ದ.ಕ.: ನೆಲಕಚ್ಚುವ ಭೀತಿಯಲ್ಲಿ ಖಾಸಗಿ ಬಸ್ ಉದ್ಯಮ

Update: 2021-06-21 05:37 GMT

ಮಂಗಳೂರು, ಜೂ: ದ.ಕ.ಜಿಲ್ಲೆಯ ಜೀವನಾಡಿ ಎಂದೇ ಬಿಂಬಿತವಾಗಿರುವ, ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿರುವ ಖಾಸಗಿ ಬಸ್ ಸಾರಿಗೆ ಉದ್ಯಮವು ನೆಲಕಚ್ಚುವ ಭೀತಿ ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಡೀಸೆಲ್ ಸಹಿತ ವಾಹನಗಳ ಬಿಡಿಭಾಗಗಳ ಬೆಲೆ ಏರಿಕೆಯ ಮಧ್ಯೆ ನಷ್ಟದಲ್ಲಿ ನಡೆಯುತ್ತಿದ್ದ ಬಸ್ ಸಾರಿಗೆ ಉದ್ಯಮವು ಕೋವಿಡ್ ಮೊದಲ ಮತ್ತು ದ್ವಿತೀಯ ಅಲೆಯ ಅಬ್ಬರಕ್ಕೆ ಸಿಲುಕಿ ಮತ್ತಷ್ಟು ನಲುಗುತ್ತಿದೆ. ದ.ಕ.ಜಿಲ್ಲೆಯಲ್ಲಿ 1,500 ಸರ್ವೀಸ್, 425 ಸಿಟಿ, 75 ಕಾಂಟ್ರಾಕ್ಟ್ ಕ್ಯಾರೇಜ್ ಸಹಿತ ಸುಮಾರು 2 ಸಾವಿರ ಬಸ್‌ಗಳಿದ್ದು, ಅಂದಾಜು 700 ಮಾಲಕರಿದ್ದಾರೆ. ಅದರಲ್ಲೂ ಸುಮಾರು 200 ಮಾಲಕರಿಗೆ ತಲಾ ಒಂದೊಂದು ಬಸ್‌ಗಳಿವೆ. ಒಂದು ಕಾಲಕ್ಕೆ ಜಿಲ್ಲಾಡಳಿತ ಅಥವಾ ಸರಕಾರದ ಮೇಲೆ ಪ್ರಭಾವ ಬೀರುವಷ್ಟರ ಮಟ್ಟಿಗೆ ಬೆಳೆದಿದ್ದ ಬಸ್ ಸಾರಿಗೆ ಉದ್ಯಮವು ಇಂದು ನಾನಾ ಕಾರಣದಿಂದ ಕುಸಿತ ಕಾಣುತ್ತಿದೆ. ನಾಲ್ಕೈದು ಬಸ್‌ಗಳನ್ನು ಹೊಂದಿರುವ ಮತ್ತು ಬಸ್‌ಗಳ ಜೊತೆ ಹೊಟೇಲ್, ರಿಯಲ್ ಎಸ್ಟೇಟ್, ಗಣಿಗಾರಿಕೆ, ಫೈನಾನ್ಸ್ ಇತ್ಯಾದಿ ಉದ್ಯಮಗಳಲ್ಲಿ ತೊಡಗಿಸಿಕೊಂಡವರಿಗೆ ‘ಕೊರೋನ’ ದೊಡ್ಡ ಹೊಡೆತ ನೀಡದಿದ್ದರೂ ಕೂಡ ಏಕೈಕ ಬಸ್‌ಗಳ ಮಾಲಕರ ಬದುಕು ಮಾತ್ರ ಬಸ್ ಸಿಬ್ಬಂದಿ ವರ್ಗಕ್ಕಿಂತಲೂ ಶೋಚನೀಯ ಎಂಬ ಮಾತು ಕೇಳಿ ಬರುತ್ತಿದೆ.

