ಕೋವಿಡ್ ಸಾವುಗಳನ್ನು ನಿಖರವಾಗಿ ವರದಿ ಮಾಡಿ: ಮದ್ರಾಸ್ ಹೈಕೋರ್ಟ್

Update: 2021-06-12 17:02 GMT

ಚೆನ್ನೈ, ಜೂ. 12: ತಮಿಳುನಾಡಿನಲ್ಲಿ ಕೋವಿಡ್ನಿಂದ ಸಂಭವಿಸಿದ ಸಾವನ್ನು ನಿಖರವಾಗಿ ವರದಿ ಮಾಡಬೇಕು. ಇದರಿಂದ ಮೃತಪಟ್ಟವರ ಕುಟುಂಬದ ಸದಸ್ಯರು ಸರಕಾರ ಭರವಸೆ ನೀಡಿದ ಪರಿಹಾರ ಪಡೆಯಲು ಸಾಧ್ಯವಾಗುತ್ತದೆ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಶುಕ್ರವಾರ ಹೇಳಿದೆ. 

ಕೋವಿಡ್ ಗೆ ಸಂಬಂಧಿಸಿದ ಸಾವಿನ ಎಲ್ಲಾ ಪ್ರಕರಣಗಳಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟ ಸೇರಿದಂತೆ ಕಾನೂನು, ಐಸಿಎಂಆರ್ನ ಮಾರ್ಗಸೂಚಿ ಹಾಗೂ ಇತರ ಪ್ರಸಕ್ತ ಮಾನಂದಡಗಳಿಗೆ ಅನುಗುಣವಾಗಿ ಅಗತ್ಯವಿರುವ ಪ್ರಮಾಣಪತ್ರ/ಅಧಿಕೃತ ದಾಖಲೆಗಳಲ್ಲಿ ಸಾವಿನ ಕಾರಣವನ್ನು ನಿಖರವಾಗಿ ಉಲ್ಲೇಖಿಸುವ ಪರಿಣಾಮಕಾರಿ ನೀತಿಯನ್ನು ಅನುಷ್ಠಾನಗೊಳಿಸಬೇಕು. ಇದಕ್ಕೆ ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಸಲ್ಲಿಸಲಾದ ದೂರಿನ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸಂಜೀವ್ ಬ್ಯಾನರ್ಜಿ ಹಾಗೂ ನ್ಯಾಯಮೂರ್ತಿ ಸೆಂಥಿಲ್ ಕುಮಾರ್ ರಾಮಮೂರ್ತಿ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು. 

ಪರಿಣಾಮಕಾರಿ ನೀತಿ ಅನುಷ್ಠಾನಗೊಳಿಸುವುದರಿಂದ ಕೋವಿಡ್ನಿಂದ ಮೃತಪಟ್ಟವರ ಕುಟುಂಬ ಸರಕಾರದಿಂದ ಲಭ್ಯವಿರುವ ಪರಿಹಾರಗಳನ್ನು ಯಾವುದೇ ಅಡ್ಡಿ ಇಲ್ಲದೆ ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದು ದೂರುದಾರ ಮನವಿಯಲ್ಲಿ ಹೇಳಿದ್ದಾರೆ. ಕೋವಿಡ್ ಪಾಸಿಟಿವ್ ವರದಿ ಇಲ್ಲದೇ ಇದ್ದಲ್ಲಿ, ಆ ವ್ಯಕ್ತಿಯ ಸಾವನ್ನು ಕೋವಿಡ್ನಿಂದ ಉಂಟಾದ ಸಾವು ಎಂದು ದಾಖಲಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ತಮಿಳುನಾಡಿಗೆ ಸಂಬಂಧಿಸಿ ಹೇಳಿತು. ಅಲ್ಲದೆ, ಇತರ ಖಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಯು ಸಾವನ್ನಪ್ಪಿದರೆ, ಕೋವಿಡ್ನಿಂದಲೇ ಮೃತಪಟ್ಟಿದ್ದಾರೆ ಎಂದು ಹೇಳಲು ಕೆಲವೊಂದು ಸಮಸ್ಯೆಗಳು ಉಂಟಾಗುತ್ತವೆ ಎಂದು ನ್ಯಾಯಾಲಯ ತಿಳಿಸಿತು. 

ಕೋವಿಡ್ನಿಂದ ಉಂಟಾದ ಸಾವನ್ನು ನಿಖರವಾಗಿ ದಾಖಲಿಸುವುದರಿಂದ ಈ ಲಕ್ಷಣದ ಸಾಂಕ್ರಾಮಿಕ ರೋಗವನ್ನು ಭವಿಷ್ಯದಲ್ಲಿ ನಿರ್ವಹಿಸಲು ಅಧ್ಯಯನ ಕೈಗೊಳ್ಳಲು ಸಾಧ್ಯವಾಗುತ್ತದೆ. ಕೋವಿಡ್ನಿಂದ ಮೃತಪಟ್ಟ ಬಗ್ಗೆ ಪ್ರಮಾಣ ಪತ್ರ ಇಲ್ಲದೇ ಇದ್ದರೆ, ಮೃತನ ಕುಟುಂಬ ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯುವಲ್ಲಿ ಅಡ್ಡಿ ಉಂಟಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News