ಮುಸ್ಲಿಮೇತರ ವ್ಯಕ್ತಿ ನಮ್ಮೊಂದಿಗಿದ್ದಿದ್ದರೆ ನಮ್ಮ ಬಂಧನವಾಗುತ್ತಿರಲಿಲ್ಲ: ಉ.ಪ್ರ ಪೊಲೀಸರಿಂದ ಬಂಧಿತ ಆಲಂ ಹತಾಶ ನುಡಿ

Update: 2021-06-22 14:13 GMT

ಹೊಸದಿಲ್ಲಿ,ಜೂ.22: ಎಂಟು ತಿಂಗಳ ಹಿಂದೆ ಉ.ಪ್ರದೇಶದ ಹತ್ರಸ್ ನಲ್ಲಿ ಮೇಲ್ಜಾತಿಯ ದುಷ್ಕರ್ಮಿಗಳಿಂದ ದಲಿತ ಯುವತಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ವರದಿ ಮಾಡಲು ಅಲ್ಲಿಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ಮಾಂಟ್ ಎಂಬಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟ ಕೇರಳ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್ ಮತ್ತು ಇತರ ಇಬ್ಬರ ಜೊತೆ ಟ್ಯಾಕ್ಸಿಯ ಚಾಲಕ ಆಲಂ ಕೂಡ ಜೈಲಿನಲ್ಲಿ ಕೊಳೆಯುತ್ತಿದ್ದಾರೆ. 2020,ಅ.5ರಂದು ತನ್ನ ಗಂಡ ಕೆಲಸಕ್ಕೆ ಹೋಗುವುದನ್ನು ತಡೆಯದಿದ್ದಕ್ಕೆ ಆಲಂ ಪತ್ನಿ ಬುಶ್ರಾ ಈಗಲೂ ಪರಿತಪಿಸುತ್ತಿದ್ದಾರೆ.

 ಓಲಾ ಟ್ಯಾಕ್ಸಿಯ ಚಾಲಕ ಆಲಂ ಅಂದು ಬೆಳಗಿನ ಜಾವ ಗ್ರೇಟರ್ ನೊಯ್ಡದಲ್ಲಿ ಕರ್ತವ್ಯನಿರತರಾಗಿದ್ದರು. ಬೆಳಿಗ್ಗೆ ಎಂಟು ಗಂಟೆಯ ವೇಳೆಗೆ ಎರಡು ಟ್ರಿಪ್ ಗಳನ್ನು ಪೂರೈಸಿದ್ದರು. ಅದರ ನಂತರ ಮಾಂಟ್ ನಲ್ಲಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಟಿವಿಯಲ್ಲಿ ಸುದ್ದಿ ಪ್ರಸಾರವಾಗುವವರೆಗೂ ಇಡೀ ದಿನ ಅವರೆಲ್ಲಿದ್ದಾರೆ ಎಂಬ ಮಾಹಿತಿ ಬುಶ್ರಾ ಮತ್ತು ಕುಟುಂಬದ ಇತರ ಸದಸ್ಯರಿಗೆ ಇರಲಿಲ್ಲ.

‘ಟಿವಿಯಲ್ಲಿ ಎಲ್ಲ ಬಗೆಯ ಸುಳ್ಳುಗಳನ್ನು ಹೇಳಲಾಗುತ್ತಿತ್ತು. ಅವರು ನನ್ನ ಗಂಡನನ್ನು ಭಯೋತ್ಪಾದಕ,ಸಂಚುಕೋರ ಮತ್ತು ಇನ್ನೇನೋ ಎಂದು ಬಣ್ಣಿಸಿದ್ದರು ’ ಎಂದು ಬುಶ್ರಾ ತನ್ನನ್ನು ಭೇಟಿಯಾದ ವರದಿಗಾರರ ಬಳಿ ಮಾತನಾಡುತ್ತ ನೆನಪಿಸಿಕೊಂಡರು.

