ಇನ್ನೆಲ್ಲಿ ಇವರು ಸಿಗುತ್ತಾರೆ? ಇನ್ನೆಲ್ಲಿ ಮಾತಾಡುತ್ತಾರೆ?

Update: 2021-06-14 09:42 GMT

ಕೊರೋನ ಎರಡನೇ ಅಲೆಯಲ್ಲಿ ನಮ್ಮ ಸಾರ್ವಜನಿಕ ರಂಗದ ಅನೇಕ ಜನಪರ, ಜೀವಪರ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ. ತಮ್ಮ ಸ್ವಂತದ ಬದುಕನ್ನು ಬದಿಗಿಟ್ಟು ನಿರಂತರವಾಗಿ ದಮನಿತ, ಅನ್ಯಾಯಕ್ಕೊಳಗಾದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಲವಾರು ಸಂಗಾತಿಗಳು ಈಗ ನಮ್ಮ ನಡುವೆ ಇಲ್ಲ. ಜನಪರ, ಜೀವಪರ ಚಿಂತಕರು, ಲೇಖಕರನ್ನು ಈ ವೈರಾಣು ಬಲಿ ತೆಗೆದುಕೊಂಡಿದೆ. ಇಂತಹ ದಾರುಣ ಪರಿಸ್ಥಿತಿಗೆ ನಮ್ಮ ಸರಕಾರಗಳು ಅವಕಾಶ ಮಾಡಿಕೊಟ್ಟಿವೆ ಎಂದರೆ ಅತಿಶಯೋಕ್ತಿಯಲ್ಲ. ಈ ಶೂನ್ಯವನ್ನು ತುಂಬುವುದು ಸುಲಭವಲ್ಲ.

ದಶಕಗಳ ಕಾಲ ಒಡನಾಡಿದ, ಮಾತನಾಡಿದ, ಚಳವಳಿಗಳಲ್ಲಿ ಘೋಷಣೆ ಹಾಕಿದ, ಒಟ್ಟಿಗೆ ಲಾಠಿ ಏಟನ್ನು ತಿಂದ ಅನೇಕ ಆತ್ಮೀಯ ಸಂಗಾತಿಗಳನ್ನು ಕೊರೋನ ಬಲಿ ತೆಗೆದುಕೊಂಡಿದೆ. ಎಷ್ಟೇ ಎಚ್ಚರ ವಹಿಸಿದರೂ ಈ ಸಾವುಗಳನ್ನು ತಪ್ಪಿಸಲಾಗಲಿಲ್ಲ. ನಮ್ಮನ್ನಾಳುವ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೊಂಚ ಮುನ್ನೆಚ್ಚರಿಕೆ ವಹಿಸಿದ್ದರೆ ಹಾಗೂ ನಾವು ಹೆಚ್ಚು ಜಾಗ್ರತೆ ವಹಿಸಿದ್ದರೆ, ಎರಡನೇ ಅಲೆಯ ಅಸಂಖ್ಯ ಸಾವುಗಳನ್ನು ತಪ್ಪಿಸಬಹುದಿತ್ತು. ಆದರೆ ಈಗ ಸಾರ್ವಜನಿಕ ರಂಗದ ಅನೇಕ ಅಮೂಲ್ಯ ಚೇತನಗಳನ್ನು ಕಳೆದುಕೊಂಡಿದ್ದೇವೆ.

