ಗೃಹಿಣಿಯ ವೃತ್ತಿಗೆ ವೇತನ ನಿಗದಿಯಾದರೆ?

Update: 2021-06-18 08:27 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಅಪಘಾತ ಪ್ರಕರಣವೊಂದರದಲ್ಲಿ ನೀಡಬೇಕಾದ ವಿಮೆಗೆ ಸಂಬಂಧಿಸಿ, ಪತಿಯ ವೇತನವನ್ನಲ್ಲದೆ, ಮೃತಪಟ್ಟ ಪತ್ನಿಯ ಗೃಹಿಣಿಯ ವೇತನ ರಹಿತ ಸೇವೆಯನ್ನೂ ಪರಿಗಣಿಸುವಂತೆ ಸುಪ್ರೀಂಕೋರ್ಟ್ ತೀರ್ಪೊಂದನ್ನು ನೀಡಿದೆ. 2014ರಲ್ಲಿ ನಡೆದ ಅಪಘಾತವೊಂದರಲ್ಲಿ ದಂಪತಿ ಮೃತಪಟ್ಟಿದ್ದು, ಸಾವಿಗೀಡಾದ ಗೃಹಿಣಿಯ ಗೃಹ ಕೃತ್ಯವನ್ನು ಕಾಲ್ಪನಿಕ ಆದಾಯ ಎಂದು ಪರಿಗಣಿಸಿ ಅವರ ಮಕ್ಕಳಿಗೆ ಒಟ್ಟು 33.20 ಲಕ್ಷ ರೂಪಾಯಿ ಪರಿಹಾರವನ್ನು ನೀಡಲು ಕೋರ್ಟ್ ಆದೇಶಿಸಿದೆ. ಗೃಹಿಣಿಯರು ಮನೆಯಲ್ಲಿ ಪ್ರತಿನಿತ್ಯ ನಿರ್ವಹಿಸುವ ಕೆಲಸವೂ ಆರ್ಥಿಕ ಚಟುವಟಿಕೆಯೇ ಎಂದು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ. ಈ ತೀರ್ಪು ಕೇವಲ ವಿಮಾ ಕಂಪೆನಿಯೊಂದಕ್ಕೆ ನೀಡಿದ ಆದೇಶ ಮಾತ್ರವೇ ಅಲ್ಲ.

ಇಂದು ಭಾರತದ ಗೃಹಿಣಿಯರ ಕುರಿತಂತೆ ಈ ಸಮಾಜ ಮತ್ತು ಪುರುಷ ಪ್ರಧಾನ ವ್ಯವಸ್ಥೆ ಹೊಂದಿರುವ ಮಾನಸಿಕತೆಗೆ ನೀಡಿದ ಲಸಿಕೆಯೂ ಆಗಿದೆ. ಯಾವುದೇ ಅಧಿಕೃತ ಸಂಸ್ಥೆಯಲ್ಲಿ ಕೆಲಸ ಮಾಡದ ಗೃಹಿಣಿಯ ಸೇವೆಯನ್ನು ವಿಮಾ ಕಂಪೆನಿ ಗುರುತಿಸದೇ ಇರುವುದು ಸಹಜವಾಗಿದೆ. ಆದರೆ ಇಂದು ಪುರುಷನೇ ಗೃಹಿಣಿಯ ಮನೆಗೆಲಸಗಳನ್ನು ಆರ್ಥಿಕ ದೃಷ್ಟಿಕೋನದಿಂದ ನೋಡಲು ಸಿದ್ಧನಿಲ್ಲ. ಉದ್ಯೋಗವೆಂದರೆ, ಅಧಿಕೃತವಾಗಿ ಯಾವುದಾದರೂ ಕಚೇರಿಯಲ್ಲಿ ಕೆಲಸ ನಿರ್ವಹಿಸಬೇಕು ಮತ್ತು ಆ ಕೆಲಸಕ್ಕೆ ಅಧಿಕೃತ ವೇತನಗಳನ್ನು ನಿಗದಿ ಪಡಿಸಬೇಕು. ಸಾಧಾರಣವಾಗಿ ಕಚೇರಿಗೆ ತೆರಳದೆ ಗೃಹಕೃತ್ಯವನ್ನೇ ನಿರ್ವಹಿಸುವ ಮಹಿಳೆಯನ್ನು ‘ನಿರುದ್ಯೋಗಿ’ ಎಂದೇ ಭಾವಿಸಲಾಗುತ್ತದೆ. ಹಾಗೆಯೇ ಕಚೇರಿಯಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರೆಲ್ಲರೂ ಸ್ವಾವಲಂಬಿಗಳು ಎಂಬ ತಪ್ಪು ಭಾವನೆ ಕೂಡ ಸಮಾಜದೊಳಗಿದೆ. ಅನೇಕ ಸಂದರ್ಭದಲ್ಲಿ ಈ ‘ಸ್ವಾವಲಂಬಿ’ ಹೆಸರಲ್ಲೇ ಮಹಿಳೆಯರನ್ನು ಎರಡೆರಡು ಕಡೆ ದುಡಿಸಿ ಶೋಷಿಸಲಾಗುತ್ತದೆ.

