ಹಾಲಿಗೆ ಹುಳಿ ಹಿಂಡುತ್ತಿರುವವರು

Update: 2021-06-21 06:42 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಪಶು ಸಂಗೋಪನೆ ಭಾರತದ ಪಾರಂಪರಿಕ ಉದ್ಯಮ. ಜಗತ್ತಿನ ಪ್ರಮುಖ ಹಾಲು ಉತ್ಪಾದಕ ದೇಶವೆಂಬ ಹೆಗ್ಗಳಿಕೆ ನಮ್ಮದು. ಗ್ರಾಮೀಣ ಪ್ರದೇಶದ ಭೂರಹಿತ ರೈತರ ಬದುಕು ಹೈನೋದ್ಯಮವನ್ನು ನೆಚ್ಚಿಕೊಂಡಿದೆೆ. ಆದರೆ ಇತ್ತೀಚಿನ ದಿನಗಳಲ್ಲಿ ಸಣ್ಣ ರೈತರು ಮತ್ತು ಸಣ್ಣ ಡೇರಿ ಕೃಷಿಕರ ಸಮಸ್ಯೆಗಳು ಉಲ್ಬಣಿಸುತ್ತಿವೆ. ಈ ಸಮಸ್ಯೆಗಳಿಗೆ ಲಾಕ್‌ಡೌನ್ ಇನ್ನಷ್ಟು ಹುಳಿಯನ್ನು ಹಿಂಡಿ, ಹಾಲು ಉದ್ಯಮವನ್ನು ಹಾಲಾಹಲವನ್ನಾಗಿಸಿದೆ. ಲಾಕ್‌ಡೌನ್ ನೆಪ ಮುಂದಿಟ್ಟು ಕಳೆದೆರಡು ವರ್ಷಗಳಲ್ಲಿ ಖಾಸಗಿ ಡೇರಿ ಘಟಕಗಳು ಹಾಗೂ ಸಹಕಾರಿ ಒಕ್ಕೂಟಗಳು ಹಾಲಿನ ಖರೀದಿಯನ್ನು ಕಡಿಮೆಗೊಳಿಸಿವೆ ಮಾತ್ರವಲ್ಲ, ಖರೀದಿ ದರವನ್ನು ಇಳಿಕೆ ಮಾಡಿವೆ ಎನ್ನುವುದು ಗ್ರಾಮೀಣ ರೈತರ ಆರೋಪಗಳಾಗಿವೆ. ಪ್ರಮುಖ ಹಾಲು ಉತ್ಪಾದಕ ರಾಜ್ಯವಾದ ಮಹಾರಾಷ್ಟ್ರದಲ್ಲಿ ಖಾಸಗಿ ಡೇರಿ ಘಟಕಗಳು ಖರೀದಿ ದರವನ್ನು ಕಡಿಮೆಗೊಳಿಸಿ, ತಾವು ಹೆಚ್ಚು ಲಾಭಮಾಡಿಕೊಳ್ಳುತ್ತಿವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಹಾಗೂ ಹಾಲು ಉತ್ಪಾದಕ ರೈತರ ಸಂಘರ್ಷ ಸಮಿತಿ ಆರೋಪಿಸಿವೆ. ಪ್ರತಿಭಟನೆಗೂ ಈ ಸಂಘಟನೆಗಳು ಮುಂದಾಗಿವೆ.

