ಪ್ರತ್ಯೇಕ ಜಂಗಲ್ ಮಹಲ್ ರಾಜ್ಯದ ಬೇಡಿಕೆ ಇಟ್ಟ ಬಂಗಾಳ ಬಿಜೆಪಿ ಸಂಸದ

Update: 2021-06-21 17:47 GMT
photo: twitter

ಕೋಲ್ಕತಾ: ಬಿಜೆಪಿ ಸಂಸದ ಜಾನ್ ಬಾರ್ಲಾ ಅವರು ಉತ್ತರ ಬಂಗಾಳ ಜಿಲ್ಲೆಗಳನ್ನು ಒಳಗೊಂಡ ಪ್ರತ್ಯೇಕ ಕೇಂದ್ರಾಡಳಿತ ಪ್ರದೇಶ ಸ್ಥಾಪಿಸಬೇಕು ಎಂಬ ಕೋರಿಕೆ ಇಟ್ಟ ಕೆಲ ದಿನಗಳ ನಂತರ, ಅವರ ಪಕ್ಷದ ಸಹೋದ್ಯೋಗಿ ಸೌಮಿತ್ರಾ ಖಾನ್ ರಾಜ್ಯದ ಜಂಗಲ್ ಮಹಲ್ ಪ್ರದೇಶ ಹಾಗೂ ಅದರ ನೆರೆಹೊರೆಯ ಪ್ರದೇಶಗಳನ್ನು ಸೇರಿಸಿ ಪ್ರತ್ಯೇಕ ರಾಜ್ಯವನ್ನು ಸ್ಥಾಪಿಸಬೇಕೆಂದು ಸೋಮವಾರ ಬೇಡಿಕೆಯನ್ನು ಇಟ್ಟಿದ್ದಾರೆ.

ಬಾರ್ಲಾ ಅವರಂತೆಯೇ ಖಾನ್ ಅವರ ಬೇಡಿಕೆಯನ್ನು ಪಕ್ಷದ ರಾಜ್ಯ ನಾಯಕತ್ವವು ಅಂಗೀಕರಿಸಿಲ್ಲ, ತಾನು ಬಂಗಾಳದ ವಿಭಜನೆಯ ಪರವಾಗಿಲ್ಲ ಎಂದು ಬಂಗಾಳದ ಬಿಜೆಪಿ ಘಟಕ ಸ್ಪಷ್ಟವಾಗಿ ಹೇಳಿದೆ.

ಜಂಗಲ್ ಮಹಲ್ ಪ್ರದೇಶವು ಅನೇಕ ವರ್ಷಗಳಿಂದ ಯಾವುದೇ ಅಭಿವೃದ್ಧಿಗೆ ಸಾಕ್ಷಿಯಾಗಿಲ್ಲ ಹಾಗೂ  ಈ ಪ್ರದೇಶವನ್ನು ಬಂಗಾಳದಿಂದ ಪ್ರತ್ಯೇಕವಾಗಿಸಿ ರಾಜ್ಯದ ಸ್ಥಾನಮಾನವನ್ನು ನೀಡಿದ ನಂತರವೇ ಸ್ಥಳೀಯರ ಬೇಡಿಕೆಗಳನ್ನು ಈಡೇರಿಸಬಹುದು ಎಂದು ಬಿಶ್ನುಪುರದ ಲೋಕಸಭಾ ಸಂಸದ ಹೇಳಿದ್ದಾರೆ.

"ನನ್ನ ಪ್ರಕಾರ ಪುರುಲಿಯಾ, ಬಂಕುರಾ, ಜಾಗ್ರಾಮ್ ಹಾಗೂ ಬಿರ್ಭಮ್ , ಎರಡು ಮೆದಿನಿಪುರ ಜಿಲ್ಲೆಗಳ ಭಾಗಗಳನ್ನು ಒಳಗೊಂಡ ಜಂಗಲ್ ಮಹಲ್  ರಾಜ್ಯವನ್ನು ಸ್ಥಾಪಿಸಬೇಕು. ಈ ಮೂಲಕ  ಉದ್ಯೋಗ ಮತ್ತು ಅಭಿವೃದ್ಧಿಯ ಬೇಡಿಕೆಗಳನ್ನು ಪೂರೈಸಬೇಕು.  ಜಾನ್ ಬಾರ್ಲಾ ಅವರು ಉತ್ತರ ಬಂಗಾಳದ ಜನರ ಕುಂದುಕೊರತೆಗಳಿಗೆ ಧ್ವನಿ ನೀಡಿದ್ದಾರೆ. ನನ್ನ ಪ್ರದೇಶದ ಜನರಿಗೆ ನಾನು ಸಹ ಧ್ವನಿಗೂಡಿಸುತ್ತಿದ್ದೇನೆ "ಎಂದು ಖಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News