ವಿವೇಕಾನಂದರ ವಿರುದ್ಧವೂ ದೂರು ನೀಡಲಾಗುತ್ತದೆಯೇ?

Update: 2021-06-19 07:49 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ನಟ ಚೇತನ್ ಸಿನೆಮೇತರ ಕಾರಣಗಳಿಗಾಗಿಯೂ ರಾಜ್ಯದಲ್ಲಿ ಸುದ್ದಿಯಲ್ಲಿರುತ್ತಾ ಬಂದವರು. ಬೆಳ್ಳಿ ತೆರೆಯಲ್ಲಿ ಮಾತ್ರವಲ್ಲದೆ, ಅದರ ಹೊರಗೂ ಬಡವರು, ಶೋಷಿತರ ಪರವಾಗಿ ಮಾತನಾಡುತ್ತಿರುವವರು. ಆದಿವಾಸಿಗಳು, ಬುಡಕಟ್ಟು ಜನರು, ನಿರ್ವಸಿತರ ಪರವಾಗಿ ಬೀದಿಗಿಳಿದು ಮಾತನಾಡಿದವರು. ವರ್ತಮಾನದ ಸಾಮಾಜಿಕ, ರಾಜಕೀಯ ಬೆಳವಣಿಗೆಗಳಿಗೆ ಪ್ರಬುದ್ಧವಾಗಿ ಸ್ಪಂದಿಸುತ್ತಾ ಬಂದವರು. ತನ್ನ ಪ್ರಗತಿ ಪರ ನಿಲುವುಗಳ ಕಾರಣಕ್ಕಾಗಿಯೇ ಪ್ರಭುತ್ವದ ಕೆಂಗಣ್ಣಿಗೆ ಒಳಗಾದವರು. ಇಂತಹ ನಟ ಚೇತನ್ ವಿರುದ್ಧ ಇತ್ತೀಚೆಗೆ ಪೊಲೀಸ್‌ಠಾಣೆಯಲ್ಲಿ ದೂರೊಂದನ್ನು ದಾಖಲಿಸಲಾಯಿತು. ವಿಶೇಷವೆಂದರೆ, ಈ ದೂರನ್ನು ದಾಖಲಿಸಿರುವುದು ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು. ಚೇತನ್ ಅವರು ಬ್ರಾಹ್ಮಣ ಸಮುದಾಯವನ್ನು ನಿಂದಿಸಿದ್ದಾರೆ ಎನ್ನುವುದು ಅವರ ಆರೋಪ. ಇತ್ತೀಚೆಗೆ ಚೇತನ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ‘ಜಾತೀಯತೆ, ಬ್ರಾಹ್ಮಣ್ಯ ರಾಜಕಾರಣದ ಅಪಾಯ’ಗಳ ಕುರಿತಂತೆ ಮಾತನಾಡಿರುವುದನ್ನೇ ಮುಂದಿಟ್ಟುಕೊಂಡು, ಇದರಿಂದ ಬ್ರಾಹ್ಮಣ ಸಮುದಾಯಕ್ಕೆ ನೋವಾಗಿದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ದೂರು ನೀಡಿದ ಬೆನ್ನಿಗೆ ಜಾಗೃತರಾದ ಪೊಲೀಸರು, ಚೇತನ್ ಅವರನ್ನು ಠಾಣೆಗೆ ಕರೆಸಿಕೊಂಡು ಅವರಿಂದ ಸ್ಪಷ್ಟೀಕರಣವನ್ನು ತೆಗೆದುಕೊಂಡರು. ಜಾತೀಯತೆಯನ್ನು ಅಪರಾಧವಾಗಿ ನೋಡುತ್ತಿದ್ದ ಸಮಾಜದಲ್ಲಿ, ಇದೀಗ ಜಾತೀಯತೆಯನ್ನು ಪ್ರಶ್ನಿಸುವುದೇ ಅಪರಾಧ ಎನ್ನುವಂತಹ ಸ್ಥಿತಿ ನಿರ್ಮಾಣಗೊಳ್ಳುತ್ತಿದೆಯೇ? ಎನ್ನುವ ಪ್ರಶ್ನೆ ಇದೀಗ ಚರ್ಚೆಯಲ್ಲಿದೆ.
