ಕೊವ್ಯಾಕ್ಸಿನ್ ಶೇ. 77.8ರಷ್ಟು ಪರಿಣಾಮಕಾರಿ: ಮೂರನೆ ಹಂತದ ಟ್ರಯಲ್ ನಲ್ಲಿ ಬಹಿರಂಗ

Update: 2021-06-22 18:26 GMT

ಹೊಸದಿಲ್ಲಿ, ಜೂ. 22: ಕೋವಿಡ್ ನಿಂದ ರಕ್ಷಿಸುವಲ್ಲಿ ಭಾರತ್ ಬಯೋಟೆಕ್ ನ ಕೊವ್ಯಾಕ್ಸಿನ್ ಶೇ. 77.8 ಪರಿಣಾಮಕಾರಿ ಎಂದು ದೇಶಾದ್ಯಂತದಿಂದ ಪಾಲ್ಗೊಂಡ 25,800 ಮಂದಿ ಮೇಲೆ ನಡೆಸಲಾದ 3ನೇ ಹಂತದ ಟ್ರಯಲ್ ನ ದತ್ತಾಂಶ ತಿಳಿಸಿದೆ. ಟ್ರಯಲ್ ನ ದತ್ತಾಂಶ ಹಾಗೂ ಫಲಿತಾಂಶವನ್ನು ಮಂಗಳವಾರ ಡಿಸಿಜಿಐ (ಭಾರತದ ಔಷಧಿ ಮಹಾನಿರ್ದೇಶನಾಲಯ)ಯ ವಿಷಯ ತಜ್ಞರ ಸಮಿತಿ ಪರಿಶೀಲನೆ ನಡೆಸಿದೆ ಹಾಗೂ ಅನುಮೋದನೆ ನೀಡಿದೆ. 

ದತ್ತಾಂಶವನ್ನು ವಾರಾಂತ್ಯದಲ್ಲಿ ಡಿಸಿಜಿಐಗೆ ಸಲ್ಲಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ದತ್ತಾಂಶವನ್ನು ಇದುವರೆಗೆ ಅಂತರ್ರಾಷ್ಟ್ರೀಯ ಮಾನ್ಯತೆ ಪಡೆದ, ವಿದ್ವತ್ಪೂರ್ಣ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ. ಡಿಸಿಜಿಐಗೆ ಸಲ್ಲಿಸಿದ ಬಳಿಕ ಮಾತ್ರವೇ ಪ್ರಕಟಿಸಲಾಗುತ್ತದೆ ಎಂದು ಈ ತಿಂಗಳ ಆರಂಭದಲ್ಲಿ ಭಾರತ್ ಬಯೋಟೆಕ್ ಹೇಳಿತ್ತು. ಮೂರನೇ ಹಂತದ ಟ್ರಯಲ್ ನ ಫಲಿತಾಂಶದ ಮೊದಲ ಮಧ್ಯಂತರ ವಿಶ್ಲೇಷಣೆಯನ್ನು ಮಾರ್ಚ್ ನಲ್ಲಿ ಸಲ್ಲಿಸಲಾಗಿತ್ತು. 

ಇದು ಮೊದಲು ಸೋಂಕಿಗೆ ಒಳಗಾಗದೆ ಎರಡನೇ ಡೋಸ್ ತೆಗೆದುಕೊಂಡವರಿಗೆ ಕೋವಿಡ್ ಸೋಂಕಿನಿಂದ ಕೊವ್ಯಾಕ್ಸಿನ್ ಶೇ. 81 ಪರಿಣಾಮಕಾರಿ ರಕ್ಷಣೆ ನೀಡಿರುವುದನ್ನು ಬಹಿರಂಗಪಡಿಸಿದೆ. ಈ ಹಂತದಲ್ಲಿ ಲಭ್ಯವಿದ್ದ ದತ್ತಾಂಶ ಹಾಗೂ ವಿಶ್ಲೇಷಣೆ ಕೂಡ ಕೋವಿಡ್ ಸೋಂಕಿನ ಪ್ರಕರಣಗಳಿಂದ ಆಸ್ಪತ್ರೆಗೆ ದಾಖಲಾಗುವ ಪ್ರಮೇಯವನ್ನು ಕೊವ್ಯಾಕ್ಸಿನ್ ಶೇ. 100ರಷ್ಟು ಕಡಿಮೆ ಮಾಡಿರುವುದನ್ನು ತೋರಿಸಿದೆ. 

ಮೂರನೇ ಹಂತದ ದತ್ತಾಂಶದ ಅನುಮೋದನೆ ಭಾರತ್ ಬಯೋಟೆಕ್ ಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ಇಯುಎಲ್ (ತುರ್ತು ಬಳಕೆಗೆ ಪರಿಗಣನೆ) ಪಡೆಯಲು ನೆರವು ನೀಡುವ ಸಾಧ್ಯತೆ ಇದೆ. ಅಗತ್ಯ ಇರುವ ದತ್ತಾಂಶ ಹಾಗೂ ದಾಖಲೆಗಳನ್ನು ಅಂತಿಮವಾಗಿ ಸಲ್ಲಿಸಲು ಮಾರ್ಗಸೂಚಿ ಕುರಿತು ಚರ್ಚೆ ನಡೆಸಲು ವಿಶ್ವ ಆರೋಗ್ಯ ಸಂಸ್ಥೆಯ ಅಧಿಕಾರಿಗಳೊಂದಿಗೆ ‘ಸಲ್ಲಿಕೆ ಪೂರ್ವ’ ಸಭೆಯನ್ನು ಭಾರತ್ ಬಯೋಟೆಕ್ ಬುಧವಾರ ನಡೆಸುವ ಸಾಧ್ಯತೆ ಇದೆ. ಭಾರತ್ ಬಯೋಟೆಕ್ ಅಗತ್ಯ ಇರುವ ಶೇ. 90ರಷ್ಟು ದಾಖಲೆಗಳನ್ನು ಈಗಾಗಲೇ ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ. ಕೊವ್ಯಾಕ್ಸಿನ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಅನುಮತಿ ಸೆಪ್ಟಂಬರ್ ಒಳಗೆ ಸಿಗುವ ನಿರೀಕ್ಷೆ ಇದೆ ಎಂದು ಕಳೆದ ತಿಂಗಳು ಭಾರತ್ ಬಯೋಟೆಕ್ ಹೇಳಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News