ಮೋಟಾರು ವಾಹನಗಳ ಪರವಾನಿಗೆ ಗಡುವನ್ನು ಸೆಪ್ಟಂಬರ್ 30ರವರೆಗೆ ವಿಸ್ತರಿಸಿದ ಕೇಂದ್ರ ಸರಕಾರ

Update: 2021-06-17 18:00 GMT

ಹೊಸದಿಲ್ಲಿ, ಜೂ. 17: ಕೊರೋನ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಚಾಲನಾ ಪರವಾನಿಗೆ (ಡಿಎಲ್), ವಾಹನದ ನೋಂದಣಿ ಪ್ರಮಾಣ ಪತ್ರ (ಆರ್ಸಿ) ಸೇರಿದಂತೆ ವಿವಿಧ ಪರವಾನಿಗೆಗಳ ದಾಖಲೆಗಳ ಸಿಂಧುತ್ವಕ್ಕೆ ನಿಗದಿಪಡಿಸಿದ್ದ ಗಡುವನ್ನು ಕೇಂದ್ರ ಸರಕಾರ ಸೆಪ್ಟಂಬರ್ 30ರ ವರೆಗೆ ವಿಸ್ತರಿಸಿದೆ. ವಾಹನಗಳ ಸುಸ್ಥಿತಿ (ಫಿಟ್ನೆಸ್), ಪರ್ಮಿಟ್ (ಎಲ್ಲಾ ರೀತಿಯ), ಲೈಸನ್ಸ್, ರಿಜಿಸ್ಟ್ರೇಶನ್ ಅಥವಾ ಇತರ ಯಾವುದೇ ದಾಖಲೆಗಳ ಮಾನ್ಯತೆಯನ್ನು ಸೆಪ್ಟಂಬರ್ 30ರ ವರೆಗೆ ವಿಸ್ತರಿಸುವಂತೆ ಸಂಬಂಧಿಸಿದ ಇಲಾಖೆಗಳಿಗೆ ನಿರ್ದೇಶಿಸಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯ (ಎಂಒಆರ್ಟಿಎಚ್) ತನ್ನ ಆದೇಶದಲ್ಲಿ ತಿಳಿಸಿದೆ. 

‘‘ಇದು 2020 ಫೆಬ್ರವರಿ 1ರಿಂದ ಅವಧಿ ಮೀರಿದ ಅಥವಾ 2021 ಸೆಪ್ಟಂಬರ್ 30ರ ಒಳಗೆ ಪರವಾನಿಗೆ ಮುಕ್ತಾಯಗೊಳ್ಳುವ ಎಲ್ಲ ವಾಹನಗಳಿಗೆ ಅನ್ವಯವಾಗಲಿದೆ. ಇದು ಸುರಕ್ಷಿತ ಅಂತರೊಂದಿಗೆ ಸಾರಿಗೆಗೆ ಸಂಬಂಧಿಸಿದ ಸೇವೆಗಳು ನಾಗರಿಕರಿಗೆ ಲಭ್ಯವಾಗಲು ನೆರವಾಗುತ್ತದೆ’’ ಎಂದು ಆದೇಶ ತಿಳಿಸಿದೆ. 

ಈ ಹೊಸ ಸಲಹೆಯನ್ನು ರಾಜ್ಯ ಸರಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಗೊಳಿಸುವ ಮೂಲಕ ಕೊರೋನ ಕಾಲದ ಈ ಸಂಕಷ್ಟ ಸಮಯದಲ್ಲಿ ನಾಗರಿಕರು, ಸಾಗಣೆದಾರರು ಹಾಗೂ ಇತರ ವಿವಿಧ ಸಂಸ್ಥೆಗಳು ಎದುರಿಸುವ ಕಿರುಕುಳವನ್ನು ತಪ್ಪಿಸಬೇಕು ಎಂದು ಸಚಿವಾಲಯದ ಪತ್ರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News