ಈ ಮಧ್ಯೆ ಪಶುಸಂಗೋಪನೆಯ ವೆಚ್ಚ ಕೂಡಾ ವಿಪರೀತವಾಗಿ ಏರುತ್ತಿದೆ. ಭಾರತದ ಬಹುತೇಕ ಡೇರಿ ಕೃಷಿಕರು ಸಣ್ಣ ರೈತರು ಹಾಗೂ ಭೂರಹಿತ ಕುಟುಂಬಗಳಿಗೆ ಸೇರಿದವರಾಗಿದ್ದಾರೆ. ಡೇರಿ ಜಾನುವಾರುಗಳಿಗೆ ಸಮರ್ಪಕವಾದ ಆಹಾರ ಪೂರೈಕೆಯನ್ನು ಖಾತರಿಪಡಿಸುವುದು ಹೈನುಗಾರಿಕೆಯ ಅತ್ಯಂತ ಮುಖ್ಯವಾದ ಅಂಶವಾಗಿದೆ.ಗೋಮಾಳಗಳು ಅಥವಾ ಹುಲ್ಲುಗಾವಲುಗಳು, ಒಣ ಮೇವು ಹಾಗೂ ಪಶು ಆಹಾರ ಸಮರ್ಪಕವಾಗಿ ಪೂರೈಕೆಯಾದಲ್ಲಿ ಹೈನುಗಾರಿಕೆಯನ್ನು ಯಶಸ್ವಿಯಾಗಿ ನಡೆಸಲು ಸಾಧ್ಯ. ದೇಶದ ಬಹುತೇಕ ಭಾಗಗಳಲ್ಲಿ ಹುಲ್ಲುಗಾವಲುಗಳು ಹಾಗೂ ಮೇವಿನ ಮರಗಳು ತ್ವರಿತವಾಗಿ ಕ್ಷೀಣಿಸುತ್ತಾ ಬರುತ್ತಿವೆ. ಇತ್ತೀಚಿನ ವರ್ಷಗಳ ಮೇವಿನ ಹಿಂಡಿಗಳ ಉತ್ಪಾದಿಸುವ ಬೃಹತ್ ಘಟಕಗಳು ತಲೆಯೆತ್ತುತ್ತಿವೆಯಾದರೂ, ಅವು ರಫ್ತಿನೆಡೆಗೆ ಹೆಚ್ಚು ಗಮನಹರಿಸುತ್ತಿವೆ. ಇದರಿಂದಾಗಿ ಗ್ರಾಮೀಣ ಭಾಗದ ಬಡ ಹಾಗೂ ಮಧ್ಯಮ ವರ್ಗದ ಡೇರಿ ಕೃಷಿಕರು ಅಧಿಕ ದರ ತೆತ್ತು ಕಡಿಮೆ ಪ್ರಮಾಣದ ಮೇವಿನ ಹಿಂಡಿಗಳನ್ನು ಖರೀದಿಸುವ ಪರಿಸ್ಥಿತಿ ಉಂಟಾಗಿದೆ. ಈ ಎಲ್ಲಾ ಅಂಶಗಳು ಡೇರಿ ಕೃಷಿಕರ ನಿರ್ವಹಣಾ ವೆಚ್ಚ ಏರಿಕೆಯಾಗಲು ಕಾರಣವಾಗಿದೆ. ಭೂರಹಿತ ಡೇರಿ ಕೃಷಿಕರಂತೂ ನಿರ್ವಹಣಾ ವೆಚ್ಚದಲ್ಲಿನ ಏರಿಕೆಯಿಂದ ಕಂಗಾಲಾಗಿದ್ದಾರೆ. ಭೂಮಾಲಕತ್ವವನ್ನು ಹೊಂದಿರುವ ಡೇರಿ ಕೃಷಿಕರಿಗೆ ಒಣಮೇವು ಉಚಿತವಾಗಿ ಲಭ್ಯವಾಗುತ್ತಾದರೂ, ಭೂರಹಿತ ಡೇರಿ ಕೃಷಿಕರು ಆ ಒಣಮೇವಿಗಾಗಿ ಅಧಿಕ ದರವನ್ನು ಪಾವತಿಸಬೇಕಾಗಿದೆ.