ಯಾವುದೇ ಪುರುಷನನ್ನು ‘ನಿಮ್ಮ ಪತ್ನಿ ಏನು ಕೆಲಸ ಮಾಡುತ್ತಿದ್ದಾಳೆ?’ ಎಂದು ಕೇಳಿದರೆ ತಕ್ಷಣ ಸಿಗುವ ಉತ್ತರ ‘ಇಲ್ಲ, ಆಕೆ ಕೆಲಸಕ್ಕೆ ಹೋಗುವುದಿಲ್ಲ, ಮನೆಯಲ್ಲೇ...’ ಎಂಬ ಉತ್ತರ ಸಿಗುತ್ತದೆ. ಮನೆ ಎನ್ನುವುದೂ ಒಂದು ಸಂಸ್ಥೆ. ಅಲ್ಲಿ ಆಕೆಯ ಅತ್ತೆ, ಮಾವ, ಮಕ್ಕಳು ಇನ್ನಿತರರೂ ಇರಬಹುದು. ಅವರ ಯೋಗಕ್ಷೇಮ, ಮನೆಯ ಶುಚಿತ್ವ, ಅಡುಗೆ, ಮಕ್ಕಳ ಲಾಲನೆ ಪಾಲನೆ ಇವುಗಳಿಗೆ ಯಾವ ಸಂಸ್ಥೆಯೂ ಅಧಿಕೃತ ವೇತನದ ಬೆಲೆ ಕಟ್ಟಲು ಸಾಧ್ಯವಿಲ್ಲ. ಸಾಧಾರಣವಾಗಿ ನಗರ ಪ್ರದೇಶಗಳಲ್ಲಿ ಮನೆಗೆಲಸಕ್ಕೆ ಸಹಕರಿಸಲು ನೌಕರರನ್ನು ನೇಮಿಸುವುದಿದೆ. ಗ್ರಾಮೀಣ ಪ್ರದೇಶದಲ್ಲಿ ಅಂತಹ ವ್ಯವಸ್ಥೆಯೂ ಇರುವುದಿಲ್ಲ. ಬೆಳಗ್ಗೆ ಐದು ಗಂಟೆಯಿಂದ ರಾತ್ರಿ 12 ಗಂಟೆಯವರೆಗೂ ಕೆಲಸ ಜಾರಿಯಲ್ಲಿರುತ್ತದೆ. ಇತರ ಕಚೇರಿಗಳಲ್ಲಿರುವಂತೆ ಮಧ್ಯಾಹ್ನದ ಬಿಡುವು, ಸಂಜೆಯ ಬಿಡುವು ಎನ್ನುವುದು ಅವರಿಗಿರುವುದಿಲ್ಲ. ಹಾಗೆಯೇ ವಾರದ ರಜೆ, ತಿಂಗಳ ರಜೆಗಳ ಸೌಲಭ್ಯಗಳೂ ಇರುವುದಿಲ್ಲ. ನಿವೃತ್ತಿ, ಪಿಂಚಣಿ ಇತ್ಯಾದಿಗಳನ್ನು ನಿರೀಕ್ಷಿಸುವಂತೆಯೇ ಇಲ್ಲ.

