ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್ಕೊ ಸಿಂಗ್ ನಿಧನ
ಹೊಸದಿಲ್ಲಿ: ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ವಿಜೇತ ಮಾಜಿ ಬಾಕ್ಸರ್ ಡಿಂಗ್ಕೊ ಸಿಂಗ್ ಪಿತ್ತಜನಕಾಂಗದ ಕ್ಯಾನ್ಸರ್ ವಿರುದ್ಧದ ಸುದೀರ್ಘ ಹೋರಾಟದ ನಂತರ ಗುರುವಾರ ನಿಧನರಾದರು. ಅವರಿಗೆ 42 ವರ್ಷ ವಯಸ್ಸಾಗಿತ್ತು 2017 ರಿಂದ ಈ ಕಾಯಿಲೆಯ ವಿರುದ್ಧ ಹೋರಾಡುತ್ತಿದ್ದರು.
" ಡಿಂಗ್ಕೊ ಸಿಂಗ್ ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ಭಾರತ ಇದುವರೆಗೆ ಕಂಡ ಅತ್ಯುತ್ತಮ ಬಾಕ್ಸರ್ ಗಳಲ್ಲಿ ಒಬ್ಬರಾಗಿದ್ದ ಸಿಂಗ್ 1998 ರ ಬ್ಯಾಂಕಾಕ್ ಏಷ್ಯನ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಜಯಿಸಿದ್ದರು. ದುಃಖಿತ ಕುಟುಂಬಕ್ಕೆ ನನ್ನ ಪ್ರಾಮಾಣಿಕ ಸಂತಾಪವನ್ನು ಅರ್ಪಿಸುತ್ತೇನೆ. ಆರ್ ಐಪಿ ಡಿಂಗ್ಕೊ "ಎಂದು ಕ್ರೀಡಾ ಸಚಿವ ಕಿರಣ್ ರಿಜಿಜು ಟ್ವೀಟ್ ಮಾಡಿದ್ದಾರೆ.
ಡಿಂಗ್ಕೊ 1998 ರಲ್ಲಿ ಏಷ್ಯನ್ ಗೇಮ್ಸ್ ಚಿನ್ನ ಗೆದ್ದಿದ್ದರು ಹಾಗೂ ಅದೇ ವರ್ಷ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಅವರು ಕ್ರೀಡೆಯಲ್ಲಿ ನೀಡಿದ ಕೊಡುಗೆಗಾಗಿ 2013 ರಲ್ಲಿ ಪದ್ಮಶ್ರೀ ಪ್ರಶಸ್ತಿಯಿಂದ ಗೌರವಿಸಲ್ಪಟ್ಟಿದ್ದರು.
ನೌಕಾಪಡೆಯಲ್ಲಿ ಉದ್ಯೋಗದಲ್ಲಿದ್ದ ಡಿಂಗ್ಕೊ ನಿವೃತ್ತಿಯ ನಂತರ ಕೋಚಿಂಗ್ ನಲ್ಲಿ ತೊಡಗಿಸಿಕೊಂಡಿದ್ದರು.