ಆಧುನಿಕ ಭಾರತದಲ್ಲಿ ಗೋವು ರಾಜಕಾರಣದ ಭಾಗವಾಗುತ್ತಿರುವುದರ ದುಷ್ಪರಿಣಾಮವನ್ನು ನೇರವಾಗಿ ಎದುರಿಸುತ್ತಿರುವವರು ಗೋಸಾಕಣೆಗಾರರು. ಜಾನುವಾರು ಮಾರಾಟಕ್ಕೆ ಸಂಬಂಧಿಸಿದ ನಿಯಮಗಳು ಹೈನೋದ್ಯಮವನ್ನು ನಂಬಿದ ರೈತರ ಕೊರಳಿಗೆ ಉರುಳಾಗಿ ಪರಿಣಿಮಿಸಿವೆೆ. ಈ ಹಿಂದೆ ತಾವು ಸಾಕುವ ಜಾನುವಾರುಗಳ ಮಾರಾಟದ ಹಕ್ಕನ್ನು ರೈತರೇ ಹೊಂದಿದ್ದರು. ಹೈನುಗಾರಿಕೆ ಉದ್ಯಮವಾಗಿರುವುದರಿಂದ ಇಲ್ಲಿ ಲಾಭ-ನಷ್ಟಗಳ ಲೆಕ್ಕಾಚಾರ ಮುಖ್ಯ. ಈ ಹಿಂದೆ ಹಾಲು ಕೊಡದ ಗೋವುಗಳನ್ನು ಮಾರಾಟ ಮಾಡಿ ಅದರಿಂದ ರೈತರು ಒಂದಿಷ್ಟು ಹಣ ಸಂಪಾದಿಸುತ್ತಿದ್ದರು. ಆ ಹಣ ಗೋವುಗಳ ಆಹಾರ ಮತ್ತು ಇನ್ನಿತರ ವ್ಯವಸ್ಥೆಗಳಿಗೆ ಸಹಾಯ ಮಾಡುತ್ತಿತ್ತು. ಇದೀಗ ಸರಕಾರದ ಕಾನೂನುಗಳಿಂದಾಗಿ ಅನುಪಯುಕ್ತ ಗೋವುಗಳನ್ನು ಮಾರುವ ಹಕ್ಕನ್ನೇ ಕಳೆದುಕೊಂಡಿದ್ದಾರೆ. ಪರಿಣಾಮವಾಗಿ, ಈ ಗೋವುಗಳನ್ನು ಸಾಕುವ ವೆಚ್ಚವನ್ನು ರೈತರು ಭರಿಸಬೇಕಾಗಿದೆ. ಒಂದೆಡೆ ಗೋವು ಮಾರಿ ಸಿಗುತ್ತಿದ್ದ ಆದಾಯವೂ ಕೈ ತಪ್ಪಿದೆ. ಜೊತೆಗೆ, ಅನುಪಯುಕ್ತ ಗೋವುಗಳಿಗೂ ಹುಲ್ಲು ಹಾಕಿ ಸಾಕಬೇಕಾಗಿದೆ.

ಇದೇ ಸಂದರ್ಭದಲ್ಲಿ, ಈ ಗೋವುಗಳು ಗೋಶಾಲೆಗಳ ಹೆಸರಿನಲ್ಲಿ ನಕಲಿ ಗೋ ರಕ್ಷಕರ ಕೈವಶವಾಗುತ್ತಿವೆೆ. ರೈತರ ಗೋವುಗಳನ್ನು ಮುಂದಿಟ್ಟುಕೊಂಡು, ರೈತರಲ್ಲದವರು ಲಾಭ ಮಾಡಿಕೊಳ್ಳುತ್ತಿದ್ದಾರೆ. ಜಾನುವಾರು ಮಾರಾಟಕ್ಕೆ ಅಡ್ಡಿಪಡಿಸುವಂತಹ ಕಾನೂನನ್ನು ಜಾರಿಗೊಳಿಸಿರುವುದೇ ಗ್ರಾಮೀಣ ಹೈನೋದ್ಯಮಗಳನ್ನು ನಾಶ ಮಾಡಲು ಎಂಬ ಆರೋಪಗಳಿವೆ. ಕೃಷಿ, ಹೈನುಗಾರಿಕೆ ಕ್ಷೇತ್ರದಲ್ಲಿ ಹೆಚ್ಚುತ್ತಿರುವ ಕಾರ್ಪೊರೇಟೀಕರಣದ ಪ್ರಭಾವದ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಚರ್ಚೆಯಾಗುತ್ತಿವೆ. ಡೇರಿ ಕೃಷಿಕರ ಮೇಲೆ ನಿಧಾನಕ್ಕೆ ಕಾರ್ಪೊರೇಟ್ ಶಕ್ತಿಗಳು ನಿಯಂತ್ರಣ ಸಾಧಿಸತೊಡಗಿವೆ. ಪಶುಸಂಗೋಪನೆಗೆ ನಿರ್ದಿಷ್ಟವಾದ ದುಬಾರಿಯಾದ ಸಲಕರಣೆಗಳು, ಪಶು ಆಹಾರ ಅಥವಾ ಔಷಧಿಗಳನ್ನು ಉಪಯೋಗಿಸುವಂತೆ ಕಾರ್ಪೊರೇಟ್‌ಗಳು ಸೂಚಿಸುವುದರಿಂದ ರೈತರು ಕೈಸುಟ್ಟುಕೊಳ್ಳುವಂತಹ ಪರಿಸ್ಥಿತಿಯುಂಟಾಗಿದೆ. ಭವಿಷ್ಯದಲ್ಲಿ ಸಣ್ಣ ಪುಟ್ಟ ಹೈನೋದ್ಯಮಿಗಳು ನಾಶವಾಗಿ ಆ ಜಾಗವನ್ನು ಬೃಹತ್ ಕಾರ್ಪೊರೇಟ್ ಸಂಸ್ಥೆಗಳು ಆಕ್ರಮಿಸಿಕೊಳ್ಳಲಿವೆ. ಈ ಕಾರಣಕ್ಕಾಗಿಯೇ ಯುರೋಪ್, ಆಸ್ಟ್ರೇಲಿಯಾ ಹಾಗೂ ನ್ಯೂಝಿಲ್ಯಾಂಡ್‌ಗಳಿಂದ ಹಾಲಿನ ಉತ್ಪನ್ನಗಳ ಆಮದನ್ನು ಹೆಚ್ಚಿಸುವಂತಹ ಮುಕ್ತ ವಾಣಿಜ್ಯ ಒಪ್ಪಂದಗಳ ಜಾರಿಯನ್ನು ಪ್ರಬಲವಾಗಿ ರೈತರು ವಿರೋಧಿಸುತ್ತಿದ್ದಾರೆ. ರೈತರ ತೀವ್ರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಈ ಕುರಿತ ಮಾತುಕತೆಗಳನ್ನು ಸ್ಥಗಿತಗೊಳಿಸಿದೆ. ಆದಾಗ್ಯೂ ಅಮೆರಿಕದ ಜೊತೆ ಏರ್ಪಡಿಸಿಕೊಳ್ಳಲಾದ ಮುಕ್ತ ವಾಣಿಜ್ಯ ಒಪ್ಪಂದವು ಡೇರಿ ಉತ್ಪನ್ನಗಳ ಆಮದನ್ನು ಕೂಡಾ ಒಳಗೊಂಡಿರುವುದರಿಂದ ದೇಶದ ಹೈನುಗಾರರ ಭವಿಷ್ಯ ಅಂಧಕಾರದೆಡೆಗೆ ಸಾಗುವುದು ನಿಶ್ಚಿತ.

