ಮ್ಯಾನ್ಮಾರ್ ಕುರಿತ ವಿಶ್ವಸಂಸ್ಥೆ ನಿರ್ಣಯದಿಂದ ದೂರವುಳಿದ ಭಾರತ

Update: 2021-06-19 17:22 GMT

ವಿಶ್ವಸಂಸ್ಥೆ, ಜೂ.19: ಮ್ಯಾನ್ಮಾರ್ ನ ಈಗಿನ ಪರಿಸ್ಥಿತಿ ಕುರಿತ ವಿಶ್ವಸಂಸ್ಥೆ ಕರಡು ನಿರ್ಣಯ ಅಂಗೀಕಾರ ಪ್ರಕ್ರಿಯೆಯಿಂದ ಭಾರತ ದೂರವುಳಿದಿದೆ. ವಿಶ್ವಸಂಸ್ಥೆ ಅಂಗೀಕರಿಸಿದ ಕರಡು ನಿರ್ಣಯದಲ್ಲಿ ನಮ್ಮ ಅಭಿಪ್ರಾಯವನ್ನು ಪ್ರತಿಬಿಂಬಿಸುವ ಅಂಶವಿಲ್ಲ. ಅಲ್ಲದೆ ಮ್ಯಾನ್ಮಾರ್ ನಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಮರುಸ್ಥಾಪಿಸುವ ಪ್ರಕ್ರಿಯೆಯನ್ನು ಸಶಕ್ತಗೊಳಿಸುವ ನಮ್ಮ ಜಂಟಿ ಪ್ರಯತ್ನಗಳಿಗೆ, ವಿಶ್ವಸಂಸ್ಥೆಯಲ್ಲಿ ತರಾತುರಿಯಲ್ಲಿ ಮಂಡಿಸಲಾದ ನಿರ್ಣಯ ಸಹಾಯಕ ಎಂದು ಭಾರತ ಸರಕಾರ ಭಾವಿಸದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಭಾರತ ಹೇಳಿದೆ. 

‘ಮ್ಯಾನ್ಮಾರ್ ನಲ್ಲಿನ ಪರಿಸ್ಥಿತಿ’ ಎಂಬ ವಿಷಯದ ಕರಡು ನಿರ್ಣಯವನ್ನು ಶುಕ್ರವಾರ 119 ಸದಸ್ಯರ ಮತಗಳ ಮೂಲಕ ಅಂಗೀಕರಿಸಲಾಗಿದೆ. ಮ್ಯಾನ್ಮಾರ್ ಕೂಡಾ ನಿರ್ಣಯದ ಪರ ಮತ ಚಲಾಯಿಸಿದೆ. ಮ್ಯಾನ್ಮಾರ್ ನ ನೆರೆ ದೇಶಗಳಾದ ಭಾರತ, ಬಾಂಗ್ಲಾದೇಶ, ಭೂತಾನ್, ಚೀನಾ, ಲಾವೊಸ್, ನೇಪಾಳ, ಥೈಲ್ಯಾಂಡ್, ರಶ್ಯ ಸಹಿತ 36 ದೇಶಗಳು ಮತದಾನದಿಂದ ದೂರ ಉಳಿದಿವೆ. ಬೆಲಾರೂಸ್ ನಿರ್ಣಯದ ವಿರುದ್ಧ ಮತಹಾಕಿದ ಏಕೈಕ ದೇಶವಾಗಿದೆ. ‌

ನೆರೆಯ ದೇಶಗಳ ಅಥವಾ ಪ್ರದೇಶದ ದೇಶಗಳ ಜತೆ ಸಮಾಲೋಚಿಸದೆ ಈ ನಿರ್ಣಯವನ್ನು ತರಾತುರಿಯಲ್ಲಿ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಮಂಡಿಸಲಾಗಿದೆ. ಮ್ಯಾನ್ಮಾರ್ನಲ್ಲಿ ಈಗಿರುವ ಪರಿಸ್ಥಿತಿಗೆ ಪರಿಹಾರ ಹುಡುಕುವ ‘ಆಸಿಯಾನ್’ ದೇಶಗಳ ಪ್ರಯತ್ನಗಳಿಗೆ ಇದು ಪ್ರತಿಕೂಲವಾಗಿದೆಯಷ್ಟೇ ಅಲ್ಲ ಅನಪೇಕ್ಷಿತ ಪರಿಣಾಮಕ್ಕೂ ಕಾರಣವಾಗಲಿದೆ ಎಂದು ವಿಶ್ವಸಂಸ್ಥೆಯ ರಾಯಭಾರಿ ಭಾರತದ ಖಾಯಂ ಪ್ರತಿನಿಧಿ ಟಿಎಸ್ ತ್ರಿಮೂರ್ತಿ ಹೇಳಿದ್ದಾರೆ. 

ಮ್ಯಾನ್ಮಾರ್ ನ ನೆರೆದೇಶ ಹಾಗೂ ಮಿತ್ರದೇಶವಾಗಿರುವ ಭಾರತವು ಆ ದೇಶದ ರಾಜಕೀಯ ಅಸ್ಥಿರತೆಯಿಂದ ಈ ಪ್ರದೇಶದಲ್ಲಿ ಉಂಟಾಗಬಹುದಾದ ಪರಿಣಾಮಗಳನ್ನು ಅರಿತುಕೊಂಡಿದೆ. ಮ್ಯಾನ್ಮಾರ್ನ ಎಲ್ಲಾ ಸಮಸ್ಯೆಗಳಿಗೂ ಶಾಂತರೀತಿಯ ಪರಿಹಾರ ರೂಪಿಸಬೇಕು ಎಂಬುದು ಭಾರತದ ಆಶಯವಾಗಿದೆ ಎಂದವರು ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News