ಕೊರೋನ ಎಂಬ ಹಿಂದೆಂದೂ ಕಂಡರಿಯದ ಮಹಾ ಪಿಡುಗಿನ ಮೊದಲ ಅಲೆ ಕಲ್ಯಾಣ ಕರ್ನಾಟಕದ ಮಾರುತಿ ಮಾನ್ಪಡೆಯವರಂಥ ಹಲವು ದಣಿವರಿಯದ ಹೋರಾಟಗಾರರನ್ನು ನಮ್ಮಿಂದ ಕಿತ್ತುಕೊಂಡಿತು. ಇನ್ನೇನು ಎಲ್ಲ ಮುಗಿಯಿತೆಂದು ದೈನಂದಿನ ಬದುಕಿನ ಜಂಜಡಗಳಲ್ಲಿ ಮುಳುಗಿದಾಗ ಕೊರೋನ ಎರಡನೇ ಅಲೆ ಬಂದು ಅಪ್ಪಳಿಸಿತು. ಈ ಹೊಡೆತಕ್ಕೆ ಸಿಕ್ಕು ಅನೇಕ ಕುಟುಂಬಗಳು ಬೀದಿ ಪಾಲಾಗಿವೆ. ಸಾವಿರಾರು ಕಂದಮ್ಮಗಳು ಹಡೆದವರನ್ನು ಕಳೆದುಕೊಂಡು ತಬ್ಬಲಿಗಳಾಗಿವೆ. ಕೊರೋನದಿಂದ ಮಾತ್ರವಲ್ಲ ಖಾಸಗಿ ಆಸ್ಪತ್ರೆಗಳ ಲಕ್ಷಾಂತರ ರೂಪಾಯಿ ಬಿಲ್ಲುಗಳಿಂದ ಅನೇಕ ಜನ ಮನೆಮಾರು ಮಾರಿಕೊಂಡಿದ್ದಾರೆ. ಲಾಕ್‌ಡೌನ್ ಪರಿಣಾಮವಾಗಿ ದುಡಿಯುವ ಜನರು ಕನಿಷ್ಠ ಆದಾಯವೂ ಇಲ್ಲದಂತಾಗಿ ಹಸಿವಿನಿಂದ ಕಂಗಾಲಾಗಿದ್ದಾರೆ.

ಕೊರೋನ ವೈರಾಣು ಹಳ್ಳಿಗಳಿಗೂ ವ್ಯಾಪಿಸಿ ಅಲ್ಲಿನ ಜನ ಹೈರಾಣಾಗಿದ್ದಾರೆ. ಆದರೆ, ಪ್ರಭುತ್ವದ ಸೂತ್ರ ಹಿಡಿದವರ ಅಂತಃಕರಣ ಇನ್ನೂ ಕಲ್ಲಿನಂತಿದೆ. ಆಳುವ ಪಕ್ಷಕ್ಕೀಗ ಉತ್ತರ ಪ್ರದೇಶ ಚುನಾವಣೆ ಗೆಲ್ಲುವ ಚಿಂತೆ.

 ಕೋವಿಡ್ ದುಷ್ಪರಿಣಾಮದಿಂದ ಸುಮಾರು 20 ಕೋಟಿಗೂ ಹೆಚ್ಚು ಜನ ಅದರಲ್ಲೂ ಸಣ್ಣಪುಟ್ಟ ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರು ವಿಶೇಷವಾಗಿ ಮಧ್ಯಮ ವರ್ಗದ ಜನ ಕೆಲಸ ಹಾಗೂ ದೈನಂದಿನ ಆದಾಯ ಕಳೆದುಕೊಂಡಿದ್ದಾರೆ. ಇನ್ನೊಂದು ಕಡೆ, ಕಾರ್ಪೊರೇಟ್ ಜಗತ್ತಿನ ಉದ್ಯಮಪತಿಗಳ ಸಂಪತ್ತು ಹಲವಾರು ಪಟ್ಟು ಜಾಸ್ತಿಯಾಗಿ ಸಂಭ್ರಮದಲ್ಲಿದ್ದಾರೆ. ಅದರಲ್ಲೂ ನಮ್ಮ ಪ್ರಧಾನಿ ಮೋದಿಯವರ ಆಪ್ತ ಗೌತಮ್ ಅದಾನಿಯ ಸಂಪತ್ತಿನಲ್ಲಿ ಈ ವರ್ಷ ಬರೋಬ್ಬರಿ 41 ಶತ ಕೋಟಿ ಡಾಲರ್ (3.13 ಲಕ್ಷ ಕೋಟಿ ರೂ.) ಏರಿಕೆಯಾಗಿದೆ.

