ಮಹಿಳೆ ತುಂಡುಡುಗೆ ತೊಡುವುದೇ ಲೈಂಗಿಕ ದೌರ್ಜನ್ಯಕ್ಕೆ ಕಾರಣ: ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್

Update: 2021-06-22 17:50 GMT

ಇಸ್ಲಾಮಾಬಾದ್, ಜೂ.22: ಮಹಿಳೆ ಉಡುವ ಬಟ್ಟೆಗಳು ಲೈಂಗಿಕ ದೌರ್ಜನ್ಯಕ್ಕೆ ಪ್ರೇರೇಪಿಸುತ್ತದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸೋಮವಾರ ನೀಡಿರುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಮಹಿಳೆ ತುಂಡುಡುಗೆ ತೊಟ್ಟರೆ ಅದು ಪುರುಷರ ಮೇಲೆ ಪರಿಣಾಮ ಬೀರುತ್ತದೆ (ಅವರು ರೊಬೋಟ್ ಗಳಲ್ಲದಿದ್ದರೆ) ಎಂದು ಅಮೆರಿಕನ್ ವೆಬ್ಸೈಟ್ ಗೆ ನೀಡಿದ ಸಂದರ್ಶನದಲ್ಲಿ ಇಮ್ರಾನ್ ಹೇಳಿದ್ದರು. ಈ ಹೇಳಿಕೆ ಸೋಮವಾರ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಪ್ರಚೋದನೆ ತಡೆಯಲೆಂದೇ ಪರ್ದಾ ಪದ್ಧತಿ ಜಾರಿಯಲ್ಲಿದೆ. ಇಲ್ಲಿ ಡಿಸ್ಕೋಗಳಿಲ್ಲ, ನೈಟ್ ಕ್ಲಬ್ ಗಳಿಲ್ಲ. ಆದ್ದರಿಂದ ಇದು ಸಂಪೂರ್ಣ ವಿಭಿನ್ನ ಸಮಾಜವಾಗಿದೆ. ಇಲ್ಲಿನ ಜೀವನ ವಿಧಾನ ಬೇರೆಯಾಗಿದೆ. ಸಮಾಜದಲ್ಲಿ ಪ್ರಚೋದನೆ ಹೆಚ್ಚಿದರೆ ಯುವಕರು ಪ್ರಚೋದನೆಗೆ ಒಳಗಾಗುತ್ತಾರೆ ಎಂದು ಇಮ್ರಾನ್ ಹೇಳಿದ್ದಾರೆ. 

ಇಮ್ರಾನ್ ಹೇಳಿಕೆಯನ್ನು ಖಂಡಿಸಿರುವ ಪಾಕಿಸ್ತಾನ್ ಮುಸ್ಲಿಂ ಲೀಗ್ ವಕ್ತಾರೆ ಮರಿಯಮ್ ಔರಂಗಝೇಬ್, ಇಮ್ರಾನ್ ಓರ್ವ ಅಸ್ವಸ್ಥ ಮನಸ್ಸಿನ ಸ್ತ್ರೀದ್ವೇಷಿ ಮತ್ತು ಭ್ರಷ್ಟ ಎಂದಿದ್ದಾರೆ. ಮಹಿಳೆಯರ ಆಯ್ಕೆಯು ಲೈಂಗಿಕ ದೌರ್ಜನ್ಯಕ್ಕೆ ಕಾರಣವಾಗುವುದಿಲ್ಲ. ಕೆಲವು ಪುರುಷರ ಮನಸ್ಥಿತಿ ನೀಚ ಅಪರಾಧ ಕೃತ್ಯದಲ್ಲಿ ತೊಡಗುವಂತೆ ಪ್ರೇರೇಪಿಸುತ್ತದೆ ಎಂದವರು ಹೇಳಿದ್ದಾರೆ. 

ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ಅತ್ಯಂತ ಬೇಜವಾಬ್ದಾರಿಯದ್ದಾಗಿದೆ.ಲೈಂಗಿಕ ದೌರ್ಜನ್ಯಕ್ಕೆ ಮಹಿಳೆಯ ಉಡುಗೆ ಕಾರಣ ಎಂದು ಹೇಳುವ ಮೂಲಕ ಪ್ರಧಾನಿ ಕ್ರಿಮಿನಲ್ ಗಳಿಗೆ ತಮ್ಮ ಕೃತ್ಯವನ್ನು ಸಮರ್ಥಿಸಿಕೊಳ್ಳುವ ಆಯ್ಕೆಯನ್ನು ನೀಡಿದ್ದಾರೆ ಎಂದು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿಯ ಸಂಸದೆ ಶೆರೀ ರೆಹ್ಮಾನ್ ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News