ಆಲಂ ಅಂದು ತನ್ನ ಮೂರನೆಯ ಟ್ರಿಪ್ ನಲ್ಲಿ ಕಪ್ಪನ್ ಹಾಗೂ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಕಾರ್ಯಕರ್ತರಾದ ಅತಿಕುರ್ ರೆಹಮಾನ್ ಮತ್ತು ಮಸೂದ್ ಅವರನ್ನು ಹತ್ರಸ್‌ ಗೆ ಕರೆದೊಯ್ಯುತ್ತಿದ್ದರು. ಮಥುರಾ ಟೋಲ್ ಪ್ಲಾಝಾದ ಬಳಿಕ ಟ್ಯಾಕ್ಸಿಯನ್ನು ತಡೆದ ಪೊಲೀಸರು ಸಾರ್ವಜನಿಕ ಶಾಂತಿಭಂಗದ ಆರೋಪದಲ್ಲಿ ಎಲ್ಲ ನಾಲ್ವರನ್ನೂ ಬಂಧಿಸಿದ್ದರು. ಎರಡು ದಿನಗಳ ಬಳಿಕ ಅವರ ವಿರುದ್ಧ ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ),ಐಪಿಸಿ ಮತ್ತು ಐಟಿ ಕಾಯ್ದೆಯಡಿ ವಿವಿಧ ಆರೋಪಗಳನ್ನು ಹೊರಿಸಿ ಜೈಲಿಗಟ್ಟಲಾಗಿತ್ತು. ಆಗಿನಿಂದಲೂ ಆಲಂ, ಬುಶ್ರಾ ಮತ್ತು ಅವರ ಕುಟುಂಬ ಕಾನೂನಿನ ಜಂಜಾಟದಲ್ಲಿ ಸಿಕ್ಕಿಕೊಂಡಿದ್ದಾರೆ. ಪದೇ ಪದೇ ಜಾಮೀನಿಗೆ ಅರ್ಜಿಗಳನ್ನು ಸಲ್ಲಿಸಿದ್ದರೂ ಎಲ್ಲವೂ ನ್ಯಾಯಾಲಯದಲ್ಲಿ ತಿರಸ್ಕೃತಗೊಂಡಿವೆ.
  
ಈ ವರ್ಷದ ಎಪ್ರಿಲ್ 3ರಂದು ಅವರ ಬಂಧನವಾಗಿ 180 ದಿನಗಳು ಕಳೆದಿದ್ದವು ಮತ್ತು ಅವರ ವಿರುದ್ಧ ಯಾವುದೇ ಸಾಕ್ಷಾಧಾರ ದೊರಕಿರಲಿಲ್ಲ,ಈ ಹಿನ್ನೆಲೆಯಲ್ಲಿ ಎಲ್ಲ ನಾಲ್ವರೂ ಜಾಮೀನು ಪಡೆಯಲು ಅರ್ಹರಾಗಿದ್ದರು. ಆದರೆ ಅದೇ ದಿನ ಪೊಲೀಸರು ಅವರ ವಿರುದ್ಧ ನ್ಯಾಯಾಲಯದಲ್ಲಿ ಇನ್ನೊಂದು ಆರೋಪಪಟ್ಟಿಯನ್ನು ಸಲ್ಲಿಸಿದ್ದರು. ಪೊಲೀಸರು ಈ ನಾಲ್ವರು ಸೇರಿದಂತೆ ಎಂಟು ಮುಸ್ಲಿಮರ ವಿರುದ್ಧ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಹಣಕಾಸು ನೆರವಿನೊಂದಿಗೆ ಹತ್ರಸ್ ನಲ್ಲಿ ದಲಿತರು ಮತ್ತು ಠಾಕೂರ ಸಮುದಾಯಗಳ ನಡುವೆ ಜಾತಿ ದಂಗೆಯನ್ನು ಪ್ರಚೋದಿಸಲು ಉದ್ದೇಶಿಸಿದ್ದರು ಎಂಬ ಆರೋಪವನ್ನು ಹೊರಿಸಿದ್ದರು.

