13 ವರ್ಷಗಳಲ್ಲೇ ದಾಖಲೆ: ಸ್ವಿಸ್ ಬ್ಯಾಂಕ್ ಗಳಲ್ಲಿರುವ ಭಾರತೀಯರ ಹಣ 2020ರಲ್ಲಿ 20,706ಕೋಟಿ ರೂ.ಗೆ ಏರಿಕೆ

Update: 2021-06-18 11:11 GMT
photo: Twitter 

ಹೊಸದಿಲ್ಲಿ/ಝುರಿಚ್,ಜೂ.18: ಭಾರತದಲ್ಲಿರುವ ಶಾಖೆಗಳು ಮತ್ತು ಇತರ ಹಣಕಾಸು ಸಂಸ್ಥೆಗಳ ಮೂಲಕ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳು ಸ್ವಿಸ್ ಬ್ಯಾಂಕುಗಳಲ್ಲಿಟ್ಟಿರುವ ಹಣದ ಮೊತ್ತವು 2019ರಲ್ಲಿ 6,625 ಕೋ.ರೂ.(89.90 ಕೋ. ಸ್ವಿಸ್ ಫ್ರಾಂಕ್)ಗಳಿದ್ದುದು 2020ರ ಅಂತ್ಯಕ್ಕೆ 20,706‌ ಕೋಟಿ ರೂ. (2.55 ಶತಕೋಟಿ ಸ್ವಿಸ್ ಫ್ರಾಂಕ್ ) ಗೆ ಏರಿಕೆಯಾಗಿದೆ. ಗ್ರಾಹಕರ ನೇರ ಠೇವಣಿಗಳು ಇಳಿಕೆಯಾಗಿದ್ದರೂ ಶೇರುಗಳು ಮತ್ತು ಇತರ ಹಣಕಾಸು ಸಾಧನಗಳ ಮೂಲಕ ಹಿಡುವಳಿಯಲ್ಲಿ ತೀವ್ರ ಏರಿಕೆಯಾಗಿದೆ ಎಂದು ಸ್ವಿಟ್ಝರ್‌ಲ್ಯಾಂಡ್‌ನ ಸ್ವಿಸ್ ನ್ಯಾಷನಲ್ ಬ್ಯಾಂಕ್ (ಎಸ್‌ಎನ್‌ಬಿ)ನ ವಾರ್ಷಿಕ ವರದಿಯು ತೋರಿಸಿದೆ.

ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಒಟ್ಟು ಮೊತ್ತದಲ್ಲಿಯ ಏರಿಕೆಯು ಎರಡು ವರ್ಷಗಳಲ್ಲಿಯ ಇಳಿಮುಖ ಪ್ರವೃತ್ತಿಗೆ ತಡೆ ಹಾಕಿದೆ ಮತ್ತು ಈ ಏರಿಕೆಯು ಕಳೆದ 13 ವರ್ಷಗಳಲ್ಲಿ ಗರಿಷ್ಠವಾಗಿದೆ.

2006ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣ ಸುಮಾರು 6.5 ಶತಕೋಟಿ ಸ್ವಿಸ್ ಫ್ರಾಂಕ್‌ಗಳ ದಾಖಲೆ ಮಟ್ಟದಲ್ಲಿತ್ತು. ಅದು ಬಳಿಕ 2011,2013 ಮತ್ತು 2017 ಸೇರಿದಂತೆ ಕೆಲವು ವರ್ಷಗಳನ್ನು ಹೊರತುಪಡಿಸಿ ಹೆಚ್ಚಾಗಿ ಇಳಿಕೆಯ ಹಾದಿಯಲ್ಲಿಯೇ ಇತ್ತು ಎಂದು ಎಸ್‌ಎನ್‌ಬಿಯ ಅಂಕಿಅಂಶಗಳು ತೋರಿಸಿವೆ.
 
