ಜಮ್ಮು-ಕಾಶ್ಮೀರದಲ್ಲಿ ಚುನಾವಣೆಗೆ ಕೇಂದ್ರದ ನಿರ್ಧಾರ ?

Update: 2021-06-13 15:43 GMT

ಶ್ರೀನಗರ, ಜೂ.13: ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿ ಒದಗಿಸುವ ಬಗ್ಗೆ ಹಾಗೂ ಅಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರವು ಜಮ್ಮು ಕಾಶ್ಮೀರದ ರಾಜಕೀಯ ಪಕ್ಷಗಳೊಂದಿಗೆ ಚರ್ಚೆ ಆರಂಭಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಹೇಳಿವೆ. ಈ ಬಗ್ಗೆ ಇನ್ನೂ ಅಧಿಕೃತ ಆಹ್ವಾನ ದೊರಕದಿದ್ದರೂ, ಮಾತುಕತೆಯಲ್ಲಿ ಪಾಲ್ಗೊಳ್ಳುವ ಉತ್ಸಾಹವನ್ನು ಗುಪ್ಕರ್ ಒಕ್ಕೂಟ(ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಮರುಸ್ಥಾಪನೆಗೆ ನೆರವಾಗಲು ರಚನೆಯಾದ 7 ಪಕ್ಷಗಳ ಒಕ್ಕೂಟ) ಮತ್ತು ನ್ಯಾಷನಲ್ ಕಾನ್ಫರೆನ್ಸ್ ವ್ಯಕ್ತಪಡಿಸಿದೆ ಎಂದು ವರದಿಯಾಗಿದೆ. ‌

2018ರಲ್ಲಿ ಮೆಹಬೂಬಾ ಮುಫ್ತಿಯೊಂದಿಗಿನ ಮೈತ್ರಿಯನ್ನು ಬಿಜೆಪಿ ಕಡಿದುಕೊಂಡಂದಿನಿಂದ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿದೆ. ಜಮ್ಮುಕಾಶ್ಮೀರದ ವಿಶೇಷ ಸ್ಥಾನಮಾನವನ್ನು 2019ರಲ್ಲಿ ರದ್ದುಗೊಳಿಸಿದ್ದ ಕೇಂದ್ರ ಸರಕಾರ, ರಾಜ್ಯವನ್ನು 2 ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿತ್ತು. 2019ರಲ್ಲಿ ಸಾರ್ವತ್ರಿಕ ಚುನಾವಣೆಯ ಜೊತೆಗೇ ಜಮ್ಮು ಕಾಶ್ಮೀರದಲ್ಲೂ ಚುನಾವಣೆ ನಡೆಯಲಿದೆ ಎಂದು ಭಾವಿಸಲಾಗಿತ್ತು. ಆದರೆ ಭದ್ರತೆಗೆ ಬೆದರಿಕೆ ಇದೆ ಎಂಬ ಆಡಳಿತದ ವರದಿಯ ಹಿನ್ನೆಲೆಯಲ್ಲಿ ಚುನಾವಣೆ ನಡೆಸುವುದಿಲ್ಲ ಎಂದು ಚುನಾವಣಾ ಆಯೋಗ ಹೇಳಿತ್ತು. ಇದೀಗ ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರಳಿಸುವ ಮತ್ತು ಅಲ್ಲಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜಕೀಯ ಪಕ್ಷಗಳೊಂದಿಗೆ ಮಾತುಕತೆ ಆರಂಭಿಸುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. 