ಈಗಾಗಲೇ ಸಮಸ್ಯೆಗಳ ಸುಳಿಯಲ್ಲಿ ಒದ್ದಾಡುತ್ತಿರುವ ಡೇರಿ ಕೃಷಿಕರಿಗೆ ಕೋವಿಡ್ ಹಾಗೂ ಲಾಕ್‌ಡೌನ್‌ನಿಂದಾಗಿ ಗಾಯದ ಮೇಲೆ ಬರೆ ಎಳೆದಂತಾಗಿದೆ. ಹಾಲು ಬೇಗನೆ ಕೆಟ್ಟುಹೋಗುವ ಉತ್ಪನ್ನವಾಗಿರುವುದರಿಂದ ಅದನ್ನು ಕ್ಲಪ್ತ ಅವಧಿಯಲ್ಲಿ ಖರೀದಿ ಕೇಂದ್ರಗಳಿಗೆ ತಲುಪಿಸಬೇಕಾಗುತ್ತದೆ. ಅಲ್ಲದೆ ಹಠಾತ್ ಮಾರುಕಟ್ಟೆ ನಷ್ಟ ಅಥವಾ ದರ ಕುಸಿತದಿಂದಾಗಿ ಸಣ್ಣ ಮಟ್ಟದ ಡೇರಿ ಕೃಷಿಕರು ಬಾಧಿತರಾಗದಂತೆ ನೋಡಿಕೊಳ್ಳಲು ಸಾಕಷ್ಟು ಕಾಳಜಿ ವಹಿಸಬೇಕಾದ ಅಗತ್ಯವಿದೆ.

ಒಂದು ವೇಳೆ ಸಣ್ಣ ದರ್ಜೆಯ ಸಂಸ್ಕರಣ ಘಟಕಗಳು ಹಳ್ಳಿಯೊಳಗೆ ಅಥವಾ ಆಸುಪಾಸಿನಲ್ಲಿ ಸ್ಥಾಪನೆಯಾದಲ್ಲ್ಲಿ ಡೇರಿ ಕೃಷಿಕರಿಗೆ ಆರ್ಥಿಕವಾಗಿ ಲಾಭದಾಯಕವಾಗಲಿದೆ. ಅಲ್ಲದೆ ಹಾಲಿನಿಂದ ಉತ್ಪಾದನೆಯಾಗುವ ಪೌಷ್ಟಿಕ ಆಹಾರಗಳು ಗ್ರಾಮೀಣ ಪ್ರದೇಶಗಳ ಬಡಜನತೆಗೆ ವಿಪುಲವಾಗಿ ಲಭ್ಯವಾಗುವ ಸಾಧ್ಯತೆಗಳು ಅಧಿಕವಾಗಿವೆ.ಲಾಕ್‌ಡೌನ್ ಅಥವಾ ಸಾರಿಗೆ ವ್ಯತ್ಯಯದಂತಹ ಸಂದರ್ಭಗಳಲ್ಲಿ ಸ್ಥಳೀಯ ಪಂಚಾಯತ್‌ಗಳು ಡೇರಿ ಕೃಷಿಕರಿಂದ ಹಾಲನ್ನು ಖರೀದಿಸಿ ಅದನ್ನು ಕಡುಬಡ ಕುಟುಂಬಗಳಿಗೆ ಉಚಿತವಾಗಿ ವಿತರಿಸುವ ಹಾಗೂ ಪೌಷ್ಟಿಕ ಆಹಾರ ವಿತರಣೆ ಯೋಜನೆಗಳಲ್ಲಿ ಹಾಲನ್ನು ಹೆಚ್ಚುವರಿಯಾಗಿ ನೀಡುವಂತಹ ವ್ಯವಸ್ಥೆಯನ್ನು ಸರಕಾರ ರೂಪಿಸಬೇಕಾಗಿದೆ. ಇದರಿಂದಾಗಿ ಹಾಲುವ್ಯರ್ಥವಾಗುವುದನ್ನು ತಡೆಯುವ ಜೊತೆಗೆ ಹೈನುಗಾರರಿಗೂ ಆರ್ಥಿಕ ಭದ್ರತೆ ದೊರೆಯಲಿದೆ. ಆದರೆ ಹೈನೋದ್ಯಮವನ್ನು ಲಾಭದಾಯಕವಾಗಿ ಉಳಿಸುವ ಉದ್ದೇಶವೇ ಸರಕಾರದ ಬಳಿ ಇಲ್ಲದಿರುವಾಗ ಈ ಸಮಸ್ಯೆಗಳಿಗೆ ಸರಕಾರದಿಂದ ಪರಿಹಾರ ನಿರೀಕ್ಷಿಸುವುದು ನಮ್ಮ ಮೂರ್ಖತನವಾಗದೆ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News