ಒಂದು ರೀತಿಯಲ್ಲಿ ‘ಭಾವನಾತ್ಮಕ ನೆಲೆ’ಯಲ್ಲಿ ಗೃಹಿಣಿಯನ್ನು ಶೋಷಿಸಲಾಗುತ್ತದೆ. ದಿನವಿಡೀ ದುಡಿಸುವುದು ಮಾತ್ರವಲ್ಲದೆ, ಆಕೆಯನ್ನು ನಿರುದ್ಯೋಗಿ ಎನ್ನುವ ಕೀಳರಿಮೆ ಮೂಡುವಂತೆ ನಡೆಸಿಕೊಂಡು ಬರಲಾಗುತ್ತಿದೆ. ಸುಪ್ರೀಂಕೋರ್ಟ್ ಸೂಚಿಸಿದಂತೆ ಅವರ ಕಾಲ್ಪನಿಕ ಆದಾಯವನ್ನು ಲೆಕ್ಕ ಹಾಕಿದರೆ, ಪುರುಷ ದುಡಿಯುವ ಹಲವು ಪಟ್ಟು ಹಣವನ್ನು ಪತ್ನಿ ಸಂಪಾದಿಸುತ್ತಾಳೆ. ಅಥವಾ ಆಕೆಯ ಸೇವೆಗೆ ಬೆಲೆ ಕಟ್ಟುವುದೇ ಅಸಾಧ್ಯವಾಗಿ ಬಿಡಬಹುದು. ಕುಟುಂಬ ಎನ್ನುವುದು ಒಂದು ಅತ್ಯುತ್ತಮವಾದ ಸಂಘಟನೆ. ಇದು ಸಮಾಜದ ತಳಹದಿಯೂ ಹೌದು. ಗೃಹಿಣಿ ಇದರ ಮುಖ್ಯಸ್ಥೆ. ಮನೆಯ ಪೂರ್ಣ ಉಸ್ತುವಾರಿಯನ್ನು ನೇರವಾಗಿ ನಿರ್ವಹಿಸುವುದು ಮಹಿಳೆ. ಪುರುಷ ಕಚೇರಿಗೆಂದು ಹೊರಟಾಗ ಮನೆಯ ಒಳ ಹೊರಗಿನ ಹೊಣೆಗಾರಿಕೆ ಗೃಹಿಣಿಯ ಕೈಯಲ್ಲಿರುತ್ತದೆ. ಮಕ್ಕಳ ವಿದ್ಯಾಭ್ಯಾಸ, ಗುಣನಡತೆ, ಲಾಲನೆ ಪೋಷಣೆ ಇವೆಲ್ಲದರಲ್ಲೂ ಮಹಿಳೆಯ ಕೊಡುಗೆ ಬಹುದೊಡ್ಡದು. ಹೆರಿಗೆಯ ಸಂದರ್ಭದಲ್ಲಿ ಆಕೆ ಅನುಭವಿಸುವ ನೋವು, ದುಮ್ಮಾನಗಳು, ಬಳಿಕ ತಾಯಿಯಾಗಿ ಮಕ್ಕಳ ಪೋಷಣೆ ಇವೆಲ್ಲವೂ ಆರ್ಥಿಕ ಲೆಕ್ಕಾಚಾರಗಳನ್ನು ಮೀರಿದ್ದು. ಅದರರ್ಥ, ಇದಕ್ಕೂ ಆರ್ಥಿಕ ಲೆಕ್ಕಾಚಾರಕ್ಕೂ ಸಂಬಂಧವಿಲ್ಲ ಎಂದಲ್ಲ. ಇವುಗಳಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ ಎನ್ನುವ ಕಾರಣಕ್ಕಾಗಿ ಆರ್ಥಿಕ ಲೆಕ್ಕಾಚಾರದಾಚೆಗೆ ಇವುಗಳನ್ನು ನೋಡುತ್ತೇವೆ. ಒಂದು ವೇಳೆ, ಇವುಗಳಿಗೆಲ್ಲ ಬೆಲೆ ಕಟ್ಟಲು ಹೊರಟರೆ, ಅದನ್ನು ಪಾವತಿ ಮಾಡಲು ಸಾಧ್ಯವೂ ಇಲ್ಲ. ಗೃಹಿಣಿಯೊಬ್ಬರ ವೃತ್ತಿಯು ಶ್ರಮವನ್ನಷ್ಟೇ ಬೇಡುವುದಿಲ್ಲ, ಆಕೆಯ ತ್ಯಾಗ, ಬಲಿದಾನಗಳನ್ನು ಬೇಡುತ್ತದೆ. ಸಮಾಜದ ಏಳು ಬೀಳಿನ ಹಿಂದೆ ಗೃಹಿಣಿಯ ಸೋಲು-ಗೆಲುವುಗಳು ತಳಕು ಹಾಕಿಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ, ಮಹಿಳೆಗೆ ಪುರುಷನ ಸಹಕಾರ ಅತ್ಯಗತ್ಯವಾಗಿರುತ್ತದೆ.