ಅಮೆರಿಕ ಮೂಲದ ಸಂಶೋಧನಾ ಕೇಂದ್ರದ ವರದಿಯ ಪ್ರಕಾರ, ಭಾರತದಲ್ಲಿ ಕಳೆದ ವರ್ಷ ಕೋವಿಡ್ ಪರಿಣಾಮವಾಗಿ 3.2 ಕೋಟಿ ಮಂದಿ ಕಡು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ. ಜಗತ್ತಿನಾದ್ಯಂತ ಮಧ್ಯಮ ವರ್ಗದ 5.4 ಕೋಟಿ ಮಂದಿ ಬಡತನದ ಹೊಂಡಕ್ಕೆ ಬಿದ್ದಿದ್ದಾರೆ. ಇದೇ ಕಾಲಘಟ್ಟದಲ್ಲಿ ಅದಾನಿ ಕಂಪೆನಿಗಳ ಶೇರು ದರಗಳು ಏರಿಕೆಯಾಗಿರುವುದು ಅವರ ಸಂಪತ್ತು ಹೆಚ್ಚಾಗಲು ಕಾರಣವಾಗಿದೆ. ಮುಖೇಶ್ ಅಂಬಾನಿ ಏಶ್ಯದ ಮೊದಲನೇ ನಂಬರಿನ ಶ್ರೀಮಂತರಾಗಿದ್ದರೆ, ಅದಾನಿ ಎರಡನೇ ಸ್ಥಾನದಲ್ಲಿ ಇದ್ದಾರೆ. ಅವರ ಒಟ್ಟು ಸಂಪತ್ತು 76.7 ಶತಕೋಟಿ ಡಾಲರ್(5.59 ಲಕ್ಷ ಕೋಟಿ ರೂಪಾಯಿ). ಇದರ ಪರಿಣಾಮವಾಗಿ ವಿದೇಶಿ ಮೂಲದ ಹೂಡಿಕೆದಾರರ ಷೇರು ಪಾಲು ಜಾಸ್ತಿಯಾದಾಗ ಸಾರ್ವಜನಿಕ ಷೇರುಗಳು ಕುಸಿಯುತ್ತವೆ. ಹೀಗಾಗಿ ದೇಶದಲ್ಲಿ ಒಂದೆಡೆ ದಟ್ಟ ದಾರಿದ್ರದ ದಾರುಣ ದೃಶ್ಯವಿದ್ದರೆ, ಇನ್ನೊಂದೆಡೆ ಸಂಪತ್ತಿನ ಸಂಗ್ರಹದ ಕರಾಳ ನರ್ತನ ಕಂಡು ಬರುತ್ತಿದೆ.

ಕೊರೋನ ಎರಡನೇ ಅಲೆಯಲ್ಲಿ ನಮ್ಮ ಸಾರ್ವಜನಿಕ ರಂಗದ ಅನೇಕ ಜನಪರ, ಜೀವಪರ ಹೋರಾಟಗಾರರನ್ನು ಕಳೆದುಕೊಂಡಿದ್ದೇವೆ. ತಮ್ಮ ಸ್ವಂತದ ಬದುಕನ್ನು ಬದಿಗಿಟ್ಟು ನಿರಂತರವಾಗಿ ದಮನಿತ ,ಅನ್ಯಾಯಕ್ಕೊಳಗಾದ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಹಲವಾರು ಸಂಗಾತಿಗಳು ಈಗ ನಮ್ಮ ನಡುವೆ ಇಲ್ಲ. ಜನಪರ, ಜೀವಪರ ಚಿಂತಕರು, ಲೇಖಕರನ್ನು ಈ ವೈರಾಣು ಬಲಿ ತೆಗೆದುಕೊಂಡಿದೆ. ಇಂತಹ ದಾರುಣ ಪರಿಸ್ಥಿತಿಗೆ ನಮ್ಮ ಸರಕಾರಗಳು ಅವಕಾಶ ಮಾಡಿಕೊಟ್ಟಿವೆ ಎಂದರೆ ಅತಿಶಯೋಕ್ತಿಯಲ್ಲ. ಈ ಶೂನ್ಯವನ್ನು ತುಂಬುವುದು ಸುಲಭವಲ್ಲ.

