ನೂತನ ಮತಾಂತರ ವಿರೋಧಿ ಕಾಯ್ದೆ ಅಡಿ ಗುಜರಾತ್ ಪೊಲೀಸ್‌ ರಿಂದ ಮೊದಲ ಬಂಧನ

Update: 2021-06-18 16:52 GMT

ಅಹಮದಾಬಾದ್, ಜೂ. 18: ವಿವಾಹದ ಮೂಲಕ ಬಲವಂತವಾಗಿ ಧಾರ್ಮಿಕ ಮತಾಂತರದ ವಿರುದ್ಧ ನೂತನವಾಗಿ ಅಧಿಸೂಚಿತ ಕಾಯ್ದೆ ಅಡಿಯಲ್ಲಿ ಗುಜರಾತ್ ಪೊಲೀಸರು ಮೊದಲ ಬಾರಿಗೆ ಎಫ್ಐಆರ್ ದಾಖಲಿಸಿದ್ದಾರೆ ಹಾಗೂ ವಡೋದರಾ ನಗರದ 26 ವರ್ಷದ ವ್ಯಕ್ತಿಯೋರ್ವರನ್ನು ಬಂಧಿಸಿದ್ದಾರೆ‌ ಎಂದು ತಿಳಿದು ಬಂದಿದೆ. 

ದೂರಿನ ಆಧಾರದಲ್ಲಿ ವಡೋದರಾದ ಗೋತ್ರಿ ಪೊಲೀಸರು ವಿವಾಹದ ಮೂಲಕ ಬಲವಂತವಾಗಿ ಧಾರ್ಮಿಕ ಮತಾಂತರಗೊಳಿಸುವ ವಿರುದ್ಧದ ಕಠಿಣ ಕಾಯ್ದೆ ಗುಜರಾತ್ ಧಾರ್ಮಿಕ ಸ್ವಾತಂತ್ರ (ತಿದ್ದುಪಡಿ)ಕಾಯ್ದೆ, 2021ರ ಅಡಿಯಲ್ಲಿ ಎಪ್ಐಆರ್ ದಾಖಲಿಸಿದ್ದಾರೆ ಹಾಗೂ ಸಮೀರ್ ಖುರೇಷಿ ಅವರನ್ನು ಬಂಧಿಸಿದ್ದಾರೆ. 

ತಂದೆಯೊಂದಿಗೆ ಮಟನ್ ಸ್ಟಾಲ್ ನಡೆಸುತ್ತಿದ್ದ ಖುರೇಷಿ 2019ರಲ್ಲಿ ಸಾಮಾಜಿಕ ಜಾಲ ತಾಣದ ಮೂಲಕ ತಾನು ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಸ್ಯಾಮ್ ಮಾರ್ಟಿನ್ ಎಂದು ಇನ್ನೊಂದು ಧರ್ಮಕ್ಕೆ ಸೇರಿದ ಯುವತಿಗೆ ಪರಿಚಯಿಸಿಕೊಂಡಿದ್ದ ಎಂದು ವಡೋದರಾ ನಗರದ ವಲಯ 2ರ ಉಪ ಪೊಲೀಸ್ ಆಯುಕ್ತ ಜಯರಾಜ್ ಸಿನ್ಹಾ ವಾಲಾ ಅವರು ಹೇಳಿದ್ದಾರೆ. 

‘‘ಖುರೇಶಿ ನಕಲಿ ಗುರುತ ಪತ್ರ ಬಳಸಿ ಸಾಮಾಜಿಕ ಜಾಲ ತಾಣದಲ್ಲಿ ಯುವತಿಯನ್ನು ಪ್ರೀತಿ ಹೆಸರಲ್ಲಿ ಬಲೆಗೆ ಬೀಳಿಸಿದ್ದ. ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಆಕೆಯ ಆಕ್ಷೇಪಾರ್ಹ ಫೋಟೊಗಳನ್ನು ಬಳಸಿ ಬ್ಲಾಕ್ಮೇಲ್ ಮಾಡಲು ಆರಂಭಿಸಿದ್ದ ಹಾಗೂ ವಿವಾಹವಾಗುವಂತೆ ಬಲವಂತ ಮಾಡುತ್ತಿದ್ದ. ಗರ್ಭಪಾತ ಮಾಡಿಸಿಕೊಳ್ಳುವಂತೆ ಕೂಡ ಯುವತಿಗೆ ಬಲವಂತ ಮಾಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ’’ ಎಂದು ಅವರು ತಿಳಿಸಿದ್ದಾರೆ. 

ಖುರೇಷಿ ಕ್ರಿಶ್ಚಿಯನ್ ಎಂಬ ಕಾರಣಕ್ಕೆ ಆಕರ್ಷಣೆಗೆ ಒಳಗಾಗಿದ್ದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡಿದ್ದಳು. ಆದರೆ ಒಂದು ವರ್ಷದ ಹಿಂದೆ ಖುರೇಷಿ ಕ್ರಿಶ್ಚಿಯನ್ ವಿವಾಹದ ಬದಲು ನಿಖಾ ಕಾರ್ಯಕ್ರಮ ಆಯೋಜಿಸಿದ ಸಂದರ್ಭ ಯುವತಿಗೆ ಆತನ ಧರ್ಮದ ಬಗ್ಗೆ ತಿಳಿಯಿತು ಎಂದು ಅಧಿಕಾರಿ ತಿಳಿಸಿದ್ದಾರೆ. ಖುರೇಷಿ ವಿವಾಹದ ಬಳಿಕ ಹೆಸರು ಬದಲಾಯಿಸಿದರು ಹಾಗೂ ಮತಾಂತರಗೊಳ್ಳುವಂತೆ ಬಲವಂತಪಡಿಸಲು ಆರಂಭಿಸಿದರು. ಧರ್ಮದ ಹೆಸರಲ್ಲಿ ನಿಂದಿಸ ತೊಡಗಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ಜಯರಾಜ್ ಸಿನ್ಹಾ ವಾಲಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News