ಹಾಂಕಾಂಗ್ ಸ್ವಾತಂತ್ರ್ಯ ಕಡಿತಗೊಳಿಸಲು ಚೀನಾದಿಂದ ಭದ್ರತಾ ಕಾನೂನು ಬಳಕೆ: ವರದಿಯಲ್ಲಿ ಬ್ರಿಟನ್ ಟೀಕೆ

Update: 2021-06-11 17:46 GMT

ಹಾಂಕಾಂಗ್, ಜೂ. 11: ಹಾಂಕಾಂಗ್ ನ ಉನ್ನತ ಸ್ತರದ ಸ್ವಾಯತ್ತೆಯನ್ನು ಕಡೆಗಣಿಸುವ ಮೂಲಕ ಚೀನಾವು ತನ್ನ ಕಾನೂನು ಬದ್ಧತೆಯನ್ನು ಮುರಿದಿದೆ ಹಾಗೂ ನಗರದ ಸ್ವಾತಂತ್ರ್ಯಗಳನ್ನು ಸಾರಾಸಗಟಾಗಿ ಕಡಿತಗೊಳಿಸಲು ಅದು ರಾಷ್ಟ್ರೀಯ ಭದ್ರತಾ ಕಾನೂನೊಂದನ್ನು ಬಳಸಿದೆ ಎಂದು ಬ್ರಿಟನ್ ನ ವರದಿಯೊಂದು ಹೇಳಿದೆ.

ಹಾಂಕಾಂಗ್ ಚೀನಾದ ತೆಕ್ಕೆಗೆ ಹೋಗುವ ಮೊದಲು ಬ್ರಿಟನ್ ನ ವಸಾಹತಾಗಿತ್ತು.

ಚೀನಾವು ಕಳೆದ ವರ್ಷದ ಜೂನ್ ನಲ್ಲಿ ಹಾಂಕಾಂಗ್ ಮೇಲೆ ಹೇರಿದ ಕಠೋರ ರಾಷ್ಟ್ರೀಯ ಭದ್ರತಾ ಕಾನೂನನ್ನು ರಾಜಕೀಯ ವಿರೋಧವನ್ನು ಹತ್ತಿಕ್ಕಲು ಬಳಸಲಾಗುತ್ತಿದೆ ಎಂದು 2020 ಜುಲೈ-ಡಿಸೆಂಬರ್ ಅವಧಿಯ ಆರು ತಿಂಗಳ ವರದಿಗೆ ಮುನ್ನುಡಿ ಬರೆದಿರುವ ಬ್ರಿಟನ್ ವಿದೇಶ ಸಚಿವ ಡೋಮಿನಿಕ್ ರಾಬ್ ಹೇಳಿದ್ದಾರೆ.

ಹಾಂಕಾಂಗ್ ವ್ಯಾಪಕ ಶ್ರೇಣಿಯ ಸ್ವಾತಂತ್ರ್ಯಗಳನ್ನು ನೀಡುವ 1984ರ ಜಂಟಿ ಘೋಷಣೆಗೆ ಚೀನಾದ ಅಂದಿನ ಪ್ರದಾನಿ ಝಾವೊ ಝಿಯಾಂಗ್ ಮತ್ತು ಬ್ರಿಟಿಶ್ ಪ್ರಧಾನಿ ಮಾರ್ಗರೆಟ್ ಥ್ಯಾಚರ್ ಸಹಿ ಹಾಕಿದ್ದರು. ಆ ಘೋಷಣೆಯನ್ನು ಈಗ ಸ್ಪಷ್ಟವಾಗಿ ಉಲ್ಲಂಘಿಸಲಾಗಿದೆ ಎಂದು ರಾಬ್ ಹೇಳಿದ್ದಾರೆ.

ಹಾಂಕಾಂಗ್ನ ಚುನಾವಣಾ ವ್ಯವಸ್ಥೆಗೆ ಚೀನಾ ತಂದಿರುವ ಬದಲಾವಣೆ, ಪ್ರಾಸಿಕ್ಯೂಶನ್ಗೆ ಸಂಬಂಧಿಸಿ ಕಾನೂನು ಇಲಾಖೆ ತೆಗೆದುಕೊಳ್ಳುವ ನಿರ್ಧಾರಗಳು ಮತ್ತು ವಿವಾದಾಸ್ಪದ ಭದ್ರತಾ ಕಾನೂನನ್ನು ವರದಿಯು ಟೀಕಿಸಿದೆ.

‘‘ಹಾಗಾಗಿ, ಚೀನಾ ಈಗ ಜಂಟಿ ಘೋಷಣೆಗೆ ಅನುಗುಣವಾಗಿ ನಡೆದುಕೊಳ್ಳುತ್ತಿಲ್ಲ ಎಂಬುದಾಗಿ ನಾವು ಘೋಷಿಸಿದ್ದೇವೆ’’ ಎಂದು ರಾಬ್ ಹೇಳಿದರು. ಚೀನಾ ಹೇಳಿರುವಂತೆ, ಅಪರಾಧಿಗಳ ಸಣ್ಣ ಗುಂಪೊಂದನ್ನು ಬಗ್ಗುಬಡಿಯಲು ರಾಷ್ಟ್ರೀಯ ಭದ್ರತಾ ಕಾನೂನನ್ನು ಬಳಸಲಾಗುತ್ತಿಲ್ಲ ಎಂದು ವರದಿ ಹೇಳಿದೆ.

‘‘ಬದಲಿಗೆ, ಪರ್ಯಾಯ ರಾಜಕೀಯ ನಿಲುವುಗಳ ಅಭಿವ್ಯಕ್ತಿಗಿರುವ ಅವಕಾಶವನ್ನು ಗಣನೀಯವಾಗಿ ಕಡಿತಗೊಳಿಸಲು ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಕಾನೂನುಬದ್ಧ ರಾಜಕೀಯ ಚರ್ಚೆಯನ್ನು ತಡೆಯಲು ಅದನ್ನು ಬಳಸಲಾಗುತ್ತಿದೆ’’ ಎಂದು ಗುರುವಾರ ನೀಡಿದ ಹೇಳಿಕೆಯೊಂದರಲ್ಲಿ ಬ್ರಿಟನ್ ವಿದೇಶ ಸಚಿವ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News