  ಒಂದು ಬಸ್ ಖರೀದಿಸಿ ರೂಟ್‌ಗಳಲ್ಲಿ ಓಡಿಸಬೇ ಕಾದರೆ ಕನಿಷ್ಠ 32 ಲಕ್ಷ ರೂ. ಬೇಕು. ಬಹುತೇಕ ಬಸ್‌ಗಳನ್ನು ಬ್ಯಾಂಕ್‌ಗಳು ಅಥವಾ ಫೈನಾನ್ಸ್ ಸಾಲ ಮಾಡಿ ಖರೀದಿಸಲಾಗುತ್ತದೆ. ಪ್ರತೀ ಮೂರು ತಿಂಗಳಿಗೊಮ್ಮೆ ಮುಂಗಡವಾಗಿ ರಸ್ತೆ ತೆರಿಗೆ ಪಾವತಿಸಬೇಕಾಗುತ್ತದೆ. ಅಂದರೆ ಕನಿಷ್ಠ 30 ಸಾವಿರ ಮತ್ತು ಗರಿಷ್ಠ 60 ಸಾವಿರ ರೂ.ವನ್ನು ರಸ್ತೆ ತೆರಿಗೆ ಪಾವತಿಸಬೇಕು. ಉದಾಹರಣೆಗೆ ಎಪ್ರಿಲ್ 1ರಿಂದ ಬಸ್‌ಗಳನ್ನು ಪ್ರಯಾಣಿಕರ ಸೇವೆಗೆ ಒದಗಿಸಲು ಮುಂದಾಗುವ ಮಾಲಕರು ಮಾರ್ಚ್ 31ರೊಳಗೆ ಎಪ್ರಿಲ್, ಮೇ, ಜೂನ್ ತಿಂಗಳ ತೆರಿಗೆಯನ್ನು ಪಾವತಿಸಬೇಕು. ಇಲ್ಲದಿದ್ದರೆ ಬಸ್‌ಗಳನ್ನು ಸಾರಿಗೆ ಇಲಾಖೆಯ ಅಧಿಕಾರಿಗಳು ವಶಪಡಿಸುವ ಅಧಿಕಾರ ಹೊಂದಿರುತ್ತಾರೆ. ಅಕಸ್ಮಾತ್ ಬಸ್‌ಗಳನ್ನು ರಸ್ತೆಗೆ ಇಳಿಸಲು ಸಾಧ್ಯವಿಲ್ಲ ಎಂದಾದರೆ ಆರ್‌ಟಿಒ ಮುಂದೆ ಬಸ್‌ಗಳನ್ನು ಸೆರೆಂಡರ್ ಮಾಡಿಸಬೇಕು. ಕೋವಿಡ್ ಮೊದಲ ಮತ್ತು ಎರಡನೇ ಅಲೆ ಅಪ್ಪಳಿಸಿದೊಡನೆ ಬಸ್‌ಗಳ ಓಡಾಟಕ್ಕೆ ಸರಕಾರ ನಿರ್ಬಂಧ ಹೇರಿತ್ತು. ಉಪಾಯವಿಲ್ಲದೆ ಬಸ್‌ಗಳನ್ನು ಮಾಲಕರು ಆರ್‌ಟಿಒ ಮುಂದೆ ಸೆರೆಂಡರ್ ಮಾಡಿದ್ದಾರೆ. ಆದರೆ ಕೋವಿಡ್ ಕಾಲದ ಈ ಹೊಡೆತವನ್ನು ನಿರ್ಬಂಧ ತೆರವುಗೊಳಿಸಿದ ಬಳಿಕವೂ ತಾಳಲು ಸಾಧ್ಯವಿಲ್ಲ ಎಂದು ಬಸ್ ಮಾಲಕರು ಅಭಿಪ್ರಾಯಪಡುತ್ತಾರೆ.