 
 ಬ್ರಾಹ್ಮಣ್ಯದ ಜಾತೀಯ ರಾಜಕಾರಣದ ವಿರುದ್ಧ ಮಾತನಾಡುವುದು ಅಪರಾಧವೇ ಆಗಿದ್ದರೆ, ನಾರಾಯಣ ಗುರುಗಳು, ಸ್ವಾಮಿ ವಿವೇಕಾನಂದ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಪೆರಿಯಾರ್...ಹೀಗೆ ಸಾಲು ಸಾಲು ಮಹಾನ್ ನಾಯಕರನ್ನು ಅಭಿವೃದ್ಧಿ ಮಂಡಳಿಯ ಅಧ್ಯಕ್ಷರು ಕಟಕಟೆಗೆ ಎಳೆದು ತರಬೇಕಾಗುತ್ತದೆ. ವಿವೇಕಾನಂದ, ಫುಲೆ, ಅಂಬೇಡ್ಕರ್, ಪೆರಿಯಾರ್ ಮೊದಲಾದವರು ಬರೆದ ಟನ್‌ಗಟ್ಟಲೆ ಪುಸ್ತಕಗಳನ್ನೆಲ್ಲ ನಿಷೇಧಿಸಬೇಕಾಗುತ್ತದೆ. ಯಾಕೆಂದರೆ, ಇವರೆಲ್ಲರೂ ತಮ್ಮ ಬದುಕನ್ನು ಮುಡಿಪಾಗಿಟ್ಟದ್ದು ಬ್ರಾಹ್ಮಣ್ಯದ ಜಾತೀಯತೆಯ ವಿರುದ್ಧ ಹೋರಾಡುವುದಕ್ಕೆ. ಬ್ರಾಹ್ಮಣ್ಯ ಈ ದೇಶವನ್ನು ಹೇಗೆ ಶೋಷಣೆಗೀಡು ಮಾಡಿತು ಎನ್ನುವುದನ್ನು ವಿವೇಕಾನಂದ, ಅಂಬೇಡ್ಕರ್, ಪೆರಿಯಾರ್ ಮೊದಲಾದವರು ಪುಸ್ತಕಗಳಲ್ಲಿ ದಾಖಲಿಸಿದ್ದಾರೆ. ಯಾವುದೋ ಒಂದು ಹೇಳಿಕೆಗಾಗಿ ನಟ ಚೇತನ್ ಅವರನ್ನು ಶಿಕ್ಷಿಸುವ ಮೊದಲು, ಈ ಮಹಾನ್ ವ್ಯಕ್ತಿಗಳು ಬರೆದಿರುವ ಪುಸ್ತಕಗಳನ್ನು ಸರಕಾರ ನಿಷೇಧ ಮಾಡಬೇಕಾಗುತ್ತದೆ. ಬ್ರಾಹ್ಮಣ್ಯದ ವಿರುದ್ಧ ಹಲವು ವೇದಿಕೆಗಳಲ್ಲಿ, ಲೇಖನಗಳಲ್ಲಿ ಕಟುವಾಗಿ ಬರೆದಿರುವ ರಾಷ್ಟ್ರಕವಿ ಕುವೆಂಪು ಅವರೂ ಅಪರಾಧಿಯಾಗ ಬೇಕಾಗುತ್ತದೆ.