ಹತ್ರಸ್‌ ನಲ್ಲಿಯ ವಾಸ್ತವ ಸ್ಥಿತಿಯನ್ನು ಮುಚ್ಚಿಡುವುದು ಮತ್ತು ಹತ್ರಸ್ ಪ್ರಕರಣವನ್ನು ನಿರ್ವಹಿಸಲು ಆದಿತ್ಯನಾಥ ಸರಕಾರವು ವಿಫಲವಾಗಿದೆ ಎಂದು ಆರೋಪಿಸುವ ಧ್ವನಿಗಳನ್ನು ಅಡಗಿಸುವುದು ವಿಶೇಷ ತನಿಖಾ ತಂಡ ಮತ್ತು ಉ.ಪ್ರ.ಸರಕಾರದ ಉದ್ದೇಶವಾಗಿದೆ ಎಂದು ಆಲಂ ಪರ ವಕೀಲ ಸೈಫಾನ್ ಶೇಖ್ ಆರೋಪಿಸಿದರು.

ಭಯೋತ್ಪಾದನೆಯನ್ನು ತಡೆಯಲು ಬಳಸಬೇಕಾದ ಯುಎಪಿಎ ಕಾಯ್ದೆಯನ್ನು ಜನರಿಗೆ ಭಯವನ್ನೊಡ್ಡುವ ಕಾನೂನನ್ನಾಗಿ ಬಳಸಲಾಗುತ್ತಿದೆ. ಆರೋಪಿಗಳ ಪೈಕಿ ಯಾರೂ ಭಾರತ ಸರಕಾರ ಅಥವಾ ಭಾರತೀಯ ಸಂವಿಧಾನಕ್ಕೆ ಬೆದರಿಕೆಯನ್ನೊಡ್ಡುವ ಯಾವುದೇ ಕೃತ್ಯವನ್ನು ಮಾಡಿರಲಿಲ್ಲ ಎಂದು ಆಲಂ ಪರ ಇನ್ನೋರ್ವ ವಕೀಲ ಮಧುವನ ದತ್ ಚತುರ್ವೇದಿ ಹೇಳಿದರು.

ಆಲಂ ಬಂಧನವಾದಾಗಿನಿಂದ ಬುಶ್ರಾ ತನ್ನ ಅತ್ತೆ ಮನೆ ಮತ್ತು ತವರುಮನೆ ನಡುವೆ ಓಡಾಡುತ್ತಿದ್ದಾರೆ. ಕಾನೂನು ವೆಚ್ಚಕ್ಕಾಗಿ,ಕುಟುಂಬ ನಿರ್ವಹನೆಗೆ ಹಣಕಾಸು ನೆರವಿಗಾಗಿ ಬುಶ್ರಾ ಅವರ ಮೇಲೆ ಅವಲಂಬಿತರಾಗಿದ್ದಾರೆ.

ಡ್ರೈವಿಂಗ್ ಕೆಲಸ ಅಪರಾಧವೇ? ಮುಸ್ಲಿಮರು ಡ್ರೈವಿಂಗ್ ಕೆಲಸ ಮಾಡುವುದು ಅಪರಾಧವೇ ಎಂದು ಬುಶ್ರಾ ಪ್ರಶ್ನಿಸಿದರು.

ಬುಶ್ರಾರ ಸೋದರ ಆಮಿರ್ ಆಲಂ ಜಾಮೀನು ಸಾಧ್ಯತೆಯ ಕುರಿತು ಅವರೊಂದಿಗೆ ಹಲವಾರು ಬಾರಿ ದೂರವಾಣಿಯಲ್ಲಿ ಮಾತನಾಡಿದ್ದಾರೆ. ಇಂತಹ ಒಂದು ಸಂದರ್ಭದಲ್ಲಿ ಆಲಂ,‘ಎಲ್ಲವೂ ರಾಜಕೀಯದಾಟ ಮತ್ತು ಮತ್ತು ಇದರಲ್ಲಿ ಪೋಲಿಸರೂ ಅಸಹಾಯಕರಾಗಿದ್ದಾರೆ. ನಮ್ಮೊಂದಿಗೆ ಅಂದು ಯಾರಾದರೂ ಮುಸ್ಲಿಮೇತರ ವ್ಯಕ್ತಿಯಿದ್ದರೆ ನಾವು ಬಂಧಿಸಲ್ಪಡುತ್ತಿರಲಿಲ್ಲ ಎಂದು ಹತಾಶರಾಗಿ ಹೇಳಿದ್ದರು.

ಕೃಪೆ: thewire.in

Writer - ತರುಷಿ ಅಸ್ವಾನಿ

contributor

Editor - ತರುಷಿ ಅಸ್ವಾನಿ

contributor

Similar News