ಹಿಂದೆ ಬಸ್‌ಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಜನರು ಪ್ರಯಾಣಿಸುತ್ತಿದ್ದರು. ಒಳ್ಳೆಯ ಆದಾಯವೂ ಬರುತ್ತಿತ್ತು. ಈಗ ಹಾಗಲ್ಲ, ಬಹುತೇಕ ಮಂದಿಯ ಬಳಿ ಸ್ಕೂಟರ್, ಬೈಕ್, ರಿಕ್ಷಾ ಅಥವಾ ಕಾರೋ ಇದೆ. ಎಲ್ಲರೂ ಅದರಲ್ಲೇ ಓಡಾಡುತ್ತಾರೆ. ಹಾಗಾಗಿ ಬಸ್‌ನಲ್ಲಿ ಪ್ರಯಾಣಿಸುವವರು ಕಡಿಮೆಯಾಗಿದ್ದಾರೆ. ಆದಾಯವೂ ಇಳಿಮುಖವಾಗಿದೆ. ಈ ಮಧ್ಯೆ ಡೀಸೆಲ್ ದರವೂ ಏರಿಕೆಯಾಗಿದೆ. ಮೊದಲ ಕೋವಿಡ್ ಅಲೆಯ ಸಂದರ್ಭ 63 ರೂ. ಇದ್ದ ದರ ಈಗ 93 ರೂ.ಗೆ ಏರಿದೆ. ಒಂದು ವರ್ಷದಲ್ಲಿ ಪ್ರತಿಯೊಂದು ಲೀಟರ್‌ಗೆ 30 ರೂ. ಏರಿಕೆಯಾಗಿದೆ. ಅದಲ್ಲದೆ ಬಿಡಿಭಾಗಗಳ ಬೆಲೆಯೂ ಹೆಚ್ಚಾಗಿದೆ. ಹಾಗಾಗಿ ಲಾಕ್‌ಡೌನ್ ಸಡಿಲಿಕೆ ಮಾಡಿದ ಬಳಿಕ ಬಸ್‌ಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟರೂ ಕೂಡ ಆರ್ಥಿಕ ಸಂಕಷ್ಟದಿಂದ ಹೊರಬಾರದ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಬಸ್ ಮಾಲಕರು ಹೇಳಿಕೊಳ್ಳುತ್ಥಾರೆ.

ಈಗಿನ ದರದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಸಾಧ್ಯವಿಲ್ಲ. ಆದರೆ, ಕೋವಿಡ್ ಕಾಲದಲ್ಲಿ ಬಸ್ ಪ್ರಯಾಣ ದರ ಏರಿಸುವುದು ಕೂಡ ಸಮಯೋಚಿತವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಬಸ್‌ಗಳ ಬ್ಯಾಟರಿ, ಟಯರ್, ಆಯಿಲ್-ಗ್ರೀಸ್ ಬದಲಾವಣೆ ಎಂದೆಲ್ಲಾ ಕನಿಷ್ಠ 1 ಲಕ್ಷ ರೂ. ಬೇಕು. ಸದ್ಯ ಅಷ್ಟು ಹಣ ಭರಿಸಿ ಬಸ್ ಓಡಿಸಲು ನಮಗೆ ಸಾಧ್ಯವಿಲ್ಲ.ಅದಕ್ಕಾಗಿ ಈ ವರ್ಷದ ಡಿಸೆಂಬರ್‌ವರೆಗೆ ಬಸ್ ತೆರಿಗೆಯಿಂದ ವಿನಾಯಿತಿ ನೀಡಬೇಕು. ಆವಾಗ ಮಾತ್ರ ನಮಗೆ ಚೇತರಿಸಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಬಸ್‌ಗಳನ್ನು ಓಡಿಸಲು ಸಾಧ್ಯವೇ ಇಲ್ಲ ಎಂದು ಮಾಲಕರು ಹೇಳುತ್ತಾರೆ.