ಇವರೆಲ್ಲರೂ ಬ್ರಾಹ್ಮಣ್ಯವನ್ನು ಟೀಕಿಸಿರುವುದು ಒಂದು ಸಮುದಾಯದ ಮೇಲಿನ ದ್ವೇಷದಿಂದಲ್ಲ. ಬದಲಿಗೆ ಶೋಷಿತ ಸಮುದಾಯಗಳ ಮೇಲಿನ ಕಾಳಜಿಯಿಂದ. ಬ್ರಾಹ್ಮಣ್ಯವನ್ನು ವಿರೋಧಿಸುವ ಮೂಲಕ ಅವರು ಅದು ಪ್ರತಿಪಾದಿಸುವ ಅಸಮಾನತೆಗಳನ್ನು, ಅಸ್ಪಶ್ಯವನ್ನು, ದೌರ್ಜನ್ಯಗಳನ್ನು ವಿರೋಧಿಸಿದರು. ಆ ಮೂಲಕ ಸಮ ಸಮಾಜದ ಕನಸೊಂದನ್ನು ಕಂಡರು. ಬ್ರಾಹ್ಮಣ್ಯದ ಶೋಷಣೆಯಿಂದ ನಲುಗಿ ಹೋಗಿರುವ ಸಮುದಾಯಗಳನ್ನು ಮೇಲೆತ್ತುವುದಕ್ಕಾಗಿಯೇ ಈ ದೇಶದ ಸಂವಿಧಾನವೂ ಹಲವು ಕಾನೂನುಗಳನ್ನು ರೂಪಿಸಿದೆ. ಮೊಗಲರು, ಬ್ರಿಟಿಷರು ಈ ದೇಶಕ್ಕೆ ಆಗಮಿಸುವ ಮೊದಲೇ ಈ ದೇಶದಲ್ಲಿ ಗುಲಾಮಗಿರಿ ತಾಂಡವವಾಡುತ್ತಿತ್ತು. ಒಂದು ನಿರ್ದಿಷ್ಟ ಸಮುದಾಯವಷ್ಟೇ ಶಿಕ್ಷಣದ ಹಕ್ಕು, ಭೂಮಿಯ ಹಕ್ಕು, ನೀರಿನ ಹಕ್ಕು, ನಾಗರಿಕವಾಗಿ ಬದುಕುವ ಹಕ್ಕುಗಳನ್ನು ಹೊಂದಿತ್ತು. ಈ ದೇಶದ ಬಹುದೊಡ್ಡ ಸಮುದಾಯಗಳಿಗೆ ಕೆರೆಯ ನೀರನ್ನು ಮುಟ್ಟುವ ಸ್ವಾತಂತ್ರವೂ ಇದ್ದಿರಲಿಲ್ಲ. ಒಂದು ಜಾತಿಯ ಜನರು ನಡೆದಾಡುವ ಬೀದಿಯಲ್ಲಿ ನಡೆಯುವ ಅರ್ಹತೆಯೂ ಇವರಿಗಿರಲಿಲ್ಲ. ತಮ್ಮದೇ ನೆಲದಲ್ಲಿ, ತಮ್ಮದೇ ಜನರಿಂದ ಅಸ್ಪಶ್ಯರಾಗಿ ಬದುಕುತ್ತಿದ್ದರು. ಬ್ರಿಟಿಷರು ಬಂದ ಬಳಿಕವಷ್ಟೇ ಈ ಶೋಷಿತ ಸಮುದಾಯದ ಬದುಕು ಒಂದಿಷ್ಟು ಹಸನಾಯಿತು. ಬ್ರಿ

ಟಿಷರು ಈ ದೇಶದಿಂದ ತೊಲಗಿದರೂ ದಲಿತರು, ಶೂದ್ರರ ಬದುಕಿನಲ್ಲಿ ಯಾವುದೇ ಬದಲಾವಣೆಯಾಗದು ಎನ್ನುವ ಕಾರಣಕ್ಕಾಗಿ ಅಂಬೇಡ್ಕರ್ ಅವರು ಬ್ರಿಟಿಷರ ವಿರುದ್ಧ ಮಾತ್ರವಲ್ಲ, ತಮ್ಮದೇ ದೇಶದೊಳಗಿರುವ ಶೋಷಕರ ವಿರುದ್ಧವೂ ನಿರಂತರ ಹೋರಾಟಗಳನ್ನು ನಡೆಸಿದರು. ಬ್ರಿಟಿಷರು ಈ ದೇಶವನ್ನು ಬಿಟ್ಟು ಹೋದ ಆನಂತರವೂ ಅವರ ಈ ಹೋರಾಟ ನಿಂತಿರಲಿಲ್ಲ. ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಅವರ ಮತಾಂತರವೂ ‘ಬ್ರಾಹ್ಮಣ್ಯದ ವಿರುದ್ಧ ಹೋರಾಟ’ದ ಭಾಗವೇ ಆಗಿತ್ತು. ಅಂಬೇಡ್ಕರ್ ಸಹಿತ ನೂರಾರು ಮಂದಿ ಮಹಾನ್ ಚಿಂತಕರು ಬ್ರಾಹ್ಮಣ್ಯದ ವಿರುದ್ಧ ತಮ್ಮ ಹೋರಾಟವನ್ನು ನಿರಂತರವಾಗಿ ಜಾರಿಯಲ್ಲಿರಿಸಿದ ಪರಿಣಾಮವಾಗಿ ಈ ದೇಶದಲ್ಲಿ ಶೂದ್ರರು, ದಲಿತರ ಬದುಕು ಒಂದಿಷ್ಟಾದರೂ ಸಹ್ಯವಾಗಿದೆ.

