ಕೆನಡ: ಮುಸ್ಲಿಮ್ ಕುಟುಂಬದ ನಾಲ್ವರ ಹತ್ಯೆ ಖಂಡಿಸಿ ಬೀದಿಗಿಳಿದ ಸಾವಿರಾರು ಮಂದಿ

Update: 2021-06-12 16:52 GMT

ಒಟ್ಟಾವ (ಕೆನಡ), ಜೂ. 12: ಕಳೆದ ರವಿವಾರ ಕೆನಡದ ಮುಸ್ಲಿಮ್ ಕುಟುಂಬವೊಂದರ ನಾಲ್ವರು ಸದಸ್ಯರನ್ನು ವ್ಯಕ್ತಿಯೊಬ್ಬ ಟ್ರಕ್ ಹರಿಸಿ ಕೊಂದಿರುವುದನ್ನು ಪ್ರತಿಭಟಿಸಿ ದೇಶದಲ್ಲಿ ಶುಕ್ರವಾರ ಸಾವಿರಾರು ಜನರು ರಸ್ತೆಗಿಳಿದರು.

ಒಂದೇ ಕುಟುಂಬದ ಮೂರು ತಲೆಮಾರುಗಳಿಗೆ ಸೇರಿದ ನಾಲ್ವರನ್ನು 20 ವರ್ಷದ ನತಾನಿಯಲ್ ವೆಲ್ಟ್ಮನ್ ಟ್ರಕ್ ಹರಿಸಿ ಕೊಂದಿದ್ದಾನೆ ಎಂಬುದಾಗಿ ಆರೋಪಿಸಲಾಗಿದೆ. ಅವರು ತಮ್ಮ ಮನೆಯ ಸಮೀಪ ರಾತ್ರಿ ನಡಿಗೆಯಲ್ಲಿ ತೊಡಗಿದ್ದಾಗ ಈ ದಾಳಿ ನಡೆದಿದೆ. ಕುಟುಂಬದ ಐದನೇ ಸದಸ್ಯ, ಒಂಬತ್ತು ವರ್ಷದ ಬಾಲಕ ದಾಳಿಯಲ್ಲಿ ಬದುಕುಳಿದಿದ್ದಾರೆ. ಪೊಲೀಸರು ಈ ದಾಳಿಯನ್ನು ದ್ವೇಷಾಪರಾಧ ಎಂಬುದಾಗಿ ಬಣ್ಣಿಸಿದ್ದಾರೆ.

ಕೆನಡದ ಒಂಟಾರಿಯೊ ರಾಜ್ಯದ ನಗರ ಲಂಡನ್ನಲ್ಲಿ ಜನರು ಶುಕ್ರವಾರ ಹತ್ಯೆ ನಡೆದ ಸ್ಥಳದಿಂದ ಸುಮಾರು 7 ಕಿ.ಮೀ. ದೂರದಲ್ಲಿರುವ ಮಸೀದಿಯವರೆಗೆ ಮೆರವಣಿಗೆಯಲ್ಲಿ ಸಾಗಿದರು. ಈ ಮಸೀದಿಯ ಸಮೀಪದ ಸ್ಥಳವೊಂದರಿಂದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.

‘ಇಲ್ಲಿ ದ್ವೇಷಕ್ಕೆ ಜಾಗವಿಲ್ಲ’ ಮತ್ತು ‘ದ್ವೇಷವನ್ನು ಬಿಟ್ಟು ಪ್ರೀತಿಸಿ’ ಎಂಬ ಘೋಷಣೆಗಳನ್ನು ಬರೆದಿರುವ ಫಲಕಗಳನ್ನು ಜನರು ಹಿಡಿದುಕೊಂಡಿದ್ದರು.

‘‘ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಭಾಗವಹಿಸಿದ ಜನರ ಸಂಖ್ಯೆಯಲ್ಲ. ಲಂಡನ್ ನ ಪ್ರತಿಯೊಂದು ಕಾಲನಿಯಿಂದ ಬಂದ ವಿವಿಧ ವರ್ಗಗಳಿಗೆ ಸೇರಿದ ಜನರು. ಅವರೆಲ್ಲರೂ ಈ ವಿಷಯದಲ್ಲಿ ಒಟ್ಟಾಗಿ ಬಂದಿದ್ದಾರೆ’’ ಎಂದು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದವರೊಬ್ಬರು ಹೇಳಿದರು.

ಟೊರಾಂಟೊ, ಒಟ್ಟಾವ, ಮಾಂಟ್ರಿಯಲ್ ಮತ್ತು ಕ್ಯೂಬೆಕ್ ನಗರಗಳಲ್ಲೂ ಪ್ರತಿಭಟನಾ ಮೆರವಣಿಗೆಗಳು ನಡೆದವು.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News