 ‘ಸಂವಿಧಾನದ ಓದು’ ಎಂದು ನಾಡಿನ ತುಂಬ ಓಡಾಡಿ ಯುವಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ಉತ್ತರ ಕನ್ನಡ ಜಿಲ್ಲೆಯ ವಿಠ್ಠಲ ಭಂಡಾರಿ, ತಮ್ಮ ಬರಹಗಳ ಮೂಲಕ ಬೌದ್ಧಿಕ ಬೆಳಕನ್ನು ನೀಡುತ್ತಿದ್ದ ಕುಂದಾಪುರದ ಭಾಸ್ಕರ ಮಯ್ಯ, ನಿತ್ಯ ಜನ ಹೋರಾಟದಲ್ಲಿ ಮುಳುಗಿದ್ದ ದಾವಣಗೆರೆಯ ಸಿಪಿಐ ನಾಯಕ ಎಚ್.ಕೆ.ರಾಮಚಂದ್ರಪ್ಪ, ಮಲೆನಾಡಿನ ಜನಪರ ಹೋರಾಟಗಾರ ಹೂವಪ್ಪ, ಕಮ್ಯುನಿಸ್ಟ್ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದ ಕೆ.ಬಿ.ಶಾಣಪ್ಪ, ಇದೀಗ ಕವಿ ಸಿದ್ದಲಿಂಗಯ್ಯ. ಒಬ್ಬರಲ್ಲ, ಇಬ್ಬರಲ್ಲ. ಎಷ್ಟೊಂದು ಜನರನ್ನು ಕಳೆದುಕೊಂಡೆವು. ಇನ್ನೆಲ್ಲಿ ಅವರು ಸಿಗುತ್ತಾರೆ? ಈ ಖಾಲಿತನ ಯಾರು ತುಂಬುತ್ತಾರೆ?.

ಕವಿ ಸಿದ್ದಲಿಂಗಯ್ಯ ನನ್ನ 45 ವರ್ಷಗಳ ಆತ್ಮೀಯ ಗೆಳೆಯ. 38 ದಿನಗಳ ಹಿಂದೆ ಕೋವಿಡ್‌ನಿಂದ ಅವರು ಆಸ್ಪತ್ರೆ ಸೇರಿದ್ದಾರೆ ಎಂದು ಸುದ್ದಿ ಬಂದಾಗ ಆತಂಕಗೊಂಡಿದ್ದೆ. ಕವಿಗಳು ಚೇತರಿಸುತ್ತಿದ್ದಾರೆ ಎಂಬ ಸುದ್ದಿಗಳು ಆಗಾಗ ಬರುತ್ತಿದ್ದಾಗ ಮತ್ತೆ ಅವರನ್ನು ಭೇಟಿಯಾಗುವ ಭರವಸೆ ಹೊಂದಿದ್ದೆ. ಆದರೆ, ಜೂನ್ 11ರಂದು ಸಿದ್ದಲಿಂಗಯ್ಯ ಸಾವಿನ ಸುದ್ದಿ ಸಿಡಿಲಿನಂತೆ ಬಂದು ಅಪ್ಪಳಿಸಿತು.

ಸಿದ್ದಲಿಂಗಯ್ಯ ಅವರನ್ನು ನಾನು ಮೊದಲು ಭೇಟಿಯಾಗಿದ್ದು ದಾವಣಗೆರೆಯಲ್ಲಿ. ಅದು 1976ನೇ ಇಸವಿ. ದಾವಣಗೆರೆಯಲ್ಲಿ ಪ್ರಗತಿಪಂಥ ಸಾಹಿತ್ಯ ಸಮ್ಮೇಳನವನ್ನು ನಾವೇ ಸಂಘಟಿಸಿದ್ದೆವು. ಆಗ ದಾವಣಗೆರೆ ನಗರಸಭೆ ಅಧ್ಯಕ್ಷರಾಗಿದ್ದ ಕಾಮ್ರೇಡ್ ಪಂಪಾಪತಿ ಅವರು ನಮಗೆ ಬೆಂಬಲವಾಗಿ ನಿಂತು ಸಮ್ಮೇಳನ ನಡೆಸಿಕೊಟ್ಟರು.

ಈ ಸಮ್ಮೇಳನಕ್ಕೆ ಸಿದ್ದಲಿಂಗಯ್ಯ ಬಂದಿದ್ದರು. ಆಗ ಅವರ ವಯಸ್ಸು 21. ನನ್ನದೂ ಕೂಡ ಅದೇ ವಯಸ್ಸು. ಡಿ.ಆರ್.ನಾಗರಾಜ್ ಮತ್ತು ಶೂದ್ರ ಶ್ರೀನಿವಾಸರ ಜೊತೆಗೆ ಬಂದಿದ್ದ ಸಿದ್ದಲಿಂಗಯ್ಯನವರನ್ನು ನನಗೆ ನಿರಂಜನ ಪರಿಚಯ ಮಾಡಿಸಿದರು.

