ಪರಮಾಣು ಸ್ಥಾವರದ ಮೇಲೆ ವಿಧ್ವಂಸಕ ದಾಳಿ ವಿಫಲ : ಇರಾನ್ ಮಾಧ್ಯಮ ವರದಿ

Update: 2021-06-23 17:11 GMT

ಟೆಹ್ರಾನ್, ಜೂ.23: ಇರಾನ್ ನ  ಪರಮಾಣು ಸ್ಥಾವರ ಕಟ್ಟಡದ ಮೇಲೆ ಬುಧವಾರ ನಡೆಸಲಾದ ವಿಧ್ವಂಸಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಇರಾನ್ ಸುದ್ಧಿಸಂಸ್ಥೆ ವರದಿ ಮಾಡಿದೆ. ದೇಶದ ನಾಗರಿಕ ಪರಮಾಣು ಯೋಜನೆಯ ಮೇಲಿನ ವಿಧ್ವಂಸಕ ದಾಳಿಯನ್ನು ವಿಫಲಗೊಳಿಸಲಾಗಿದೆ ಎಂದು ಭದ್ರತಾಪಡೆಗಳಿಗೆ ನಿಕಟವಾಗಿರುವ ಇರಾನ್ ನ  ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. 

ಡ್ರೋನ್ ಮೂಲಕ ಕಟ್ಟಡದ ಮೇಲೆ ದಾಳಿಗೆ ಪ್ರಯತ್ನಿಸಲಾಗಿದೆ ಎಂದು ಇಸ್ಲಾಮಿಕ್ ರೆವೊಲ್ಯೂಷನರಿ ಗಾರ್ಡ್ ಕಾರ್ಪ್(ಐಆರ್ಜಿಸಿ)ನೊಂದಿಗೆ ಸಂಪರ್ಕವಿರುವ ಸಾಮಾಜಿಕ ಮಾಧ್ಯಮವೊಂದು ವರದಿ ಮಾಡಿದೆ. ಕಟ್ಟಡಕ್ಕೆ ಹಾನಿಯಾಗುವ ಮುನ್ನವೇ ದಾಳಿಯನ್ನು ತಡೆಗಟ್ಟಲಾಗಿದೆ. ಅಪರಾಧಿಗಳನ್ನು ಪತ್ತೆಹಚ್ಚುವ ಮತ್ತು ಪ್ರಕರಣಕ್ಕೆ ಕಾರಣವಾದ ಅಂಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಇರಾನ್ ನ ಪರಮೋಚ್ಛ ರಾಷ್ಟ್ರೀಯ ಭದ್ರತಾ ಸಮಿತಿಗೆ ನಿಕಟವಾಗಿರುವ ‘ನೂರ್ ನ್ಯೂಸ್’ ವೆಬ್ಸೈಟ್ ವರದಿ ಮಾಡಿದೆ. 

ಈ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಬುಧವಾರ ಬೆಳಿಗ್ಗೆ ಈ ದಾಳಿ ನಡೆದಿದೆ. ಆದರೆ ಈ ಹಿಂದೆಯೂ ಇರಾನ್ನ ಪರಮಾಣು ಸ್ಥಾವರ ಹಾಗೂ ವಿಜ್ಞಾನಿಗಳ ಮೇಲೆ ಹಲವು ದಾಳಿ ನಡೆದಿರುವುದರಿಂದ ಸ್ಥಾವರಕ್ಕೆ ಬಿಗಿ ಭದ್ರತೆ ಒದಗಿಸಿರುವುದರಿಂದ ದಾಳಿ ಯತ್ನ ವಿಫಲವಾಗಿದೆ ಎಂದು ಇರಾನ್ನ ಇಂಗ್ಲಿಷ್ ಭಾಷೆಯ ‘ಪ್ರೆಸ್ ಟಿವಿ’ ವರದಿ ಮಾಡಿದೆ. ಟೆಹ್ರಾನ್ನಿಂದ 40 ಕಿ.ಮೀ ದೂರದ ಕರಾಜ್ ನಗರದ ಬಳಿ ಈ ಪರಮಾಣು ಸ್ಥಾವರವಿದೆ. ತನ್ನ ಪರಮಾಣು ಯೋಜನೆಗೆ ಸಂಬಂಧಿಸಿದ ಸ್ಥಾವರದ ಮೇಲೆ ಇಸ್ರೇಲ್ ಹಲವು ಬಾರಿ ದಾಳಿ ನಡೆಸಿ ವಿಜ್ಞಾನಿಗಳನ್ನು ಹತ್ಯೆ ನಡೆಸಿದೆ ಎಂದು ಇರಾನ್ ಆರೋಪಿಸುತ್ತಿದೆ. ಆದರೆ ಇಸ್ರೇಲ್ ಈ ಆರೋಪಗಳಿಗೆ ಪ್ರತಿಕ್ರಿಯಿಸಿಲ್ಲ.‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News