ್ ವೌಲ್ಯವು ಎರಡು ವಾರಗಳ ಹಿಂದಿನ ಮಟ್ಟಕ್ಕೆ ಕುಸಿದಿದೆ.

ಕ್ರಿಪ್ಟೊ ಕರೆನ್ಸಿಯು ಸರಕಾರದ ನಿಯಂತ್ರಣದಿಂದ ಹೊರತಾಗಿಲ್ಲ ಎನ್ನುವುದು ಬಹಿರಂಗವಾಗುತ್ತಲೇ ಬಿಟ್ಕಾಯಿನ್ ಮೌಲ್ಯ ಇಳಿದಿದೆ. ನ್ಯೂಯಾರ್ಕ್ ಮಾರುಕಟ್ಟೆಯಲ್ಲಿ ಬಿಟ್ಕಾಯಿನ್ ಮೌಲ್ಯವು 9.9 ಶೇಕಡದಷ್ಟು ಅಂದರೆ 31,036 ಡಾಲರ್ (ಸುಮಾರು 22.63 ಲಕ್ಷ ರೂಪಾಯಿ)ಗೆ ಕುಸಿದಿದೆ.

‘‘ಪತ್ತೆಹಚ್ಚಲು ಸಾಧ್ಯವಾಗದ ಹಣ ಎಂದು ಹೇಳಲಾಗಿರುವ ಕ್ರಿಪ್ಟೊಕರೆನ್ಸಿಯನ್ನು ಎಫ್ಬಿಐ ತನಿಖಾಧಿಕಾರಿಗಳು ಪತ್ತೆಹಚ್ಚಬಲ್ಲರಾದರೆ, ಕರೆನ್ಸಿಯು ಸ್ವತಂತ್ರವಾಗಿದೆ ಹಾಗೂ ಸರಕಾರದ ನಿಯಂತ್ರಣಮುಕ್ತವಾಗಿದೆ ಎಂಬ ವಿವರಣೆಗೆ ಅರ್ಥವಿಲ್ಲ’’ ಎಂದು ಹಿರಿಯ ಮಾರುಕಟ್ಟೆ ವಿಶ್ಲೇಷಕ ಜೆಫ್ರಿ ಹ್ಯಾಲಿ ಹೇಳುತ್ತಾರೆ.

ಕಳೆದ ತಿಂಗಳು ಕೊಲೋನಿಯಲ್ ಪೈಪ್ ಲೈನ್‌ ನ ಕಂಪ್ಯೂಟರ್ ವ್ಯವಸ್ಥೆಯ ಮೇಲೆ ದಾಳಿ ಮಾಡಿ ಅದನ್ನು ಸ್ಥಗಿತಗೊಳಿಸಿದ ಸೈಬರ್ ಕನ್ನಗಾರರಿಗೆ ಪೈಪ್ ಲೈನ್‌ ಕಂಪೆನಿಯು ಸುಮಾರು 32 ಕೋಟಿ ರೂಪಾಯಿ ಮೊತ್ತವನ್ನು ಬಿಟ್‌ ಕಾಯಿನ್ ರೂಪದಲ್ಲಿ ಪಾವತಿಸಿತ್ತು. ಎಫ್ಬಿಐ ತನಿಖಾಧಿಕಾರಿಗಳು ಬಹುತೇಕ ಆ ಮೊತ್ತವನ್ನು ವಶಪಡಿಸಿಕೊಂಡಿದ್ದಾರೆ.

ಬಿಟ್ ಕಾಯಿನ್ ಗೆ ಮಾನ್ಯತೆ ನೀಡಿದ ಎಲ್ ಸಾಲ್ವಡೋರ್
ಸಾನ್ ಸಾಲ್ವಡೋರ್ (ಎಲ್ ಸಾಲ್ವಡೋರ್): ಬಿಟ್ ಕಾಯಿನ್ ಅನ್ನು ಕಾನೂನುಬದ್ಧ ಕರೆನ್ಸಿಯಾಗಿ ಪರಿಗಣಿಸಬೇಕೆಂಬ ಅಧ್ಯಕ್ಷ ನಯೀಬ್ ಬುಕೆಲೆಯ ಪ್ರಸ್ತಾವಕ್ಕೆ ಎಲ್ ಸಾಲ್ವಡೋರ್ ಅಂಗೀಕಾರ ನೀಡಿದೆ. ಇದರೊಂದಿಗೆ ಮಧ್ಯ ಅಮೆರಿಕದ ಈ ದೇಶವು 

ಕ್ರಿಪ್ಟೊಕರೆನ್ಸಿಗೆ ಮಾನ್ಯತೆ ನೀಡಿದ ಜಗತ್ತಿನ ಮೊದಲ ದೇಶವಾಗಿದೆ. ಬಿಟ್ಕಾಯಿನ್ ಕ್ರಿಪ್ಟೊಕರೆನ್ಸಿಯ ಒಂದು ಭಾಗವಾಗಿದೆ. ಈ ಸಂಬಂಧ ಕಾನೂನು ರೂಪಿಸುವ ಪ್ರಕ್ರಿಯೆಗೆ ಚಾಲನೆ ನೀಡುವ ಪ್ರಸ್ತಾವದ ಪರವಾಗಿ ಮಂಗಳವಾರ ಹೆಚ್ಚಿನ ಸಂಸದರು ಮತ ಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News