ಬ್ರಿಟನ್: ಕಾರು ಅಪಘಾತದಲ್ಲಿ ಯುಎಇಯ ಖ್ಯಾತ ಮಾನವ ಹಕ್ಕು ಕಾರ್ಯಕರ್ತೆ ಮೃತ್ಯು

Update: 2021-06-21 17:42 GMT
photo: twitter/@fatimazsaid

ಹೊಸದಿಲ್ಲಿ,ಜೂ.21: ಲಂಡನ್ ಸಮೀಪ ಶನಿವಾರ ಸಂಭವಿಸಿದ ಕಾರು ಅಪಘಾತದಲ್ಲಿ ಸಂಯುಕ್ತ ಅರಬ್ ಗಣರಾಜ್ಯ (ಯುಎಎಇ)ದ ಭಿನ್ನಮತೀಯ ಮಾನವ ಹಕ್ಕುಗಳ ಕಾರ್ಯಕರ್ತೆ ಮತ್ತು ಟೀಕಾಕರರಾಗಿದ್ದ ಅಲಾ ಅಲ್-ಸಿದ್ದಿಕ್ ಅವರು ಸಾವನ್ನಪ್ಪಿದ್ದಾರೆ.

ಅಲಾ ಯುಎಇ ಮತ್ತು ವಿಶಾಲ ಕೊಲ್ಲಿ ಪ್ರದೇಶದಲ್ಲಿ ಹೆಚ್ಚಿನ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳಿಗಾಗಿ ಪ್ರತಿಪಾದಿಸುವ ಬ್ರಿಟನ್ ಮೂಲದ ಎನ್‌ಜಿಒ ‘ಎಎಲ್‌ಕ್ಯೂಎಸ್‌ಟಿ’ಯ ಕಾರ್ಯಕಾರಿ ನಿರ್ದೇಶಕರಾಗಿದ್ದರು.

ಅಲಾ ನಿಧನಕ್ಕೆ ಎಎಲ್‌ಕ್ಯೂಎಸ್‌ಟಿ ತೀವ್ರ ಸಂತಾಪ ವ್ಯಕ್ತಪಡಿಸಿದೆ.

ಅಲಾ ಅವರ ತಂದೆ ಮುಹಮ್ಮದ್ ಅಲ್-ಸಿದ್ದಿಕ್ ಅವರೂ ಖ್ಯಾತ ಮಾನವ ಹಕ್ಕುಗಳ ಕಾರ್ಯಕರ್ತರಾಗಿದ್ದು, 2013ರಿಂದಲೂ ಯುಎಇ ಅಧಿಕಾರಿಗಳ ಬಂಧನದಲ್ಲಿದ್ದಾರೆ.

ಯುಎಇಯ ಸಮರ್ಥ ಸಂಶೋಧಕಿ ಮತ್ತು ಪ್ರಾಮಾಣಿಕ ಸೋದರಿ,ಪ್ರೊಫೆಸರ್ ಅಲಾ ಅಲ್-ಸಿದ್ದಿಕ್ ಅವರು ಈ ಜಗತ್ತಿಗೆ ವಿದಾಯ ಹೇಳಿದ್ದಾರೆ ಮತ್ತು ಅವರ ತಂದೆ ಮುಹಮ್ಮದ್ ಅಲ್-ಸಿದ್ದಿಕ್ ಅವರು ಎಮಿರೇಟ್ಸ್‌ನ ಕುಖ್ಯಾತ ಜೈಲಿನಲ್ಲಿ ಕೊಳೆಯುತ್ತಿದ್ದಾರೆ ಎಂದು ಸೌದಿ ಅರೇಬಿಯದ ಮಾನವ ಹಕ್ಕುಗಳ ಕಾರ್ಯಕರ್ತ ಅಬ್ದುಲ್ಲಾ ಅಲ್-ಅವ್ಡಾ ಟ್ವೀಟಿಸಿದ್ದಾರೆ.

ದೋಹಾ ನ್ಯೂಸ್ ಹೇಳಿರುವಂತೆ ಅಲಾ ಮತ್ತು ಅವರ ಪತಿ 2012ರಲ್ಲಿ ಕತರ್‌ನಲ್ಲಿ ರಾಜಕೀಯ ಆಶ್ರಯ ಪಡೆದಿದ್ದು,ಅಲ್ಲಿ ಅವರು ತಮ್ಮ ಬಂಧುಗಳ ಜೊತೆ ವಾಸವಿದ್ದರು. ಯುಎಇ ಭಿನ್ನಾಭಿಪ್ರಾಯದ ಧ್ವನಿಗಳನ್ನು ದಮನಿಸುತ್ತಿದ್ದ ಸಂದರ್ಭದಲ್ಲಿ ರಾಜಕೀಯ ಕಾರ್ಯಕರ್ತರ ಬಗ್ಗೆ ಕತರ್‌ನ ನಿಲುವು ಅದರ ಮತ್ತು ಯುಎಇ ಮಧ್ಯೆ ಬಿರುಕನ್ನು ಮೂಡಿಸಿತ್ತು. ರಾಜಕೀಯ ಭಿನ್ನಮತೀಯರೋರ್ವರ ಪತ್ನಿಗೆ ಸಂಬಂಧಿಸಿದಂತೆ 2015ರಿಂದ ಕತರ್ ಮತ್ತು ಯುಎಇ ನಸುವೆ ವಿವಾದವೊಂದು ಸೃಷ್ಟಿಯಾಗಿದೆ ಎಂದು ಕತರ್‌ನ ಉಪ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಶೇಖ್ ಮುಹಮ್ಮದ್ ಬಿನ್ ಅಬ್ದುಲ್‌ರಹಮಾನ್ ಬಿನ್ ಜಾಸ್ಸಿಂ ಅಲ್ ಥಾನಿ ಅವರು 2018ರಲ್ಲಿ ಹೇಳಿದ್ದರು.

ಸದ್ರಿ ಮಹಿಳೆಯನ್ನು ಎಮಿರೇಟ್ಸ್‌ನ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಕತರ್‌ನ ಅಮಿರ್ ಶೇಖ್ ತಮೀಮ್ ಬಿನ್ ಹಾಮದ್ ಅಲ್ ಥಾನಿ ಅವರನ್ನು ಕೋರಿಕೊಳ್ಳಲು ಅಬುಧಾಬಿ ತನ್ನ ದೂತನನ್ನು ರವಾನಿಸಿತ್ತು. ಆದರೆ ಈ ಕೋರಿಕೆಯನ್ನು ಕತರ್ ತಳ್ಳಿಹಾಕಿತ್ತು.

ಮಹಿಳೆ ಯಾರು ಎನ್ನುವುದು ರಹಸ್ಯವಾಗಿ ಉಳಿದಿತ್ತಾದರೂ ನಂತರದಲ್ಲಿ ಕತರ್‌ನ ಅಲ್-ಅರಬ್ ವೃತ್ತಪತ್ರಿಕೆಯ ಮುಖ್ಯ ಸಂಪಾದಕ ಅಬ್ದುಲ್ಲಾ ಅಲ್-ಅಥಬ್ಹಾ ಅವರು ಆ ಮಹಿಳೆ ಅಲಾ ಎನ್ನುವುದನ್ನು ಬಹಿರಂಗಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News