ಅಂದು ದಾವಣಗೆರೆಯ ರಾಜನಹಳ್ಳಿ ಹನುಮಂತಪ್ಪನವರ ಛತ್ರದಲ್ಲಿ ನಡೆದ ಸಮ್ಮೇಳನದಲ್ಲಿ ಸಿದ್ದಲಿಂಗಯ್ಯ ಅವರ ‘ಹೊಲೆ ಮಾದಿಗರ ಹಾಡು’ ಕವನ ಸಂಕಲನವನ್ನು ನಿರಂಜನ ಬಿಡುಗಡೆ ಮಾಡಿದರು. ಬಸವರಾಜ ಕಟ್ಟೀಮನಿ ಹೆಮ್ಮೆಯಿಂದ ಸಿದ್ದಲಿಂಗಯ್ಯ ಎಂಬ ತರುಣನನ್ನು ಸಭಿಕರಿಗೆ ಪರಿಚಯಿಸಿದರು.

ಅಂದು ಬಿಡುಗಡೆಯಾದ 30 ರಿಂದ 40 ಪುಟಗಳ, ಎರಡು ರೂ. ಬೆಲೆಯ ಈ ಕವನ ಸಂಕಲನ ಸಿದ್ದಲಿಂಗಯ್ಯ ಅವರನ್ನು ಕನ್ನಡದ ಮಾರ್ಗ ಪ್ರವರ್ತಕ ಕವಿಯನ್ನಾಗಿಸಿತು. ಈ ಕವನಗಳು ಬರೀ ವೇದಿಕೆಯ ಕವಿ ಗೋಷ್ಠಿಗಳಿಗೆ ಸೀಮಿತವಾಗಲಿಲ್ಲ. ಜನ ಚಳವಳಿಯ ಹಾಡುಗಳಾಗಿ ಮುಂದಿನ ಐದಾರು ದಶಕಗಳವರಗೆ ಬೀದಿ, ಬೀದಿಗೆ ಬಂದವು. ಈಗಲೂ ಎಲ್ಲೇ ಪ್ರತಿಭಟನೆ, ಚಳವಳಿ ನಡೆಯಲಿ, ಅಲ್ಲಿ ‘ಯಾರಿಗೆ ಬಂತು ಎಲ್ಲಿಗೆ ಬಂತು ನಲವತ್ತೇಳರ ಸ್ವಾತಂತ್ರ’ ಮುಂತಾದ ಹಾಡುಗಳು ಪ್ರತಿಧ್ವನಿಸುತ್ತವೆ.

ಆರಂಭದ ದಿನಗಳಲ್ಲಿ ವಿದ್ಯಾರ್ಥಿಯಾಗಿದ್ದಾಗ ಸಿದ್ದಲಿಂಗಯ್ಯ ಕಮ್ಯುನಿಸ್ಟ್ ಚಳವಳಿಯ ಆಕರ್ಷಣೆಗೆ ಒಳಗಾಗಿದ್ದರು. 70ರ ದಶಕದ ಆರಂಭದ ವರ್ಷಗಳಲ್ಲಿ ಬೆಂಗಳೂರಿನ ಮಲ್ಲೇಶ್ವರದ ಕೃಷ್ಣ ಭವನ ಹೊಟೇಲ್‌ನಲ್ಲಿ ನಡೆಯುತ್ತಿದ್ದ ಸಿಪಿಐ ಅಧ್ಯಯನ ಶಿಬಿರಗಳಿಗೆ ಅವರು ಬರುತ್ತಿದ್ದರು. ಮುಂದೆ ಪ್ರಸನ್ನ ಮತ್ತು ಎಂ.ಕೆ.ಭಟ್ಟರ ಸಂಪರ್ಕ ದಿಂದ ಸಮುದಾಯ ಸಂಘಟನೆಯಲ್ಲಿ ತೊಡಗಿಸಿಕೊಂಡರು.