ದ.ಕ.ಜಿಲ್ಲೆಯಲ್ಲಿ ಎಪ್ರಿಲ್ 28ರಿಂದ ಬಸ್‌ಗಳ ಓಡಾಟವನ್ನು ನಿಲ್ಲಿಸಲಾಗಿದೆ. ಆ ಬಳಿಕ ಬಸ್ ಚಾಲಕರು, ನಿರ್ವಾಹಕರಿಗೆ ಕೆಲಸವಿಲ್ಲ. ಮಾಲಕರಿಗೆ ಆದಾಯವೂ ಇಲ್ಲ. ಹಾಗಾಗಿ ಈಗ ಬಸ್ ಮಾಲಕರು ಮತ್ತು ಸಿಬ್ಬಂದಿ ವರ್ಗದ ಆರ್ಥಿಕ ಸ್ಥಿತಿಯು ಒಂದೇ ರೀತಿಯಾಗಿದೆ ಎಂದು ಮಾಲಕರು ನೊಂದು ನುಡಿಯುತ್ತಾರೆ.

ಅದರಲ್ಲೂ ಒಂದೊಂದು ಬಸ್‌ಗಳನ್ನು ಹೊಂದಿ ರುವವರ (ಮಾಲಕರು) ಪಾಡು ಹೇಳತೀರದು. ಮನೆಮಂದಿಯ ಚಿನ್ನಾಭರಣ ಅಡವಿಟ್ಟೋ, ಬ್ಯಾಂಕ್‌ನಿಂದ ಸಾಲ ಮಾಡಿಯೋ ಬಸ್ ಖರೀದಿಸಿದವರು ಇದೀಗ ಅತ್ತ ಬ್ಯಾಂಕ್‌ನ ಸಾಲದ ಕಂತು, ಅಡವಿಟ್ಟ ಚಿನ್ನಾಭರಣವನ್ನು ಬಿಡಿಸಲಾಗದೆ, ಬಡ್ಡಿ ಕಟ್ಟಲಾಗದೆ ಒದ್ದಾಡುತ್ತಿದ್ದಾರೆ. ಬದುಕಿನಲ್ಲೊಂದು ನೆಲೆ ಕಂಡುಕೊಳ್ಳಲು ಅಥವಾ ಉದ್ಯಮಿಯಾಗಬೇಕು ಎಂಬ ಕನಸನ್ನು ನನಸು ಮಾಡಲು ಹೊರಟವರನ್ನು ಕೊರೋನ ಸೋಂಕು ಬೀದಿಪಾಲು ಮಾಡಿ ಬಿಟ್ಟಿದೆ ಎಂದು ಹೇಳಲಾಗುತ್ತಿದೆ.

‘ನಮ್ಮ ಕಷ್ಟವನ್ನು ನಾವು ಯಾರಿಗೆ ಹೇಳಲಿ? ನೋವನ್ನು ಹೇಳಲಾಗದ ಅಥವಾ ಬೀದಿಗಿಳಿದು ಪ್ರತಿಭಟಿಸಲಾಗದ ಸ್ಥಿತಿ ನಮ್ಮದು. ರೈತರು ಆತ್ಮಹತ್ಯೆ ಮಾಡಿದಂತೆ ನಾವೂ ಕೂಡ ಆತ್ಮಹತ್ಯೆ ಮಾಡಿಕೊಳ್ಳಬೇಕಾದೀತೋ ಏನೋ? ಜಿಲ್ಲೆಯ ಉಸ್ತುವಾರಿ ಸಚಿವ, ಶಾಸಕರು, ಜಿಲ್ಲಾಧಿಕಾರಿ ನಮ್ಮ ಕಷ್ಟವನ್ನು ಇನ್ನಾದರು ಅರ್ಥಮಾಡಿಕೊಂಡು ಸ್ಪಂದಿಸಿದರೆ ಸಾಕಿತ್ತು ಎಂದು ಬಸ್ ಮಾಲಕರು ಅಳಲು ತೋಡಿಕೊಳ್ಳುತ್ತಿದ್ದಾರೆ.

