ಶಶಿಕಲಾ ಜೊತೆ ಮಾತನಾಡಿದ 16 ಸದಸ್ಯರನ್ನು ಉಚ್ಛಾಟಿಸಿದ ಎಐಎಡಿಎಂಕೆ

Update: 2021-06-15 05:22 GMT

ಹೊಸದಿಲ್ಲಿ, ಜೂ.14: ಉಚ್ಛಾಟಿತ ಮಾಜಿ ಮಧ್ಯಂತರ ಪ್ರಧಾನ ಕಾರ್ಯದರ್ಶಿ ವಿ.ಕೆ. ಶಶಿಕಲಾ ಅವರೊಂದಿಗೆ ಮಾತನಾಡಿದ ತನ್ನ ಪಕ್ಷದ 16 ಸದಸ್ಯರನ್ನು ಎಐಎಡಿಎಂಕೆ ಉಚ್ಛಾಟಿಸಿದೆ.

ಉಚ್ಛಾಟಿತ ಎಐಎಡಿಎಂಕೆ ಸದಸ್ಯರಲ್ಲಿ ಎಐಎಡಿಎಂಕೆ ವಕ್ತಾರ ವಿ. ಪುಗಳೇಂದಿ, ಮಾಜಿ ಸಚಿವ ಎಂ. ಆನಂದನ್, ಮಾಜಿ ಸಂಸತ್ ಸದಸ್ಯ ವಿ.ಕೆ. ಚಿನ್ನಸ್ವಾಮಿ ಸೇರಿದ್ದಾರೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಆಪ್ತರಾಗಿದ್ದ ಶಶಿಕಲಾ ಅವರೊಂದಿಗೆ ಮಾತನಾಡುವ ಯಾವುದೇ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರತಿಪಾದಿಸಿ ಎಐಎಡಿಎಂಕೆ ನಿರ್ಣಯವನ್ನು ಕೂಡ ಅಂಗೀಕರಿಸಿದೆ. ಕಳೆದ ತಮಿಳುನಾಡು ವಿಧಾನ ಸಭೆ ಚುನಾವಣೆಯ ಒಂದು ತಿಂಗಳು ಮೊದಲು ಶಶಿಕಲಾ ತಾನು ರಾಜಕೀಯ ತ್ಯಜಿಸುವುದಾಗಿ ಘೋಷಿಸಿದ್ದರು. ಇದಕ್ಕೂ ಮೊದಲು 2017ರಲ್ಲಿ ಅವರನ್ನು ಎಐಎಡಿಎಂಕೆಯಿಂದ ಉಚ್ಛಾಟಿಸಲಾಗಿತ್ತು. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಶಶಿಕಲಾ ಅವರು ಎಐಎಡಿಎಂಕೆ ಸದಸ್ಯರೊಂದಿಗೆ ಮಾತನಾಡಿದ್ದಾರೆ ಎಂದು ಹೇಳಲಾದ ಆಡಿಯೊ ತುಣುಕು ಅವರು ಸಕ್ರಿಯ ರಾಜಕೀಯಕ್ಕೆ ಮರಳುವ ಸೂಚನೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News