ತಾವು ಮಾತುಕತೆಗೆ ಯಾವತ್ತೂ ವಿರೋಧಿಸಿಲ್ಲ ಎಂದು ನ್ಯಾಷನಲ್ ಕಾನ್ಫರೆನ್ಸ್ ಹಿರಿಯ ಮುಖಂಡ, ಗುಫ್ಕರ್ ಮೈತ್ರಿಕೂಟದ ಅಧ್ಯಕ್ಷ ಫಾರೂಕ್ ಅಬ್ದುಲ್ಲಾ ಹೇಳಿದ್ದಾರೆ. ಈ ಮಧ್ಯೆ, ಸುಮಾರು 6 ತಿಂಗಳಿಂದ ನಿಷ್ಕ್ರಿಯವಾಗಿದ್ದ ಗುಫ್ಕರ್ ಮೈತ್ರಿಕೂಟದಲ್ಲಿ ಮತ್ತೆ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ. ಬುಧವಾರ ಪಿಡಿಪಿ ಪಕ್ಷದ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಮನೆಗೆ ಭೇಟಿನೀಡಿದ್ದ ಅಬ್ದುಲ್ಲಾ ಚರ್ಚೆ ನಡೆಸಿದ್ದಾರೆ ಎಂದು ವರದಿಯಾಗಿದೆ. 

ಕಾಶ್ಮೀರದಲ್ಲಿ ಚುನಾವಣಾ ಪ್ರಕ್ರಿಯೆ ಆರಂಭಿಸಲು ಅಮೆರಿಕವು ಭಾರತ ಸರಕಾರವನ್ನು ಪ್ರೋತ್ಸಾಹಿಸುತ್ತದೆ ಎಂದು ಅಮೆರಿಕದ ಅಧ್ಯಕ್ಷ ಬೈಡೆನ್ ಸರಕಾರದ ಹಿರಿಯ ಅಧಿಕಾರಿಯೊಬ್ಬರು ಇತ್ತೀಚೆಗೆ ಹೇಳಿದ್ದರು. ಕಾಶ್ಮೀರವು ಸಾಮಾನ್ಯ ಸ್ಥಿತಿಗೆ ಸಾಧ್ಯವಾದಷ್ಟು ಬೇಗ ಮರಳಬೇಕು ಎಂದು ನಾವು ಬಯಸುತ್ತೇವೆ. ಅಲ್ಲಿ ಈಗಾಗಲೇ 4ಜಿ ಇಂಟರ್ನೆಟ್ ಸೌಲಭ್ಯ ಮರುಸ್ಥಾಪನೆ, ನಾಯಕರನ್ನು ಗೃಹಬಂಧನದಿಂದ ಬಿಡುಗಡೆಗೊಳಿಸಿದ್ದು ಮುಂತಾದ ಹಲವು ಉಪಕ್ರಮಗಳು ನಡೆದಿರುವುದನ್ನು ಗಮನಿಸಿದ್ದೇವೆ. ಇದಕ್ಕೆ ಪೂರಕವಾಗಿ ಚುನಾವಣಾ ಪ್ರಕ್ರಿಯೆ ನಡೆಸಲು ನಾವು ಭಾರತ ಸರಕಾರಕ್ಕೆ ಪ್ರೋತ್ಸಾಹ ನೀಡುತ್ತೇವೆ ಎಂದು ಅಮೆರಿಕಾದ ದಕ್ಷಿಣ ಮತ್ತು ಕೇಂದ್ರ ಏಶ್ಯಾವಿಭಾಗದ ಅಧಿಕಾರಿ ಡೀನ್ ಥಾಮ್ಸನ್ ಹೇಳಿದ್ದರು. 

ಈ ಹೇಳಿಕೆಯ ಬಳಿಕ ಕೇಂದ್ರ ಸರಕಾರ ಕಾಶ್ಮೀರದಲ್ಲಿ ಚುನಾವಣೆ ನಡೆಸುವ ಬಗ್ಗೆ ಚಿಂತಿಸುತ್ತಿದೆ ಎಂದು ಮೂಲಗಳು ಹೇಳಿವೆ. ಕಳೆದ ಡಿಸೆಂಬರ್ ನಲ್ಲಿ ಜಮ್ಮು ಕಾಶ್ಮೀರದ ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಯಲ್ಲಿ ಗುಫ್ಕರ್ ಮೈತ್ರಿಕೂಟ 100ಕ್ಕೂ ಅಧಿಕ ಸ್ಥಾನಗಳಲ್ಲಿ ಗೆದ್ದಿದ್ದರೂ 74 ಸ್ಥಾನ ಗೆದ್ದಿದ್ದ ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News