ಡೊಮಿನಿಕಾದಲ್ಲಿಯ ಚೋಕ್ಸಿ ಪ್ರಕರಣದಲ್ಲಿ ಕಾನೂನು ಸಮರಕ್ಕೆ ಕೇಂದ್ರ, ಸಿಬಿಐ ಸಜ್ಜು

Update: 2021-06-12 16:20 GMT

ಹೊಸದಿಲ್ಲಿ,ಜೂ.12: ದೇಶಭ್ರಷ್ಟ ವಜ್ರವ್ಯಾಪಾರಿ ಮೆಹುಲ್ ಚೋಕ್ಸಿ ವಿರುದ್ಧ ಡೊಮಿನಿಕಾ ಉಚ್ಚ ನ್ಯಾಯಾಲಯದಲ್ಲಿಯ ಪ್ರಕರಣದಲ್ಲಿ ಕಕ್ಷಿಗಳಾಗಿ ಸೇರ್ಪಡೆಗೊಳ್ಳಲು ಭಾರತ ಸರಕಾರ ಮತ್ತು ಸಿಬಿಐ ಬಯಸಿವೆ.

ಸಿಬಿಐ ಪಿಎನ್‌ಬಿ ಹಗರಣ ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲಿದ್ದರೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೋಕ್ಸಿಯ ಪೌರತ್ವ ಸ್ಥಿತಿಗತಿ ಕುರಿತು ವಾದವನ್ನು ಮಂಡಿಸಲಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.

ಚೋಕ್ಸಿಯ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಕಕ್ಷಿದಾರನಾಗಿ ಸೇರಲು ಸಿಬಿಐ ಡೊಮಿನಿಕಾ ಉಚ್ಚ ನ್ಯಾಯಾಲಯದಲ್ಲಿ ಅರ್ಜಿಯನ್ನು ಸಲ್ಲಿಸಿದೆ. ಚೋಕ್ಸಿ ದೇಶಭ್ರಷ್ಟ ಎನ್ನುವುದನ್ನು ನ್ಯಾಯಾಲಯದಲ್ಲಿ ಸಾಬೀತುಗೊಳಿಸಲು ಪಿಎನ್ಬಿ ಪ್ರಕರಣದ ವಿವರಗಳನ್ನು ಸಲ್ಲಿಸಲು ಅದು ಬಯಸಿದೆ.

ಸಮನ್ಸ್ ಅನ್ನು ತಪ್ಪಿಸಿಕೊಂಡಿದ್ದಕ್ಕಾಗಿ ಭಾರತೀಯ ನ್ಯಾಯಾಲಯಗಳು ಚೋಕ್ಸಿ ವಿರುದ್ಧ ಹೊರಡಿಸಿರುವ ಜಾಮೀನುರಹಿತ ವಾರಂಟ್ಗಳನ್ನು ನೆಚ್ಚಿಕೊಂಡಿರುವ ಸಿಬಿಐ,ಚೋಕ್ಸಿ 13,000 ಕೋ.ರೂ.ಗಳ ಪಿಎನ್ಬಿ ಹಗರಣ ಪ್ರಕರಣದಲ್ಲಿ ಕಾನೂನಿನಿಂದ ನುಣುಚಿಕೊಳ್ಳುತ್ತಿರುವುದಾಗಿ ತನ್ನ ಅರ್ಜಿಯಲ್ಲಿ ತಿಳಿಸಿದೆ.

ಭಾರತವು ಡೊಮಿನಿಕಾ ಉಚ್ಚ ನ್ಯಾಯಾಲಯದಲ್ಲಿನ ಕಲಾಪಗಳಲ್ಲಿ ಕಕ್ಷಿಯಾಗಲು ಕೋರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ಪ್ರತ್ಯೇಕ ಅರ್ಜಿಯನ್ನು ಸಲ್ಲಿಸಿದೆ. ಚೋಕ್ಸಿ ಇನ್ನೂ ಭಾರತದ ಪ್ರಜೆಯಾಗಿದ್ದು,ತನ್ನ ಪಾಸ್ಪೋರ್ಟ್ ಅನ್ನು ಸರಕಾರಕ್ಕೆ ಮರಳಿಸಿಲ್ಲ ಎಂದು ಸಚಿವಾಲಯವು ಅರ್ಜಿಯಲ್ಲಿ ತಿಳಿಸಿದೆ. ಚೋಕ್ಸಿ ತನ್ನ ಪೌರತ್ವ ತ್ಯಜಿಸುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಿಲ್ಲ ಎಂದೂ ಮೂಲಗಳು ಹೇಳಿವೆ.