ಕಚೇರಿಯಿಂದ ಸುಸ್ತಾಗಿ ಬಂದ ಪುರುಷ, ಮನೆ ನಿರ್ವಹಣೆಯಲ್ಲಿ ಸುಸ್ತಾಗಿರುವ ಮಹಿಳೆಯ ಕುರಿತಂತೆಯೂ ಕಾಳಜಿ ವಹಿಸಬೇಕಾಗುತ್ತದೆ. ಈ ಕಾಳಜಿ ಪರಸ್ಪರ ಕೊಡುಕೊಳ್ಳುವಿಕೆಯಾದಾಗ ಮಾತ್ರ ಮನೆ ಸುಸೂತ್ರವಾಗಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ, ಮನೆಯನ್ನು ನಿರ್ವಹಿಸುವ ಗೃಹಿಣಿಗೆ ಆತ್ಮವಿಶ್ವಾಸವನ್ನು ತುಂಬುವ, ಅವರಲ್ಲಿ ಆತ್ಮಾಭಿಮಾನವನ್ನು ಹೆಚ್ಚಿಸುವ ಕೆಲಸವೂ ಪುರುಷನಿಂದ ನಡೆಯಬೇಕು. ಅನೇಕ ಸಂದರ್ಭದಲ್ಲಿ ಮಹಿಳೆ ಮನೆ ಮತ್ತು ಕಚೇರಿಯ ಕೆಲಸಗಳೆರಡನ್ನೂ ನಿರ್ವಹಿಸಬೇಕಾಗುತ್ತದೆ. ಆರ್ಥಿಕ ಕಾರಣಕ್ಕಾಗಿ ಕೆಲವೊಮ್ಮೆ ಪತಿ ಪತ್ನಿಯರು ಜೊತೆಯಾಗಿ ದುಡಿಯುವುದು ಅನಿವಾರ್ಯವಾಗಬಹುದು. ಇದೇ ಸಂದರ್ಭದಲ್ಲಿ, ಪತ್ನಿಯನ್ನು ಕಚೇರಿಯಲ್ಲೂ, ಮನೆಯಲ್ಲೂ ಏಕಕಾಲದಲ್ಲಿ ದುಡಿಸುವುದು ಶೋಷಣೆಯಾಗುತ್ತದೆ. ಮನೆಯ ಆರ್ಥಿಕ ನೆರವಿಗೆ ಪತ್ನಿ ಕಚೇರಿಯಲ್ಲಿ ದುಡಿಯುತ್ತಾಳೆ ಎಂದಾದರೆ, ತನಗೆ ನೆರವಾಗುತ್ತಿರುವ ಪತ್ನಿಗೆ ಮನೆಗೆಲಸದಲ್ಲಿ ಪತಿಯೂ ನೆರವಾಗಬೇಕಾಗುತ್ತದೆ.

