ಸೆಪ್ಟೆಂಬರ್-ಅಕ್ಟೋಬರ್‌ನಲ್ಲಿ ಕೋವಿಡ್ ಮೂರನೇ ಅಲೆ ಉತ್ತುಂಗಕ್ಕೇರುವ ನಿರೀಕ್ಷೆ: ಐಐಟಿ ಕಾನ್ಪುರ ಅಧ್ಯಯನ

Update: 2021-06-21 14:48 GMT

ಹೊಸದಿಲ್ಲಿ,ಜೂ.21: ಈ ವರ್ಷದ ಸೆಪ್ಟೆಂಬರ್-ಅಕ್ಟೋಬರ್ ವೇಳೆಗೆ ದೇಶದಲ್ಲಿ ಕೋವಿಡ್ ಮೂರನೇ ಅಲೆಯು ಉತ್ತುಂಗಕ್ಕೇರಬಹುದು ಎಂದು ಐಐಟಿ ಕಾನ್ಪುರದ ಪ್ರೊ.ರಾಜೇಶ್ ರಂಜನ್ ಮತ್ತು ಮಹೇಂದ್ರ ವರ್ಮಾ ಅವರ ತಂಡವು ನಡೆಸಿದ ಅಧ್ಯಯನವು ಸೋಮವಾರ ಹೇಳಿದೆ.

 ಮೂರನೇ ಅಲೆಯ ಬಗ್ಗೆ ಸರಕಾರಗಳು ಮತ್ತು ಸಾರ್ವಜನಿಕರಲ್ಲಿ ಗಣನೀಯ ಆತಂಕವಿದೆ. ಹೀಗಾಗಿ ಎಸ್‌ಐಆರ್ ಮಾದರಿಯನ್ನು ಬಳಸಿಕೊಂಡು ಎರಡನೇ ಅಲೆಯ ಸಾಂಕ್ರಾಮಿಕ ಮಾನದಂಡಗಳ ಆಧಾರದಲ್ಲಿ ಸಂಭಾವ್ಯ ಮೂರನೇ ಅಲೆಯ ಮೂರು ಸನ್ನಿವೇಶಗಳನ್ನು ನಾವು ಚಿತ್ರಿಸಿದ್ದೇವೆ. ಇದಕ್ಕಾಗಿ ಭಾರತವು ಜುಲೈ 15ರ ವೇಳೆಗೆ ಲಾಕ್‌ಡೌನ್‌ನಿಂದ ಸಂಪೂರ್ಣವಾಗಿ ಮುಕ್ತವಾಗಿರುತ್ತದೆ ಎಂದು ನಾವು ಪರಿಗಣಿಸಿದ್ದೇವೆ ಎಂದು ತಂಡವು ಹೇಳಿಕೆಯಲ್ಲಿ ತಿಳಿಸಿದೆ. ತಂಡವು ಚಿತ್ರಿಸಿರುವ ಸನ್ನಿವೇಶಗಳು ಹೀಗಿವೆ...

ಸನ್ನಿವೇಶ 1(ಮರಳಿ ಸಹಜ ಸ್ಥಿತಿಗೆ): ಮೂರನೇ ಅಲೆ ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಲಿದೆ,ಆದರೆ ಎರಡನೆ ಅಲೆಯ ಉತ್ತುಂಗತೆಗಿಂತ ಕಡಿಮೆಯಾಗಿರಲಿದೆ.

ಸನ್ನಿವೇಶ 2(ವೈರಸ್ ರೂಪಾಂತರಗಳೊಂದಿಗೆ ಸಾಮಾನ್ಯ ಸ್ಥಿತಿ):ಮೂರನೇ ಅಲೆಯ ಉತ್ತುಂಗತೆಯು ಎರಡನೇ ಅಲೆಗಿಂತ ಹೆಚ್ಚಿರಬಹುದು ಮತ್ತು ಸೆಪ್ಟೆಂಬರ್‌ನಲ್ಲಿಯೇ ಕಾಣಿಸಿಕೊಳ್ಳಬಹುದು.

ಸನ್ನಿವೇಶ 3(ಕಠಿಣ ಹಸ್ತಕ್ಷೇಪಗಳು):ಕಟ್ಟುನಿಟ್ಟಿನ ಸುರಕ್ಷಿತ ಅಂತರದೊಂದಿಗೆ ಮೂರನೇ ಅಲೆಯ ಉತ್ತುಂಗತೆಯನ್ನು ಅಕ್ಟೋಬರ್‌ವರೆಗೆ ವಿಳಂಬಿಸಬಹುದು ಮತ್ತು ಇಲ್ಲಿ ಉತ್ತುಂಗತೆ ಎರಡನೇ ಅಲೆಗಿಂತ ಕಡಿಮೆಯಿರುತ್ತದೆ.

ರಂಜನ್ ಅವರ ತಂಡವು covid19-forecast.org ನಲ್ಲಿ ದೇಶದಲ್ಲಿಯ ದೈನಂದಿನ ಕೋವಿಡ್ ಮುನ್ಸೂಚನೆಗಳನ್ನು ಒದಗಿಸುತ್ತದೆ.

ಐಐಟಿ ಕಾನ್ಪುರ ತಂಡದ ಮೌಲ್ಯಮಾಪನದಂತೆ ಕೆಲವು ಈಶಾನ್ಯ ರಾಜ್ಯಗಳನ್ನು (ಸಿಕ್ಕಿಂ,ಮಣಿಪುರ,ಮಿಜೋರಾಂ ಇತ್ಯಾದಿ) ಹೊರತುಪಡಿಸಿ ಹೆಚ್ಚಿನೆಲ್ಲ ರಾಜ್ಯಗಳಲ್ಲಿ ಎರಡನೇ ಅಲೆಯು ಕ್ಷೀಣಿಸಿದೆ. ಹೆಚ್ಚಿನ ರಾಜ್ಯಗಳಲ್ಲಿ ಪಾಸಿಟಿವಿಟಿ ದರ ಶೇ.5ಕ್ಕಿಂತ ಕಡಿಮೆಯಿದ್ದು, ಕೇರಳ,ಗೋವಾ,ಸಿಕ್ಕಿಂ,ಮೇಘಾಲಯಗಳಲ್ಲಿ ಮಾತ್ರ ಅದು ಶೇ.10ಕ್ಕಿಂತ ಹೆಚ್ಚಿದೆ.

ಸದ್ಯಕ್ಕೆ ಎಸ್‌ಐಆರ್ ಮಾದರಿಯು ಲಸಿಕೆ ನೀಡಿಕೆಯನ್ನು ಒಳಗೊಂಡಿಲ್ಲ ಮತ್ತು ಲಸಿಕೆ ನೀಡಿಕೆಯು ಕೋವಿಡ್ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸಲೇಬೇಕು. ಹೀಗಾಗಿ ಮಾದರಿಯನ್ನು ಪರಿಷ್ಕರಿಸಲಾಗುತ್ತಿದ್ದು,ಮುಂದಿನ ವಾರದ ಅಂತ್ಯದೊಳಗೆ ಇನ್ನೊಂದು ಅಧ್ಯಯನ ವರದಿ ಹೊರಬರುವ ಸಾಧ್ಯತೆಯಿದೆ ಎಂದು ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News