ಒಂದು ವರ್ಷದಿಂದ ಕೊರೋನದಿಂದ ನಾವು ತುಂಬಾ ಸಂಕಷ್ಟಕ್ಕೀಡಾಗಿದ್ದೇವೆ. ಕೇರಳದಲ್ಲಿ 6 ತಿಂಗಳ ಕಾಲ ತೆರಿಗೆ ವಿನಾಯಿತಿ ನೀಡಿ ಬಸ್ ಮಾಲಕರು ನೆಮ್ಮದಿಯಿಂದಿರುವಂತೆ ಮಾಡಿದೆ. ನಮಗೂ ಅದೇ ಮಾದರಿಯಲ್ಲಿ ವಿನಾಯಿತಿ ನೀಡಬೇಕು. ಹಾಗಾದರೆ ಮಾತ್ರ ನಾವು ಚೇತರಿಸಿಕೊಳ್ಳಲು ಸಾಧ್ಯ. ಈಗಾಗಲೆ ಬಸ್ ಮಾಲಕರ ಪರಿಸ್ಥಿತಿಯನ್ನು ಜಿಲ್ಲಾ ಉಸ್ತುವಾರಿ ಸಚಿವ, ಜಿಲ್ಲಾಧಿಕಾರಿ, ಶಾಸಕರ ಗಮನಕ್ಕೆ ತರಲಾಗಿದೆ. ಆಶಾದಾಯಕ ಸ್ಪಂದನಕ್ಕಾಗಿ ಕಾಯುತ್ತಿದ್ದೇವೆ.

ದಿಲ್‌ರಾಜ್ ಆಳ್ವ,

ಅಧ್ಯಕ್ಷರು, ದ.ಕ.ಜಿಲ್ಲಾ ಬಸ್ ಮಾಲಕರ ಸಂಘ

ದ.ಕ.ಜಿಲ್ಲೆಯಲ್ಲಿ ಬಸ್ ಸಾರಿಗೆ ಉದ್ಯಮಕ್ಕೆ ನೂರಕ್ಕೂ ಅಧಿಕ ವರ್ಷಗಳ ಇತಿಹಾಸವಿದೆ. ಹಿಂದೆ ಸಿಪಿಸಿ, ಶಂಕರ ವಿಠಲ, ಭಾರತ್, ಮಹಾಬಲೇಶ್ವರ ಹೀಗೆ ಹಲವು ಬಸ್ ಕಂಪೆನಿಗಳಿದ್ದವು. ಈಗ ಅವ್ಯಾವುದೂ ಇಲ್ಲ. ಕಂಪೆನಿಗಳಿರುವಾಗ ಇಂತಹ ಆರ್ಥಿಕ ಹೊಡೆತವನ್ನು ಸಹಿಸಿಕೊಳ್ಳುತ್ತಿದ್ದವು. ಬಸ್‌ಗಳಲ್ಲಿ ಚಾಲಕ, ನಿರ್ವಾಹಕರಾಗಿ ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣಕ್ಕೆ ಮನೆಯವರ ಚಿನ್ನಾಭರಣ ಅಡವಿಟ್ಟೋ, ಬ್ಯಾಂಕ್-ಫೈನಾನ್ಸ್ ನಿಂದ ಸಾಲ ಮಾಡಿಯೋ ಕೇವಲ ಒಂದೊಂದು ಬಸ್ ಖರೀದಿಸಿ ಜೀವನ ಸಾಗಿಸುವ ನೂರಾರು ಮಾಲಕರಿದ್ದಾರೆ. ಅವರೆಲ್ಲರ ಸ್ಥಿತಿ ಶೋಚನೀಯವಾಗಿದೆ. ಸರಕಾರ ಬಸ್ ಮಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವುದು ಬೇಡ. ಕನಿಷ್ಠ 6 ತಿಂಗಳ ಕಾಲ ರಸ್ತೆ ತೆರಿಗೆ ವಿನಾಯಿತಿ ನೀಡಿದರೆ ಸಾಕು.