ಹೊರಗಿನ ಕೆಲಸದಲ್ಲಿ ಕೊಡುಕೊಳ್ಳುವಿಕೆ ಇದ್ದಾಗ, ಮನೆಯೊಳಗಿನ ಕೆಲಸದಲ್ಲೂ ಪರಸ್ಪರ ಕೊಡುಕೊಳ್ಳುವಿಕೆಯಿರಬೇಕು. ಪತ್ನಿ ಕಚೇರಿಯಲ್ಲಿ ಕೆಲಸಮಾಡಬೇಕಾದ ಸಂದರ್ಭದಲ್ಲಿ ಮಕ್ಕಳ ಬಗ್ಗೆ, ಕುಟುಂಬದ ಬಗ್ಗೆ ಯೋಚಿಸುತ್ತಾ ಹೆಚ್ಚು ಒತ್ತಡವನ್ನು ಅನುಭವಿಸುತ್ತಾಳೆ. ತಾಯಿಯ ಮಡಿಲಲ್ಲಿ ಬೆಳೆಯುವ ಮಗುವಿಗೂ, ದಾದಿಯ ಕೈಯಲ್ಲಿ ಅಥವಾ ಮನೆ ಕೆಲಸದಾಳುವಿನ ಕೈಯಲ್ಲಿ ಬೆಳೆಯುವ ಮಗುವಿನ ಮನಸ್ಥಿತಿಗೂ ವ್ಯತ್ಯಾಸವಿದೆ. ತಾಯಿ ನೀಡಬಹುದಾದುದನ್ನು ಮನೆಗೆಲಸದಾಳು ನೀಡಲು ಸಾಧ್ಯವಿಲ್ಲ. ಯಾಕೆಂದರೆ ಮನೆಗೆಲಸದಾಳುಗಳು ಕೇವಲ ವೇತನಕ್ಕಾಗಿ ಕಾರ್ಯನಿರ್ವಹಿಸುವವರು. ಗೃಹಿಣಿ ವೇತನವನ್ನು ಮೀರಿ ತನ್ನ ಸೇವೆಯನ್ನು ಧಾರೆಯೆರೆಯುವವಳು. ಒಂದು ಕುಟುಂಬದಲ್ಲಿ ತಂದೆಯನ್ನು ಕಳೆದುಕೊಂಡ ಮಕ್ಕಳು ಆರ್ಥಿಕವಾಗಿ ಬಹುದೊಡ್ಡ ಆಸರೆಯನ್ನು ಕಳೆದುಕೊಳ್ಳುತ್ತಾರೆ ನಿಜ. ಇದೇ ಸಂದರ್ಭದಲ್ಲಿ ತಾಯಿಯನ್ನು ಕಳೆದುಕೊಂಡ ಮಕ್ಕಳ ನಷ್ಟವನ್ನು ಆರ್ಥಿಕವಾಗಿ ಇಷ್ಟೇ ಎಂದು ಲೆಕ್ಕ ಹಾಕಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ಈ ನಿಟ್ಟಿನಲ್ಲಿ, ತಾಯಿಯ ಪರವಾಗಿಯೂ ಮಕ್ಕಳಿಗೆ ಪರಿಹಾರವನ್ನು ನೀಡಬೇಕು ಎಂದು ಹೇಳಿರುವುದು ಅರ್ಥಪೂರ್ಣವಾಗಿದೆ. ಇಲ್ಲಿ, ತಾಯಿಯ ಕೆಲಸಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲವಾದರೂ, ಅದನ್ನು ಅಧಿಕೃತವಾಗಿ ಗುರುತಿಸುವ ಕೆಲಸವನ್ನು ಸುಪ್ರೀಂಕೋರ್ಟ್ ಮಾಡಿರುವುದು ಶ್ಲಾಘನೀಯ. ಈ ತೀರ್ಪು ವಿಮಾ ಕಂಪೆನಿಗೆ ಮಾತ್ರವಲ್ಲ, ಗೃಹಿಣಿಯ ಕೆಲಸದ ಕುರಿತಂತೆ ಅಸಡ್ಡೆಯನ್ನು ಹೊಂದಿರುವ ಎಲ್ಲ ಮನಸ್ಥಿತಿಗಳಿಗೂ ಒಂದು ವೌಲಿಕ ಪಾಠವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News