ಇವು ಸ್ವಿಸ್ ಬ್ಯಾಂಕುಗಳು ಎಸ್‌ಎನ್‌ಬಿಗೆ ಒದಗಿಸಿರುವ ಅಧಿಕೃತ ಅಂಕಿಸಂಖ್ಯೆಗಳಾಗಿದ್ದು, ಭಾರತೀಯರು ಸ್ವಿಟ್ಝರ್‌ಲ್ಯಾಂಡ್‌ನ ಬ್ಯಾಂಕ್‌ಗಳಲ್ಲಿ ಇಟ್ಟಿದ್ದಾರೆನ್ನಲಾಗಿರುವ ಬಹುಚರ್ಚಿತ ಕಪ್ಪುಹಣದ ಪ್ರಮಾಣವನ್ನು ಸೂಚಿಸುವುದಿಲ್ಲ. ಅಲ್ಲದೆ ಅನಿವಾಸಿ ಭಾರತೀಯರು ಮತ್ತು ಇತರರು ಮೂರನೇ ದೇಶದಲ್ಲಿಯ ಸಂಸ್ಥೆಗಳ ಹೆಸರಿನಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿರಬಹುದಾದ ಹಣವನ್ನೂ ಒಳಗೊಂಡಿಲ್ಲ.
 
ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತೀಯರ ಒಟ್ಟು ಹಣವು ವ್ಯಕ್ತಿಗಳು, ಬ್ಯಾಂಕುಗಳು ಮತ್ತು ಸಂಸ್ಥೆಗಳ ಠೇವಣಿಗಳು ಸೇರಿದಂತೆ ಎಲ್ಲ ವಿಧಗಳ ಖಾತೆಗಳನ್ನು ಒಳಗೊಂಡಿದೆ ಎಂದು ಎಸ್‌ಎನ್‌ಬಿ ತನ್ನ ವರದಿಯಲ್ಲಿ ತಿಳಿಸಿದೆ. ಇದು ಭಾರತದಲ್ಲಿರುವ ಸ್ವಿಸ್ ಬ್ಯಾಂಕುಗಳ ಶಾಖೆಗಳಲ್ಲಿಯ ಠೇವಣಿಗಳು ಮತ್ತು ಠೇವಣಿಯೇತರ ಬಾಧ್ಯತೆಗಳನ್ನೂ ಒಳಗೊಂಡಿದೆ.
ಭಾರತೀಯ ನಿವಾಸಿಗಳು ಬ್ಯಾಂಕ್ ಠೇವಣಿಗಳು ಸೇರಿದಂತೆ ಸ್ವಿಟ್ಝರ್‌ಲ್ಯಾಂಡ್‌ನಲ್ಲಿ ಹೊಂದಿರುವ ಆಸ್ತಿಗಳನ್ನು ‘ಕಪ್ಪುಹಣ’ಎಂದು ಪರಿಗಣಿಸುವಂತಿಲ್ಲ ಮತ್ತು ತೆರಿಗೆ ವಂಚನೆ ಹಾಗೂ ತಪ್ಪಿಸಿಕೊಳ್ಳುವಿಕೆ ವಿರುದ್ಧ ಭಾರತದ ಹೋರಾಟವನ್ನು ತಾವು ಸಕ್ರಿಯವಾಗಿ ಬೆಂಬಲಿಸುತ್ತಿದ್ದೇವೆ ಎಂದು ಸ್ವಿಸ್ ಅಧಿಕಾರಿಗಳು ಸದಾ ಪ್ರತಿಪಾದಿಸಿಕೊಂಡು ಬಂದಿದ್ದಾರೆ.

ತೆರಿಗೆ ವಿಷಯಗಳಲ್ಲಿ ಸ್ವಯಂಚಾಲಿತ ಮಾಹಿತಿ ವಿನಿಮಯ ವ್ಯವಸ್ಥೆಯೊಂದು 2018ರಿಂದ ಭಾರತ ಮತ್ತು ಸ್ವಿಟ್ಝರ್‌ಲ್ಯಾಂಡ್‌ಗಳ ನಡುವೆ ಜಾರಿಯಲ್ಲಿದೆ. ಈ ವ್ಯವಸ್ಥೆಯಡಿ 2018ರಿಂದ ಸ್ವಿಸ್ ಹಣಕಾಸು ಸಂಸ್ಥೆಗಳಲ್ಲಿ ಖಾತೆಗಳನ್ನು ಹೊಂದಿರುವ ಎಲ್ಲ ಭಾರತೀಯರ ವಿವರವಾದ ಹಣಕಾಸು ಮಾಹಿತಿಗಳನ್ನು 2019 ಸೆಪ್ಟೆಂಬರ್‌ನಲ್ಲಿ ಮೊದಲ ಬಾರಿಗೆ ಭಾರತೀಯ ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಲಾಗಿತ್ತು ಮತ್ತು ಪ್ರತಿ ವರ್ಷ ಇಂತಹ ವಿವರಗಳು ಸಲ್ಲಿಕೆಯಾಗಬೇಕಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News