ಭಾರತದ ಕೆಲವು ಕ್ರಮಗಳು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅನುಗುಣವಾಗಿಲ್ಲ: ಅಮೆರಿಕ ‌

Update: 2021-06-12 16:14 GMT

photo: twitter/@iatoday

ವಾಶಿಂಗ್ಟನ್, ಜೂ. 12: ಭಾರತದಲ್ಲಿ ಈಗಲೂ ಪ್ರಬಲ ಕಾನೂನಿನ ಆಡಳಿತವಿದ್ದು ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವವಾಗಿಯೇ ಉಳಿದಿದೆ, ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೇರಲಾಗಿರುವ ನಿರ್ಬಂಧಗಳು ಸೇರಿದಂತೆ ಭಾರತ ಸರಕಾರ ಇತ್ತೀಚೆಗೆ ತೆಗೆದುಕೊಂಡಿರುವ ಕೆಲವು ಕ್ರಮಗಳು ಕಳವಳಕ್ಕೆ ಕಾರಣವಾಗಿವೆ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಉಸ್ತುವಾರಿ ಸಹಾಯಕ ವಿದೇಶ ಕಾರ್ಯದರ್ಶಿ ಡೀನ್ ತಾಂಪ್ಸನ್ ಹೇಳಿದ್ದಾರೆ.

ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನ ಏಶ್ಯ, ಪೆಸಿಫಿಕ್, ಮಧ್ಯ ಏಶ್ಯ ಮತ್ತು ಪ್ರಸರಣ ನಿಷೇಧ ಕುರಿತ ವಿದೇಶ ವ್ಯವಹಾರಗಳ ಉಪ ಸಮಿತಿಯ ಸಭೆಯ ವಿಚಾರಣೆಯಲ್ಲಿ ಅವರು ಈ ವಿವರಣೆ ನೀಡಿದ್ದಾರೆ.

‘‘ಪ್ರಬಲ ಕಾನೂನಿನ ಆಡಳಿತ ಮತ್ತು ಸ್ವತಂತ್ರ ನ್ಯಾಯಾಂಗದೊಂದಿಗೆ ಭಾರತ ಈಗಲೂ ಜಗತ್ತಿನ ಅತಿ ದೊಡ್ಡ ಪ್ರಜಾಸತ್ತೆಯಾಗಿಯೇ ಉಳಿದಿದೆ. ಅಮೆರಿಕದೊಂದಿಗಿನ ಅದರ ರಕ್ಷಣಾ ಭಾಗೀದಾರಿಕೆ ಬಲವಾಗಿದೆ ಹಾಗೂ ವಿಜೃಂಭಿಸುತ್ತಿದೆ’’ ಎಂದು ತಾಂಪ್ಸನ್ ಹೇಳಿದರು.

‘‘ಆದರೆ, ಭಾರತ ಸರಕಾರ ತೆಗೆದುಕೊಂಡಿರುವ ಕೆಲವು ಕ್ರಮಗಳು ಆ ದೇಶದ ಪ್ರಜಾಸತ್ತಾತ್ಮಕ ಮೌಲ್ಯಗಳಿಗೆ ಅನುಗುಣವಾಗಿಲ್ಲ. ಇದು ಕಳವಳದ ವಿಷಯವಾಗಿದೆ’’ ಎಂದು ಅವರು ಅಭಿಪ್ರಾಯಪಟ್ಟರು.

‘‘ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹೆಚ್ಚುತ್ತಿರುವ ನಿರ್ಬಂಧಗಳು ಹಾಗೂ ಮಾನವಹಕ್ಕು ಹೋರಾಟಗಾರರು ಮತ್ತು ಪತ್ರಕರ್ತರ ಬಂಧನವು ಕಳವಳಕ್ಕೆ ಕಾರಣವಾಗಿರುವ ಭಾರತದ ಕೆಲವು ಕ್ರಮಗಳಾಗಿವೆ’’ ಎಂದರು.

ಈ ವಿಷಯಗಳಿಗೆ ಸಂಬಂಧಿಸಿ ಅಮೆರಿಕವು ವಿವಿಧ ದೇಶಗಳೊಂದಿಗೆ ನಿರಂತರವಾಗಿ ವ್ಯವಹರಿಸುತ್ತಿದೆ ಎಂದು ತಾಂಪ್ಸನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News