ಬ್ಲಾಕ್ ಫಂಗಸ್ ಚಿಕಿತ್ಸೆಯಲ್ಲಿ ಯುವಕರಿಗೆ ಆದ್ಯತೆ ನೀಡಿ: ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಸೂಚನೆ

Update: 2021-06-10 18:20 GMT

ಹೊಸದಿಲ್ಲಿ, ಜೂ. 10: ಅತ್ಯಧಿಕ ಸಂಖ್ಯೆಯಲ್ಲಿ ಸಾವಿಗೆ ಕಾರಣವಾಗುತ್ತಿರುವ ಬ್ಲಾಕ್ ಫಂಗಸ್ ನ ಚಿಕಿತ್ಸೆಯಲ್ಲಿ ಯುವ ರೋಗಿಗಳಿಗೆ ಅತಿ ಹೆಚ್ಚು ಆದ್ಯತೆ ನೀಡುವಂತೆ ಕೇಂದ್ರ ಸರಕಾರ ರಾಜ್ಯಸರಕಾರಗಳಿಗೆ ಸೂಚಿಸಿದೆ. ಕೊರತೆ ಇರುವುದರಿಂದ ಬ್ಲಾಕ್ ಫಂಗಸ್ ಚಿಕಿತ್ಸೆಗೆ ಬಳಸಲಾಗುವ ಆ್ಯಂಪೋಟೆರ್ಸಿನ್ ಬಿ ಔಷಧವನ್ನು ವೃದ್ಧರಿಗೆ ನೀಡುವುದಕ್ಕಿಂತ ಯುವ ಜನಾಂಗಕ್ಕೆ ಒದಗಿಸುವಲ್ಲಿ ಆದ್ಯತೆ ನೀಡಿ ಎಂದು ದಿಲ್ಲಿ ಉಚ್ಚ ನ್ಯಾಯಾಯಲಯ ಕೇಂದ್ರಕ್ಕೆ ಜೂನ್ 1ರಂದು ಸೂಚಿಸಿತ್ತು. 

ದೇಶವು ತನ್ನ ಭವಿಷ್ಯ, ಯುವ ಜನಾಂಗವನ್ನು ರಕ್ಷಿಸುವ ಅಗತ್ಯತೆ ಇದೆ. ವೃದ್ಧರು ತಮ್ಮ ಬದುಕನ್ನು ಕಳೆದಿದ್ದಾರೆ. ಆ್ಯಂಪೋಟೆರ್ಸಿನ್ ಬಿ ಔಷಧ ಅಗತ್ಯದ ಮೂರನೇ ಒಂದು ಭಾಗ ಮಾತ್ರ ಲಭ್ಯವಿರುವುದರಿಂದ ಪ್ರತಿಯೊಬ್ಬರಿಗೂ ಒದಗಿಸಲು ಸಾಧ್ಯವಿಲ್ಲ ಎಂದು ಉಚ್ಚ ನ್ಯಾಯಾಲಯ ಹೇಳಿತ್ತು. ಉಚ್ಚ ನ್ಯಾಯಾಲಯದ ಈ ಆದೇಶ ಅನುಸರಿಸಿ ಬ್ಲಾಕ್ ಫಂಗಸ್ ಚಿಕಿತ್ಸೆ ನೀಡುವಲ್ಲಿ ವೃದ್ಧರಿಗಿಂತ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವಂತೆ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಸೂಚಿಸಿದೆ. ಕೋವಿಡ್-19 ಕುರಿತ ರಾಷ್ಟ್ರೀಯ ಕಾರ್ಯ ಪಡೆ ಜೂನ್ 3ರಂದು ರವಾನಿಸಿದ ಸಲಹೆಯಲ್ಲಿ ಆ್ಯಂಪೋಟೆರ್ಸಿನ್ ಬಿ ಔಷಧವನ್ನು ಯುವಕರ ಬಳಿಕ ಶಸ್ತ್ರಚಿಕಿತ್ಸೆ ಅಪೂರ್ಣರಾದವರಿಗೆ ನೀಡಬೇಕು. ಶಸ್ತ್ರಚಿಕಿತ್ಸೆ ಅಪೂರ್ಣವು ಹಾನಿಯಾದ ಚರ್ಮ ತೆಗೆಯುವುದು, ನೇತ್ರ ಉಳಿಸಲು ನೆರವು ನೀಡುವ ಕ್ರಮ ಹಾಗೂ ಸಾವಿಗೆ ಕಾರಣವಾಗುವ ರೋಗವನ್ನು ಉಲ್ಭಣವಾಗುವುದನ್ನು ತಡೆಯುವುದನ್ನು ಒಳಗೊಂಡಿದೆ ಎಂದು ಅದು ಹೇಳಿದೆ.

ದೇಶದಲ್ಲಿ ಇದುವರೆಗೆ ಸುಮಾರು 29,000 ಬ್ಲಾಕ್ ಫಂಗಸ್ ಪ್ರಕರಣಗಳು ವರದಿಯಾಗಿವೆ. ಹೆಚ್ಚಿನವು ಕೊರೋನ ಸೋಂಕಿನಿಂದ ಗುಣಮುಖರಾದವರಲ್ಲಿ ಕಾಣಿಸಿಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News