ಯೋಗದ ಮೂಲ ಭಾರತವಲ್ಲ ನೇಪಾಳ: ಕೆ.ಪಿ.ಶರ್ಮಾ ಒಲಿ

Update: 2021-06-21 18:01 GMT

ಕಠ್ಮಂಡು: ಯೋಗವು ನೇಪಾಳದಲ್ಲಿ ಆರಂಭವಾಯಿತು. ಜಗತ್ತಿನಲ್ಲಿ ಯೋಗ ಆರಂಭವಾದಾಗ ಭಾರತವೇ ಇರಲಿಲ್ಲ ಎಂದು ನೇಪಾಳದ ಹಂಗಾಮಿ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಸೋಮವಾರ ಹೇಳಿದ್ದಾರೆ.

 "ಯೋಗವು ನೇಪಾಳದಲ್ಲಿ ಹುಟ್ಟಿಕೊಂಡಿತೇ ಹೊರತು ಭಾರತದಲ್ಲಿ ಅಲ್ಲ. ಯೋಗ ಅಸ್ತಿತ್ವಕ್ಕೆ ಬಂದ ಸಂದರ್ಭದಲ್ಲಿ, ಭಾರತದ ಅಸ್ತಿತ್ವವಿರಲಿಲ್ಲ. ಅದು ಎರಡಾಗಿ ವಿಭಜನೆಯಾಗಿತ್ತು"ಎಂದು ಒಲಿ ಹೇಳಿದರು.

ಸೋಮವಾರ ಅಂತರ್ ರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ತಮ್ಮ ನಿವಾಸದಲ್ಲಿ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡುತ್ತಾ ಈ ಹೇಳಿಕೆ ನೀಡಿದ್ದಾರೆ. ಭಾರತೀಯ ತಜ್ಞರು ಇದರ ಬಗ್ಗೆ ಸತ್ಯವನ್ನು ಮರೆಮಾಚುತ್ತಿದ್ದಾರೆ ಎಂದು ಒಲಿ ಹೇಳಿದ್ದಾರೆ.

"ಈಗ ಇರುವ ಭಾರತವು ಹಿಂದೆ ಇರಲಿಲ್ಲ. ವಿವಿಧ ಬಣಗಳಾಗಿದ್ದ ಭಾರತವು ಆಗ ಖಂಡ ಅಥವಾ ಉಪಖಂಡದಂತೆಯೇ ಇತ್ತು" ಎಂದು ಒಲಿ ಹೇಳಿರುವುದಾಗಿ ಎಎನ್ ಐ ವರದಿ ಮಾಡಿದೆ.

2015ರಿಂದ ಜೂನ್ 21ರಂದು ಅಂತರ್ ರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.  ಈ ಕುರಿತಾಗಿ 2014ರಲ್ಲಿ ವಿಶ್ವ ಸಂಸ್ಥೆ ಘೋಷಣೆ ಮಾಡಿತ್ತು.

ಕಳೆದ ವರ್ಷ ಒಲಿ  ಭಗವಾನ್ ರಾಮನ ಜನ್ಮಸ್ಥಳವಾದ ಅಯೋಧ್ಯೆ ನೇಪಾಳದಲ್ಲಿದೆ ಮತ್ತು ರಾಮನು ನೇಪಾಳಿ ಎಂದು ಹೇಳಿಕೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News