ತೈಲ ಬೆಲೆಯೇರಿಕೆ ವಿರೋಧಿಸಿ ಜೂನ್ 16ರಿಂದ ಪ್ರತಿಭಟನೆ: ಎಡಪಕ್ಷಗಳ ಘೋಷಣೆ

Update: 2021-06-13 18:23 GMT

ಹೊಸದಿಲ್ಲಿ, ಜೂ.13: ಗಗನಮುಖಿಯಾಗಿರುವ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಬೇಕು ಎಂದು ಆಗ್ರಹಿಸಿ ಎಡಪಕ್ಷಗಳ ನೇತೃತ್ವದಲ್ಲಿ ದೇಶದಾದ್ಯಂತ ಜೂನ್ 16ರಿಂದ 30ರವರೆಗೆ ಪ್ರತಿಭಟನೆ ನಡೆಯಲಿದೆ ಎಂದು ಘೋಷಿಸಲಾಗಿದೆ. ಐದು ಎಡಪಕ್ಷಗಳ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಮ್ ಯೆಚೂರಿ (ಸಿಪಿಐ-ಎಂ), ಡಿ ರಾಜಾ(ಸಿಪಿಐ), ದೇವವೃತ ಬಿಸ್ವಾಸ್( ಆಲ್ ಇಂಡಿಯಾ ಫಾರ್ವರ್ಡ್ ಬ್ಲಾಕ್), ಮನೋಜ್ ಭಟ್ಟಾಚಾರ್ಯ(ರೆವೊಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ) ಮತ್ತು ದೀಪಾಂಕರ್ ಭಟ್ಟಾಚಾರ್ಯ (ಸಿಪಿಐ-ಎಂಎಲ್) ಸಹಿ ಹಾಕಿರುವ ಹೇಳಿಕೆಯಲ್ಲಿ ತೈಲ ಬೆಲೆ ಏರಿಕೆಯನ್ನು ಖಂಡಿಸಲಾಗಿದೆ. ‌

ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಮೇ 2ರ ಬಳಿಕ ತೈಲ ಬೆಲೆ 21 ಬಾರಿ ಏರಿಕೆಯಾಗಿದೆ. ಜೊತೆಗೆ ಅಗತ್ಯ ವಸ್ತುಗಳ ಬೆಲೆಯೂ ವಿಪರೀತ ಹೆಚ್ಚಳವಾಗಿದ್ದು ಜನಸಾಮಾನ್ಯರಿಗೆ ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಆದಾಯ ತೆರಿಗೆ ಪಾವತಿದಾರರಲ್ಲದ ಕುಟುಂಬಗಳ ಖಾತೆಗೆ 6 ತಿಂಗಳು ತಲಾ 7,500 ರೂ.ಯಂತೆ ಜಮೆ ಮಾಡಬೇಕು ಎಂದು ಆಗ್ರಹಿಸಲಾಗಿದೆ. ಇದರಿಂದ ಹಣದುಬ್ಬರೂ ವಿಪರೀತ ಹೆಚ್ಚಳವಾಗಿದ್ದು ಸಗಟು ಸೂಚ್ಯಾಂಕ ದರ 11 ವರ್ಷದಲ್ಲೇ ಅತ್ಯಧಿಕ ಮಟ್ಟ ತಲುಪಿದೆ. 

ಎಪ್ರಿಲ್ನಲ್ಲಿ ಆಹಾರ ವಸ್ತುಗಳ ಬೆಲೆಯಲ್ಲಿ ಸುಮಾರು 5% , ಪ್ರಮುಖ ವಸ್ತುಗಳ ಬೆಲೆಯಲ್ಲಿ 10.16%, ಉತ್ಪಾದಿತ ಸರಕುಗಳ ಬೆಲೆಯಲ್ಲಿ 9.01% ಹೆಚ್ಚಳವಾಗಿದ್ದು ಆರ್ಥಿಕತೆ ಬೃಹತ್ ಹಿಂಜರಿತದತ್ತ ಸಾಗುತ್ತಿದೆ. ಸರಕಾರದ ಕೃಪಾಕಟಾಕ್ಷದಡಿ ಕಾಳದಂಧೆ ಎಗ್ಗಿಲ್ಲದೆ ಸಾಗುತ್ತಿದೆ. ಜನರ ಪ್ರಾಣ ಉಳಿಸುವ ಅಗತ್ಯದ ಔಷಧಗಳ ಕಾಳದಂಧೆಯನ್ನು ಮೋದಿ ಸರಕಾರ ಮಟ್ಟ ಹಾಕಬೇಕು ಎಂದು ಎಡಪಕ್ಷಗಳು ಆಗ್ರಹಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News