ಅಝೀಝ್ ಪರ್ತಿಪ್ಪಾಡಿ,

ಮಾಜಿ ಅಧ್ಯಕ್ಷ, ದ.ಕ.ಜಿಲ್ಲಾ ಬಸ್ ಮಾಲಕರ ಸಂಘ

1 ಲೀ.ಡೀಸೆಲ್‌ಗೆ 93 ರೂ. ಇದೆ. ಈಗ 1 ಲೀ. ಡೀಸೆಲ್‌ನಿಂದ 3.8 ಕಿ.ಮೀ. ಓಡಿಸಬಹುದು. ಅಂದರೆ ದಿನಕ್ಕೆ ಕನಿಷ್ಟ 9 ಸಾವಿರ ರೂ. ಡೀಸೆಲ್, ಚಾಲಕ-ನಿರ್ವಾಹಕರ ಸಂಬಳ ಮತ್ತಿತರ ಖರ್ಚು ಎಂದೆಲ್ಲಾ ಕನಿಷ್ಠ 2 ಸಾವಿರ ರೂ. ಬೇಕು. ಹೀಗೆ ದಿನಕ್ಕೆ 11 ಸಾವಿರ ರೂ. ಖರ್ಚು ಬರುತ್ತದೆ. ಆದರೆ ಬಸ್ ಟಿಕೆಟ್ ಕಲೆಕ್ಷನ್ 6-7 ಸಾವಿರ ರೂ.ಬರಬಹುದು. ದಿನದಲ್ಲಿ 4-5 ಸಾವಿರ ರೂ. ನಷ್ಟ ಭರಿಸಬೇಕಾಗುತ್ತದೆ. ಹಾಗಾಗಿ ಸದ್ಯದ ಸ್ಥಿತಿಯಲ್ಲಿ ಬಸ್ ಓಡಿಸಲು ಸಾಧ್ಯವೇ ಇಲ್ಲ. ನಾನು ಬಸ್ ಚಾಲಕನಾಗಿ ದುಡಿಯುತ್ತಲೇ ಮನೆಯವರ ಚಿನ್ನಾಭರಣ ಅಡವಿಟ್ಟು, ಬ್ಯಾಂಕ್‌ನಿಂದ ಸಾಲ ಮಾಡಿ ಬಸ್ ಖರೀದಿಸಿದ್ದೇನೆ. ಕಳೆದ 25 ವರ್ಷಗಳಿಂದ ಈ ಕ್ಷೇತ್ರದಲ್ಲಿದ್ದೇನೆ. ಇಂತಹ ಆರ್ಥಿಕ ಸಂಕಷ್ಟ ಯಾವತ್ತೂ ನನಗೆ ಎದುರಾಗಿಲ್ಲ. ನಯಾಪೈಸೆ ಆದಾಯವಿಲ್ಲದೆ 2 ತಿಂಗಳಾಗುತ್ತಾ ಬಂದಿದೆ. ಸದ್ಯದ ಸ್ಥಿತಿಯಲ್ಲಿ ನಾವು ಹೆಸರಿಗಷ್ಟೇ ಬಸ್ ಮಾಲಕರು. ನಮ್ಮ ಸ್ಥಿತಿಯನ್ನು ಯಾರಲ್ಲೂ ಹೇಳಲಾಗದ ಸ್ಥಿತಿಯಲ್ಲಿದ್ದೇವೆ.

ರಾಮಚಂದ್ರ ಪಿಲಾರ್,

ಬಸ್ಸೊಂದರ ಮಾಲಕ

Writer - ಹಂಝ ಮಲಾರ್

contributor

Editor - ಹಂಝ ಮಲಾರ್

contributor

Similar News