ಕೆಲವು ದಿನಗಳ ಹಿಂದೆ ಡೊಮಿನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರಿಟ್ ಅವರೂ ಚೋಕ್ಸಿ ಭಾರತೀಯ ಪ್ರಜೆ ಎಂದು ಹೇಳಿದ್ದರು.

ಸಿಬಿಐ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅರ್ಜಿಗಳು ಡೊಮಿನಿಕಾ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಸ್ವೀಕೃತಗೊಂಡರೆ ಮಾಜಿ ಸಾಲಿಸಿಟರ್-ಜನರಲ್ ಹರೀಶ ಸಾಳ್ವೆ ಅವರು ಸಿಬಿಐ ಮತ್ತು ಸಚಿವಾಲಯದ ಪರವಾಗಿ ವಾದಿಸಲಿದ್ದಾರೆ.

ಚೋಕ್ಸಿಯ ಹೇಬಿಯಸ್ ಕಾರ್ಪಸ್ ಅರ್ಜಿಯ ಮೇಲಿನ ವಿಚಾರಣೆಯನ್ನು ಜುಲೈ ತಿಂಗಳಿಗೆ ಮುಂದೂಡಿರುವ ಉಚ್ಚ ನ್ಯಾಯಾಲಯವು,ವಿಚಾರಣೆಯು ಪೂರ್ಣಗೊಳ್ಳುವವರೆಗೆ ಚೋಕ್ಸಿಯನ್ನು ಡೊಮಿನಿಕಾದಿಂದ ಹೊರಹಾಕುವ ತನ್ನ ಆದೇಶದ ಗಡುವನ್ನು ವಿಸ್ತರಿಸಿದೆ.
ಅಕ್ರಮವಾಗಿ ಡೊಮಿನಿಕಾವನ್ನು ಪ್ರವೇಶಿಸಿದ ಆರೋಪದಲ್ಲಿ ಜಾಮೀನು ಕೋರಿ ಚೋಕ್ಸಿ ದಾಖಲಿಸಿರುವ ಪ್ರತ್ಯೇಕ ಪ್ರಕರಣದಲ್ಲಿ ಡೊಮಿನಿಕಾ ಉಚ್ಚ ನ್ಯಾಯಾಲಯವು ಜಾಮೀನು ನಿರಾಕರಿಸಿರುವ ಮ್ಯಾಜಿಸ್ಟ್ರೇಟ್ ಆದೇಶವನ್ನು ಎತ್ತಿ ಹಿಡಿದಿದೆ.
 
ಪಿಎನ್ಬಿ ಪ್ರಕರಣದಲ್ಲಿ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ತನಿಖೆಗಳು ಚುರುಕು ಪಡೆದುಕೊಳ್ಳುತ್ತಿದ್ದಂತೆ ಆಂಟಿಗುವಾದ ಪೌರತ್ವವನ್ನು ಖರೀದಿಸಿದ್ದ ಚೋಸ್ಕಿ 2018ರಲ್ಲಿ ಅಲ್ಲಿಗೆ ಪಲಾಯನಗೈದಿದ್ದು,ಕಳೆದ ತಿಂಗಳು ಆಂಟಿಗುವಾದಿಂದ ಡೊಮಿನಿಕಾ ಮೂಲಕ ಕ್ಯೂಬಾಕ್ಕೆ ಪರಾರಿಯಾಗುವ ಪ್ರಯತ್ನದಲ್ಲಿ ಪೊಲಿಸರಿಂದ ಬಂಧಿಸಲ್ಪಟ್ಟಿದ್ದ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News