​ರೈತರ ಪ್ರತಿಭಟನೆಗೆ ಕಳಂಕ ತರಲು ಕೇಂದ್ರ‌ ಸರಕಾರ ಯತ್ನಿಸುತ್ತಿದೆ: ಸಂಯುಕ್ತ ಕಿಸಾನ್ ಮೋರ್ಚ ಆರೋಪ

Update: 2021-06-19 18:31 GMT

ಹೊಸದಿಲ್ಲಿ, ಜೂ.19: ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆಗೆ ಕಳಂಕ ತರಲು ಕೇಂದ್ರ ಸರಕಾರ ಪ್ರಯತ್ನಿಸುತ್ತಿದೆ ಎಂದು ರೈತ ಸಂಘಟನೆಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಛ(ಎಸ್ಕೆಎಂ) ಆರೋಪಿಸಿದೆ.

ಪ್ರತಿಭಟನೆಯನ್ನು ಸಾಧ್ಯವಾದಷ್ಟು ಸುದೀರ್ಘ ಅವಧಿಗೆ ಎಳೆದರೆ ಪ್ರತಿಭಟನೆಯ ಕಾವು ತನ್ನಿಂದ ತಾನೇ ಕ್ಷೀಣಿಸುತ್ತದೆ ಎಂಬುದು ಬಿಜೆಪಿ ಆಡಳಿತದ ಹುನ್ನಾರವಾಗಿದೆ. ಆದರೆ ಇದು ತಪ್ಪು ಗ್ರಹಿಕೆ. ಹಲವು ರಾಜ್ಯ ಸರಕಾರಗಳು ರೈತರ ಪರ  ನಿಂತಿವೆ ಮತ್ತು ಪ್ರತಿಭಟನೆಗೆ ಸೇರಿಕೊಳ್ಳುವ ರೈತರ ಪ್ರಮಾಣ ದಿನೇ ದಿನೇ ಹೆಚ್ಚುತ್ತಿದೆ ಎಂದು ಎಸ್ಕೆಎಂ ಹೇಳಿದೆ.

ಪ್ರತಿಭಟನಾ ನಿರತರ ಮೇಲೆ ಅಪವಾದ ಹೊರಿಸಲು ಎಲ್ಲಾ ಹತಾಶ ಪ್ರಯತ್ನ ಮಾಡಿದರೂ, ಅವರ ವಿಫಲ ಕಾರ್ಯಯೋಜನೆ ಮತ್ತೆ ವೈಫಲ್ಯ ಕಾಣುವುದರಲ್ಲಿ ಸಂಶಯವಿಲ್ಲ . ಜೀವನೋಪಾಯದ ಮೂಲಭೂತ ಹಕ್ಕು ಸುರಕ್ಷಿತವಾಗಿರಬೇಕು ಎಂಬುದು ರೈತರ ಬೇಡಿಕೆಯಾಗಿದೆ. ಆದರೆ ರೈತರ ನ್ಯಾಯಬದ್ಧ ಬೇಡಿಕೆಯನ್ನು ಒಪ್ಪುವ ಬದಲು ಬಿಜೆಪಿ ಪ್ರತಿಭಟನೆಯನ್ನು ಸುದೀರ್ಘಾವಧಿಯವರೆಗೆ ಎಳೆದು ತರುವ ಮೂಲಕ ಪ್ರತಿಭಟನೆಯ ಕಾವು ತನ್ನಿಂದ ತಾನೇ ಕ್ಷೀಣಿಸುವ ತಂತ್ರ ಹೆಣೆದಿದೆ.

ಆದರೆ ಅದು ಇಲ್ಲಿ ನಡೆಯದು. ರೈತರ ಸಮಸ್ಯೆ ಬಗೆಹರಿಸುವಂತೆ ಬಿಜೆಪಿಯ ಹಲವು ಮುಖಂಡರೇ ಸರಕಾರವನ್ನು ಆಗ್ರಹಿಸುತ್ತಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಈ ಬಗ್ಗೆ ಪ್ರಧಾನಿಗೆ ಮನವಿಪತ್ರ ಸಲ್ಲಿಸಿದ್ದಾರೆ. ಕೃಷಿ ಕಾಯ್ದೆಯಿಂದ ಆಗುವ ದುಷ್ಪರಿಣಾಮಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹಾರಾಷ್ಟç ಸರಕಾರ ತನ್ನ ಕಾನೂನಿನಲ್ಲಿ  ತಿದ್ದುಪಡಿ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಿದೆ. ಪ.ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಹಿತ ಹಲವು ಇತರ ರಾಜ್ಯಗಳೂ ರೈತರಿಗೆ ಬೆಂಬಲ ಸೂಚಿಸಿವೆ ಎಂದು ಎಸ್ಕೆಎಂ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News