ಇರಾನಿನಿಂದ ಶೇ.60ರಷ್ಟು ಸಂವರ್ಧಿತ 6.5 ಕೆ.ಜಿ.ಯುರೇನಿಯಂ ಉತ್ಪಾದನೆ

Update: 2021-06-16 15:11 GMT

ರಿಯಾದ್,ಜೂ.16: ಇರಾನ್ 6.5 ಕೆ.ಜಿ ಯುರೇನಿಯಂ ಅನ್ನು ಶೇ.60ರಷ್ಟು ಸಮೃದ್ಧಗೊಳಿಸಿದೆ ಎಂದು ಮಂಗಳವಾರ ಸರಕಾರವು ತಿಳಿಸಿದೆ. ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಶೇ.90ರಷ್ಟು ಸಂವರ್ಧಿತ ಯುರೇನಿಯಂ ಅಗತ್ಯವಾಗಿದೆ ಮತ್ತು ಇರಾನ್ ಆ ಮಟ್ಟವನ್ನು ಸಮೀಪಿಸಿರುವುದು ವಿಶ್ವ ಪರಮಾಣು ಶಕ್ತಿಗಳೊಂದಿಗೆ ಅದರ ಪರಮಾಣು ಮಾತುಕತೆಗಳಲ್ಲಿ ಗಲಿಬಿಲಿಯನ್ನು ಸೃಷ್ಟಿಸಿದೆ.

ಇರಾನ್ ಶೇ.20ರಷ್ಟು ಸಂವರ್ಧಿತ 108 ಕೆ.ಜಿ.ಯುರೇನಿಯಂ ಅನ್ನೂ ಉತ್ಪಾದಿಸಿದೆ ಎಂದು ಸರಕಾರದ ವಕ್ತಾರ ಅಲಿ ರಾಬಿಯಿ ಅವರನ್ನು ಉಲ್ಲೇಖಿಸಿ ಸರಕಾರಿ ಮಾಧ್ಯಮಗಳು ವರದಿ ಮಾಡಿವೆ.

ತಾನು ಯುರೇನಿಯಂ ಅನ್ನು ಶೇ.60ರಷ್ಟು ಸಮೃದ್ಧಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸುತ್ತಿದ್ದೇನೆ ಎಂದು ಇರಾನ್ ಎಪ್ರಿಲ್ನಲ್ಲಿ ತಿಳಿಸಿತ್ತು. ಇದಕ್ಕೂ ಮುನ್ನ ತನ್ನ ಬದ್ಧಶತ್ರು ಇಸ್ರೇಲ್ ತನ್ನ ಪ್ರಮುಖ ಪರಮಾಣು ಸಾವರವನ್ನು ನಾಶಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅದು ಆರೋಪಿಸಿತ್ತು.