ಆಗ ಪೌರಾಡಳಿತ ಸಚಿವರಾಗಿದ್ದ ಬಿ.ಬಸವಲಿಂಗಪ್ಪನವರು ಮೈಸೂರಿನಲ್ಲಿ ಭಾಷಣ ಮಾಡುವಾಗ ಬೂಸಾ ಸಾಹಿತ್ಯದ ಬಗ್ಗೆ ಆಡಿದ ಮಾತು ಕೋಲಾಹಲಕ್ಕೆ ಕಾರಣವಾಯಿತು. ಜಾತಿವಾದಿ ಶಕ್ತಿಗಳು ಅವರ ರಾಜೀನಾಮೆಗೆ ಪಟ್ಟು ಹಿಡಿದು ದಂಗೆ ಎಬ್ಬಿಸಿದವು. ಆಗ ಬಸವಲಿಂಗಪ್ಪ ನವರ ಪರವಾಗಿ ವಿದ್ಯಾರ್ಥಿಗಳನ್ನು ಸಂಘಟಿಸಿದ ಸಿದ್ದಲಿಂಗಯ್ಯ ಅವರ ಮೇಲೆ ಐದಾರು ಸಲ ಮಾರಣಾಂತಿಕ ಹಲ್ಲೆ ನಡೆಯಿತು.ಅದರಲ್ಲಿ ಸಿದ್ದಲಿಂಗಯ್ಯ ಬದುಕಿ ಉಳಿದದ್ದೇ ಅಚ್ಚರಿ.

ಈ ಬೂಸಾ ಚಳವಳಿಯ ನಂತರ ಬಸವಲಿಂಗಪ್ಪ ರಾಜೀನಾಮೆ ನೀಡಿದರು. ಅದೇ ಕಾಲಘಟ್ಟದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪನೆಯಾಯಿತು. ಭದ್ರಾವತಿ ಯಲ್ಲಿ ಕಾಲೇಜು ಉಪನ್ಯಾಸಕರಾಗಿದ್ದ ಬಿ.ಕೃಷ್ಣಪ್ಪಇದರ ಸಂಸ್ಥಾಪಕರು. ಈ ಸಂಘಟನೆಗೆ ಕೃಷ್ಣಪ್ಪ ಅವರ ಜೊತೆ ದೇವನೂರ ಮಹಾದೇವ ಮತ್ತು ಸಿದ್ದಲಿಂಗಯ್ಯ ಸಂಚಾಲಕರು.

ಬಿ.ಕೃಷ್ಣಪ್ಪ, ದೇವನೂರ ಮಹಾದೇವ ಮತ್ತು ಸಿದ್ದಲಿಂಗಯ್ಯ ವಿಭಿನ್ನ ವಿಚಾರಧಾರೆಗಳಿಗೆ ಸೇರಿದವರು. ಕೃಷ್ಣಪ್ಪ ಅಂಬೇಡ್ಕರ್‌ವಾದಿ, ದೇವನೂರು ಲೋಹಿಯಾವಾದಿ ಹಾಗೂ ಸಿದ್ದಲಿಂಗಯ್ಯ ಅಂಬೇಡ್ಕರರನ್ನು ಒಪ್ಪಿಕೊಂಡ ಮಾರ್ಕ್ಸ್‌ವಾದಿ. ಹೀಗಾಗಿ ಇವರ ನಡುವೆ ಆಗಾಗ ತಾತ್ವಿಕ ಭಿನ್ನಾಭಿಪ್ರಾಯ ಬರುತ್ತಿತ್ತು. ಅದೇ ಮುಂದೆ ದಸಂಸ ಒಡಕಿಗೆ ಕಾರಣವಾಯಿತು. ಈಗ ಅದನ್ನೆಲ್ಲ ಬರೆಯಲು ಹೊರಟರೆ ಈ ಅಂಕಣದ ಜಾಗ ಸಾಲುವುದಿಲ್ಲ.

ಮುಂದೆ ಸಿದ್ದಲಿಂಗಯ್ಯನವರ ದಾರಿ ಬೇರೆಯಾಯಿತು. ಹೋರಾಟಗಾರರನ್ನು ಬಲೆ ಬೀಸಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ ರಾಮಕೃಷ್ಣ ಹೆಗಡೆ ಅವರು ಮುಖ್ಯಮಂತ್ರಿಯಾದಾಗ, ಸಿದ್ದಲಿಂಗಯ್ಯನವರನ್ನು ಕರೆದು ಮೆತ್ತಗೆ ಮಾತನಾಡಿ ವಿಧಾನ ಪರಿಷತ್‌ಗೆನಾಮಕರಣ ಮಾಡಿದರು. ಹೆಗಡೆಯವರು ಕರ್ನಾಟಕದ ಮೊದಲ ಕಾಂಗ್ರೆಸೇತರ ಸರಕಾರದ ಮುಖ್ಯಮಂತ್ರಿಯಾಗಿದ್ದರೂ ಅವರು ಚಳವಳಿಗಳನ್ನು ಇಷ್ಟ ಪಡುತ್ತಿರಲಿಲ್ಲ. ಸಿದ್ದಲಿಂಗಯ್ಯನವರನ್ನು ಮೇಲ್ಮನೆಗೆ ನಾಮಕರಣ ಮಾಡಿ ಮೌನವಾಗಿಸಿದರು. ಇನ್ನೊಂದೆಡೆ ಪ್ರೊ. ನಂಜುಂಡಸ್ವಾಮಿ ಅವರ ರೈತ ಸಂಘ ಬುಟ್ಟಿಗೆ ಬೀಳದಿದ್ದಾಗ, ಅದನ್ನು ದಮನ ನೀತಿಯ ಮೂಲಕ ಹತ್ತಿಕ್ಕಲು ಯತ್ನಿಸಿದರು.