‘ಇಂದು ಜಾತಿಯಿಲ್ಲ, ದೇಶದಲ್ಲಿ ನಡೆಯುವ ಜಾತಿ ದೌರ್ಜನ್ಯಗಳಿಗೆ ಬ್ರಾಹ್ಮಣರು ನೇರ ಹೊಣೆಯಲ್ಲ’ ಎಂದು ಕೆಲವು ಬ್ರಾಹ್ಮಣ ಸಮುದಾಯದ ಮುಖಂಡರು ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆಗಳಲ್ಲಿ ಭಾಗಶಃ ಸತ್ಯವಿದೆ. ಜಾತಿಯೇ ಇಲ್ಲ ಎನ್ನುವುದು ಸುಳ್ಳು. ಆದರೆ ದೇಶಾದ್ಯಂತ ನಡೆಯುತ್ತಿರುವ ಜಾತಿ ದೌರ್ಜನ್ಯಗಳ ಹಿಂದೆ ಬ್ರಾಹ್ಮಣ ಸಮುದಾಯದ ಪಾತ್ರವಷ್ಟೇ ಇದೆ ಎನ್ನುವುದು ಕೂಡ ಸತ್ಯವಲ್ಲ. ಬ್ರಾಹ್ಮಣ್ಯದ ಬಹುದೊಡ್ಡ ಫಲಾನುಭವಿಗಳಾಗಿ ಪ್ರಬಲ ಹಿಂದುಳಿದ ಜಾತಿಗಳು ಮತ್ತು ಇನ್ನಿತರ ಮೇಲ್‌ಜಾತಿಗಳು ಗುರುತಿಸಿಕೊಳ್ಳುತ್ತಿವೆ. ಆದರೆ ಇಂದು ದೇಶದಲ್ಲಿ ಆಳವಾಗಿ ಬೇರು ಬಿಡುತ್ತಿರುವ ಆರೆಸ್ಸೆಸ್‌ನ ಸಿದ್ಧಾಂತ ಬ್ರಾಹ್ಮಣ್ಯದಿಂದ ಪ್ರಭಾವಿತವಾಗಿದೆ. ಗೋಳ್ವಾಲ್ಕರ್ ಜಾತಿಯನ್ನು ಬಹಿರಂಗವಾಗಿ ಸಮರ್ಥನೆ ಮಾಡಿಕೊಂಡಿದ್ದಾರೆ. ಜಾತಿ ವ್ಯವಸ್ಥೆಯನ್ನು ಇಂದಿಗೂ ವೈಜ್ಞಾನಿಕ ಕಾರಣವನ್ನು ನೀಡಿ ಸಮರ್ಥಿಸುವ ಆರೆಸ್ಸೆಸ್ ಮುಖಂಡರಿದ್ದಾರೆ. ಮಹಿಳೆಯರ ಕುರಿತಂತೆ ಆರೆಸ್ಸೆಸ್‌ನ ಚಿಂತನೆ ಬ್ರಾಹ್ಮಣ್ಯದ ಹಿನ್ನೆಲೆಯಿಂದ ಬಂದಿದೆ.

