ಮಹಾರಾಷ್ಟ್ರದಲ್ಲಿ ಮೈತ್ರಿ ಸರಕಾರಕ್ಕೆ ಕಾಂಗ್ರೆಸ್ ಬೆಂಬಲ ಹಿಂತೆಗೆದುಕೊಳ್ಳುವುದಿಲ್ಲ: ಪೃಥ್ವಿರಾಜ್ ಚವಾಣ್

Update: 2021-06-23 09:35 GMT

ಮುಂಬಯಿ: ಮಹಾರಾಷ್ಟ್ರದಲ್ಲಿ ಮೂರು ಪಕ್ಷಗಳ ಮಹಾ ವಿಕಾಸ್ ಅಘಾಡಿ (ಎಂವಿಎ) ಸರಕಾರವನ್ನು ಮುರಿಯುವ ಉದ್ದೇಶ ಕಾಂಗ್ರೆಸ್ಸಿಗೆ ಇಲ್ಲ ಹಾಗೂ ಮೈತ್ರಿ ಸರಕಾರವನ್ನು ಪೂರ್ಣ ಐದು ವರ್ಷಗಳ ಕಾಲ ನಮ್ಮ ಪಕ್ಷ ಬೆಂಬಲಿಸುತ್ತದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಬುಧವಾರ ಹೇಳಿದ್ದಾರೆ.

" ಮೂರು ಪಕ್ಷಗಳು ಮೈತ್ರಿ ಮಾಡಿಕೊಂಡು ರಚಿಸಿರುವ ಮಹಾ ವಿಕಾಸ್ ಅಘಾಡಿ ಸರಕಾರವನ್ನು ಕಾಂಗ್ರೆಸ್ ಮುರಿಯುವುದಿಲ್ಲ. ಮಹಾ ವಿಕಾಸ್ ಅಘಾಡಿ ಸರಕಾರವು ಪೂರ್ಣ ಐದು ವರ್ಷಗಳ ಅವಧಿಯನ್ನು ಪೂರೈಸುತ್ತದೆ ಎಂದು ನಮಗೆ ಸಂಪೂರ್ಣ ವಿಶ್ವಾಸವಿದೆ. ಬಿಜೆಪಿಯನ್ನು ಅಧಿಕಾರದಿಂದ ದೂರವಿರಿಸಲು ಈ ಮೈತ್ರಿ ರೂಪುಗೊಂಡಿದೆ. ಆದ್ದರಿಂದ ಸರಕಾರಕ್ಕೆ ಕಾಂಗ್ರೆಸ್ ಕಡೆಯಿಂದ ಬೆಂಬಲವನ್ನು ಹಿಂತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ”ಎಂದು The Indian Express ಗೆ ತಿಳಿಸಿದರು.

ಮುಂದಿನ ಎಲ್ಲಾ ಚುನಾವಣೆಗಳಲ್ಲಿ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಲಿದೆ ಎಂಬ ಎಂಪಿಸಿಸಿ ಮುಖ್ಯಸ್ಥ ನಾನಾ ಪಟೋಲೆ ಅವರ ಹೇಳಿಕೆಗೆ ಎಂವಿಎ ಸರಕಾರದಲ್ಲಿ ಉಂಟಾದ ಅಸಮಾಧಾನದ ಹಿನ್ನೆಲೆಯಲ್ಲಿ ಚವಾಣ್ ಅವರ ಈ ಪ್ರತಿಕ್ರಿಯೆ ಬಂದಿದೆ.

 ಮುಂಬೈ ಕಾಂಗ್ರೆಸ್ ಮುಖ್ಯಸ್ಥ ಭಾಯ್ ಜಗ್ತಾಪ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದಾರೆ. ವಾಸ್ತವವಾಗಿ, ಪಟೋಲೆ ಅವರು ಮುಖ್ಯಮಂತ್ರಿಯಾಗುವ ಬಯಕೆಯನ್ನೂ ಸಹ ವ್ಯಕ್ತಪಡಿಸಿದ್ದಾರೆ. ಇದು ವಿಶೇಷವಾಗಿ ಶಿವಸೇನೆಗೆ ಅಸಮಾಧಾನವನ್ನುಂಟು ಮಾಡಿದೆ.  ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಕಳೆದ ವಾರ ಪಕ್ಷದ ಸ್ಥಾಪನಾ ದಿನಾಚರಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಮೇಲೆ ಪರೋಕ್ಷವಾಗಿ ವಾಗ್ದಾಳಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News