ಖಶೋಗಿ ಹತ್ಯೆ ಮಾಡಿದ ತಂಡಕ್ಕೆ ಅಮೆರಿಕದಲ್ಲಿ ತರಬೇತಿ: ವರದಿ

Update: 2021-06-23 17:15 GMT
photo: twitter/@AJEnglish

 ವಾಷಿಂಗ್ಟನ್, ಜೂ.23: 2018ರಲ್ಲಿ ಅಮೆರಿಕನ್ ಮೂಲದ ಪತ್ರಕರ್ತ ಜಮಾಲ್ ಖಶೋಗಿಯನ್ನು ಹತ್ಯೆ ಮಾಡಿದ ಸೌದಿ ಅರೆಬಿಯಾದ 4 ಜನರ ತಂಡಕ್ಕೆ ಅಮೆರಿಕದಲ್ಲಿ ತರಬೇತಿ ನೀಡಲಾಗಿದೆ ಎಂದು ‘thenewyorktimes’ ಮಂಗಳವಾರ ವರದಿ ಮಾಡಿದೆ.

ಅಮೆರಿಕದಲ್ಲಿ ಅರೆಸೇನಾ ತರಬೇತಿ ಪಡೆಯಲು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ಅನುಮೋದನೆ ನೀಡಿತ್ತು. ಅಮೆರಿಕದ ಖಾಸಗಿ ಭದ್ರತಾ ಸಂಸ್ಥೆ ‘ಟೈಯರ್ 1 ಗ್ರೂಪ್’ ಈ ನಾಲ್ವರಿಗೆ ತರಬೇತಿ ನೀಡಿದೆ. 2014ರಲ್ಲಿ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದ ಸಂದರ್ಭ ಆರಂಭಿಸಲಾಗಿದ್ದ ತರಬೇತಿ ಕಾರ್ಯಕ್ರಮ ಡೊನಾಲ್ಡ್ ಟ್ರಂಪ್ ಆಡಳಿತ ಆರಂಭವಾಗುವವರೆಗೆ ಮುಂದುವರಿದಿತ್ತು. 

ಪೆಂಟಗಾನ್ ನಲ್ಲಿ ಹಿರಿಯ ಅಧಿಕಾರಿಯ ಹುದ್ದೆಗೆ ಅರ್ಜಿ ಹಾಕಿದ್ದ ಟೈಯರ್ 1 ಗ್ರೂಪ್‌ ನ ಸಿಬ್ಬಂದಿಯೊಬ್ಬರು ಈ ಕುರಿತ ದಾಖಲೆಪತ್ರವನ್ನು ಟ್ರಂಪ್ ಆಡಳಿತಕ್ಕೆ ನೀಡಿದ್ದರು ಎಂದು ಪತ್ರಿಕೆ ವರದಿ ಮಾಡಿದೆ.
 
ಸೌದಿಯ 4 ಜನರಿಗೆ ರಕ್ಷಣಾತ್ಮಕ ಉದ್ದೇಶದ ತರಬೇತಿ ನೀಡಲಾಗಿತ್ತು ಮತ್ತು ಇದು ನಂತರ ಅವರು ನಡೆಸಿದ ಘೋರ ಕೃತ್ಯಕ್ಕೆ ಸಂಬಂಧಿಸಿದ್ದಾಗಿರಲಿಲ್ಲ . ಹತ್ಯೆ ಮಾಡಿದ ತಂಡದ 4 ಜನರಿಗೆ 2017ರಲ್ಲಿ ತರಬೇತಿ ನೀಡಲಾಗಿದೆ. ಇದರಲ್ಲಿ ಇಬ್ಬರು 2014ರ ಅಕ್ಟೋಬರ್ನಿಂದ 2015ರ ಜನವರಿ ವರೆಗೆ ನಡೆದ ತರಬೇತಿಯಲ್ಲೂ ಪಾಲ್ಗೊಂಡಿದ್ದರು ಎಂದು ಟೈಯರ್ 1 ಗ್ರೂಪ್ ನ ಲೂಯಿಸ್ ಬ್ರೆಮೆರ್ ಮಾಹಿತಿ ನೀಡಿದ್ದರು.

ಈ ವರದಿ ಬಗ್ಗೆ ಪ್ರತಿಕ್ರಿಯಿಸಲು ಅಮೆರಿಕದ ವಿದೇಶ ವ್ಯವಹಾರ ಇಲಾಖೆ ನಿರಾಕರಿಸಿದ್ದು , ಅಮೆರಿಕದ ಸೇನಾ ಸಾಧನಗಳು ಹಾಗೂ ತರಬೇತಿಯನ್ನು ಜವಾಬ್ದಾರಿಯುತ ಕಾರ್ಯಗಳಿಗೆ ಬಳಸಬೇಕಾಗಿದೆ ಎಂದು ಹೇಳಿರುವುದಾಗಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಸೌದಿಯ ಯುವರಾಜ ಮುಹಮ್ಮದ್ ಬಿನ್ ಸಲ್ಮಾನ್ ರ ಭದ್ರತೆಗೆಂದು ನಿಯೋಜಿತರಾಗಿದ್ದ 7 ಸದಸ್ಯರ ವಿಶೇಷ ಪಡೆಯು ಖಶೋಗಿಯನ್ನು ಹತ್ಯೆ ಮಾಡಿದ ತಂಡದ ಭಾಗವಾಗಿತ್ತು ಎಂದು ಕಳೆದ ಫೆಬ್ರವರಿಯಲ್ಲಿ ಬಿಡುಗಡೆಯಾದ ಅಮೆರಿಕದ ವರದಿಯಲ್ಲಿ ಉಲ್ಲೇಖಿಸಲಾಗಿತ್ತು.
ಅಮೆರಿಕದಲ್ಲಿ ತರಬೇತಿ ಪಡೆದಿದ್ದ 4 ಜನ ಈ ವಿಶೇಷ ಪಡೆಯಲ್ಲಿದ್ದರೇ ಎಂಬುದನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಸ್ಪಷ್ಟಪಡಿಸಿಲ್ಲ. ಖಶೋಗಿ ಹತ್ಯೆ ಪ್ರಕರಣದಲ್ಲಿ ಸೌದಿ ಅರೆಬಿಯಾದ 5 ಜನರಿಗೆ ಮರಣದಂಡನೆ ಮತ್ತು 3 ಜನರಿಗೆ ಜೈಲುಶಿಕ್ಷೆ ವಿಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News