ಇಂದು ಬ್ರಾಹ್ಮಣ್ಯವು ಮೇಲ್‌ಜಾತಿಗಳನ್ನು ಸಂಘಟಿಸುತ್ತಾ ಹೊಸ ರೂಪದಲ್ಲಿ ದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿದೆ. ಅದರ ವಿರುದ್ಧ ಸ್ವತಃ ಬ್ರಾಹ್ಮಣ ಸಮುದಾಯಕ್ಕೆ ಸೇರಿದಂತಹ ನೂರಾರು ಚಿಂತಕರು ದೇಶಾದ್ಯಂತ ತಮ್ಮ ಆತಂಕಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂದು ಬ್ರಾಹ್ಮಣ್ಯದ ವಿರುದ್ಧದ ಹೋರಾಟದ ನೇತೃತ್ವವನ್ನು ವಹಿಸಿಕೊಂಡವರಲ್ಲಿ ಪ್ರಗತಿಪರರಾಗಿರುವ ಬ್ರಾಹ್ಮಣ ಸಮುದಾಯದ ಹೋರಾಟಗಾರರೇ ಅಧಿಕ ಎನ್ನುವುದನ್ನು ನಾವು ಮರೆಯಬಾರದು. ಸ್ವಾತಂತ್ರ ಪೂರ್ವದಲ್ಲೂ ಹಲವು ಬ್ರಾಹ್ಮಣ ಮುಖಂಡರು ಬ್ರಾಹ್ಮಣ್ಯದ ವಿರುದ್ಧ ಪ್ರತಿಭಟಿಸಿದ್ದರು. ಬ್ರಾಹ್ಮಣ್ಯದ ವಿರುದ್ಧ ನಮ್ಮ ಹೋರಾಟ ಸದಾ ಜಾರಿಯಲ್ಲಿದ್ದರೆ ಮಾತ್ರ ಈ ದೇಶ ಸಾಮಾಜಿಕ, ಆರ್ಥಿಕವಾಗಿ ಉನ್ನತಿಗೇರಲು ಸಾಧ್ಯ. ಐಸಿಸ್‌ನಂತಹ ಉಗ್ರವಾದಿಗಳ ಚಿಂತನೆಯನ್ನು ಖಂಡಿಸುವಾಗ ಅದನ್ನು ಇಸ್ಲಾಮ್‌ಗೆ ಮಾಡಿದ ನಿಂದನೆ ಎಂದು ಭಾವಿಸಿದರೆ ಅದರಿಂದ ನಷ್ಟ ಸ್ವತಃ ಮುಸ್ಲಿಮರಿಗೇ ಆಗಿದೆ. ಇಂತಹ ಉಗ್ರವಾದಿ ಸಂಘಟನೆಗಳಿಂದಾಗಿಯೇ ಮುಸ್ಲಿಮರು ಜಾಗತಿಕವಾಗಿ ಭಾರೀ ಮಟ್ಟದಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ಬ್ರಾಹ್ಮಣ್ಯದ ವಿಷಯದಲ್ಲೂ ಇದು ಭಿನ್ನವಾಗಿಲ್ಲ. ಬ್ರಾಹ್ಮಣ್ಯ ಚಿಂತನೆಗಳನ್ನು ಟೀಕಿಸಿದರೆ ಅದರಿಂದ ‘ಬ್ರಾಹ್ಮಣ ಸಮುದಾಯಕ್ಕೆ ಅವಮಾನವಾಯಿತು’ ಎಂದು ಭಾವಿಸಿದರೆ ಅದರಿಂದ ಬ್ರಾಹ್ಮಣ ಸಮುದಾಯಕ್ಕೇ ನಷ್ಟ. ಹೇಗೆ ಇಸ್ಲಾಮ್‌ನ ಹೆಸರಲ್ಲಿ ಜಾರಿಯಲ್ಲಿರುವ ಉಗ್ರವಾದಿ ಚಿಂತನೆಗಳ ವಿರುದ್ಧ ಮುಸ್ಲಿಮರ ನೇತೃತ್ವದಲ್ಲಿ ಹೋರಾಟ ನಡೆಯಬೇಕೋ ಹಾಗೆಯೇ, ಈ ದೇಶವನ್ನು ಸುತ್ತಿಕೊಂಡಿರುವ ಜಾತೀಯತೆ, ಅಸ್ಪಶ್ಯತೆ ಮೊದಲಾದ ಬ್ರಾಹ್ಮಣ್ಯ ರಾಜಕೀಯಗಳ ವಿರುದ್ಧ ದೊಡ್ಡ ದನಿಯಲ್ಲಿ ಬ್ರಾಹ್ಮಣ ಸಮುದಾಯದ ನಾಯಕರೇ ಮಾತನಾಡಬೇಕಾಗಿದೆ. ಆ ಮೂಲಕ ಬ್ರಾಹ್ಮಣ್ಯದ ಕಳಂಕದಿಂದ ಬ್ರಾಹ್ಮಣ ಸಮುದಾಯವನ್ನು ಕಾಪಾಡಬೇಕು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News