ಇರಾನ್ ಮಿಲಿಟರಿ ಬಳಕೆಗೆ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಪಾಶ್ಚಾತ್ಯ ದೇಶಗಳು ಅವಕಾಶ ನೀಡುವುದಿಲ್ಲ ಎಂದು ಸೌದಿ ಅರೇಬಿಯದ ರಾಜಕೀಯ ವಿಶ್ಲೇಷಕ ಖಾಲಿದ್ ಅಲ್-ಮತ್ರಾಫಿ ಹೇಳಿರುವುದನ್ನು ಅರಬ್ ನ್ಯೂಸ್ ಸುದ್ದಿಸಂಸ್ಥೆಯು ಉಲ್ಲೇಖಿಸಿದೆ.
ಇರಾನಿನ ಕ್ರಮವು,ವಿಶೇಷವಾಗಿ ತನ್ನ ಪರಮಾಣು ಕಾರ್ಯಕ್ರಮದ ರಹಸ್ಯಗಳ ಬಹಿರಂಗ ಸೇರಿದಂತೆ ಅದು ಇತ್ತೀಚಿಗೆ ಅನುಭವಿಸಿದ ಹಿನ್ನಡೆಗಳ ಬಳಿಕ ವಿಶ್ವ ಪರಮಾಣು ಶಕ್ತಿಗಳೊಂದಿಗೆ ಮಾತುಕತೆಯಲ್ಲಿ ತನ್ನ ಸ್ಥಿತಿಯನ್ನು ಉತ್ತಮಗೊಳಿಸುವ ಪ್ರಯತ್ನವಾಗಿದೆ ಎಂದ ಮತ್ರಾಫಿ, ಅಮೆರಿಕವು ಇರಾನ್ ಜೊತೆ ತಾನು ಪರೋಕ್ಷವಾಗಿ ನಡೆಸುತ್ತಿರುವ ಮಾತುಕತೆಗಳ ಬಗ್ಗೆ ವಿವಿಧ ಅಧಿಕಾರಿಗಳ ಮೂಲಕ ಪ್ರದೇಶದಲ್ಲಿಯ ತನ್ನ ಮಿತ್ರದೇಶಗಳ,ಪ್ರಮುಖವಾಗಿ ಸೌದಿ ಅರೇಬಿಯದ ಜೊತೆ ಸಮಾಲೋಚಿಸುತ್ತಿರುವುದನ್ನು ದೃಢಪಡಿಸಿದೆ ಮತ್ತು ಹಿಂದಿನ ಒಪ್ಪಂದದ ತಪ್ಪುಗಳನ್ನು ನಿವಾರಿಸಲು ನೆರವಾಗಲಿದೆ ಎಂದು ಹೇಳಿದರು.

ಮತ್ರಾಫಿ 2015 ಜುಲೈನಲ್ಲಿ ಬರಾಕ್ ಒಬಾಮಾ ಅಮೆರಿಕದ ಅಧ್ಯಕ್ಷರಾಗಿದ್ದಾಗ ಸಹಿಹಾಕಲಾಗಿದ್ದ ಒಪ್ಪಂದವನ್ನು ಪ್ರಸ್ತಾಪಿಸಿ ಮಾತನಾಡುತ್ತಿದ್ದರು. ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ನಿಲ್ಲಿಸಿದರೆ ನಿರ್ಬಂಧಗಳನ್ನು ಹಿಂದೆಗೆದುಕೊಳ್ಳುವ ಮೂಲಕ ಅದಕ್ಕೆ ಬಿಲಿಯಗಟ್ಟಲೆ ಡಾಲರ್ಗಳ ಕೊಡುಗೆಯನ್ನು ಒಪ್ಪಂದವು ಮುಂದಿರಿಸಿತ್ತು.
ಇರಾನ್ ತನ್ನ 40 ವರ್ಷಗಳ ಸಂಘರ್ಷ ನೀತಿಯನ್ನು ತೊರೆಯುವ ಅಗತ್ಯಕ್ಕೆ ಒತ್ತು ನೀಡಿದ ಮತ್ರಾಫಿ, ಪ್ರದೇಶದಲ್ಲಿಯ ದೇಶಗಳು ದಶಕಗಳ ಘರ್ಷಣೆಗಳ ಬಳಿಕ ಈಗ ಶಾಂತಿಯನ್ನು ಕಾಣಲು ಬಯಸಿವೆ ಎಂದರು.
 
ಇರಾನ್ ಮತ್ತು ವಿಶ್ವ ಪರಮಾಣು ಶಕ್ತಿಗಳ ನಡುವಿನ 2015ರ ಒಪ್ಪಂದಕ್ಕೆ ಮರುಜೀವ ನೀಡಲು ವಿಯೆನ್ನಾದಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಪರೋಕ್ಷ ಮಾತುಕತೆಗಳು ನಡೆಯುತ್ತಿದ್ದು,ಇದರ ನಡುವೆಯೇ ಇರಾನ್ ಯುರೇನಿಯಂ ಸಂವರ್ಧನೆ ವಿಷಯವನ್ನು ಬಹಿರಂಗಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News