ಇದು ಸಿದ್ದಲಿಂಗಯ್ಯ ನಡೆದು ಬಂದ ದಾರಿ. ಅವರು ಶಾಸಕರಾದ ನಂತರ ಯಾವಾಗಾದರೊಮ್ಮೆ ಅಪರೂಪಕ್ಕೆ ಸಿಗುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಮತ್ತೆ ಅವರು ಸಂಪರ್ಕಕ್ಕೆ ಸಿಕ್ಕಿ ಆಗಾಗ ಬೆಂಗಳೂರಿನ ನಮ್ಮ ಮನೆಗೆ ಬಂದು ದಿನವಿಡೀ ಹರಟೆ ಹೊಡೆಯುತ್ತಿದ್ದರು. ಅವರ ಕಾವ್ಯದ ಭಾಷೆ ಎಷ್ಟೇ ಹರಿತವಾದರೂ ಅವರ ಮಾತು ಮಾತ್ರ ಅತ್ಯಂತ ಮೃದು. ಸಿದ್ದಲಿಂಗಯ್ಯನವರಲ್ಲಿ ಕಪಟವಿರಲಿಲ್ಲ.

ವಿಧಾನ ಪರಿಷತ್ತಿನ ಸದಸ್ಯರಾದರೂ ಸದನವನ್ನು ಜನಪರ ವಿಚಾರಗಳ ಮಂಡನೆಗೆ ಬಳಸಿಕೊಂಡರು. ದಕ್ಷಿಣ ಕನ್ನಡದ ಕೊರಗರಿಗೆ ಸಂಬಂಧಿಸಿದ ಅಜಲು ಪದ್ಧತಿಯನ್ನು ಕೊನೆಗೊಳಿಸುವ ಬಗ್ಗೆ, ಅಂತರ್ಜಾತಿ ವಿವಾಹಿತರಿಗೆ ಉದ್ಯೋಗದಲ್ಲಿ ಮೀಸಲಾತಿ ಬಗ್ಗೆ ಹೀಗೆ ದಮನಿತ ಸಮುದಾಯಗಳ ಹಲವಾರು ವಿಷಯಗಳ ಬಗ್ಗೆ ಸರಕಾರದ ಗಮನ ಸೆಳೆದು ಯಶಸ್ವಿಯಾಗಿದ್ದು ಸದನದ ದಾಖಲೆಯಲ್ಲಿದೆ.

ಸಿದ್ದಲಿಂಗಯ್ಯನವರು ಈಗ ನಮ್ಮ ನಡುವೆ ಇಲ್ಲ. ಅವರು ಬರೆದ ಪದ್ಯಗಳು ಜನ ಹೋರಾಟದ ಹಾಡುಗಳಾಗಿ ಇಂದಿಗೂ ಸ್ಫೂರ್ತಿ ನೀಡುತ್ತಿವೆ. ಇಂತಹ ಅನೇಕ ಲೇಖಕರು, ಚಿಂತಕರನ್ನು ಕೊರೋನ ಬಲಿ ತೆಗೆದುಕೊಂಡಿತು. ಇವರು ಮತ್ತೆ ನಮಗೆ ಸಿಗುವುದಿಲ್ಲ. ಮಾತಾಡುವುದಿಲ್ಲ. ನಾವಿರುವವರೆಗೆ ಅವರ ನೆನಪು ನಿತ್ಯ ಹಸಿರಾಗಿರುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News