2019-20ರಲ್ಲಿ ಚುನಾವಣಾ ಟ್ರಸ್ಟ್ ಗಳ ಮೂಲಕ ಬಿಜೆಪಿಗೆ ಶೇ.76ಕ್ಕೂ ಅಧಿಕ ದೇಣಿಗೆ ಪಾವತಿ

Update: 2021-06-24 17:01 GMT

ಹೊಸದಿಲ್ಲಿ, ಜೂ.24: 2019-20ರಲ್ಲಿ ಚುನಾವಣಾ ಟ್ರಸ್ಟ್ ಗಳ ಮೂಲಕ ಬಿಜೆಪಿಯು 276.45 ಕೋ.ರೂ.ಗಳ ದೇಣಿಗೆಗಳನ್ನು ಸ್ವೀಕರಿಸಿದೆ. ಚುನಾವಣಾ ಟ್ರಸ್ಟ್ ಗಳ ಮೂಲಕ ಎಲ್ಲ ರಾಜಕೀಯ ಪಕ್ಷಗಳಿಗೆ ನೀಡಲಾದ ಒಟ್ಟು ದೇಣಿಗೆಗಳ ಮೊತ್ತದ ಶೇ.76.17ರಷ್ಟು ಸಿಂಹಪಾಲು ಬಿಜೆಪಿಗೇ ಸಂದಾಯವಾಗಿದೆ ಎಂದು ಅಸೋಸಿಯೇಶನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ತನ್ನ ವರದಿಯಲ್ಲಿ ತಿಳಿಸಿದೆ.

ಕಾಂಗ್ರೆಸ್, ಆಪ್, ಶಿವಸೇನೆ, ಎಸ್ಪಿ, ಜೆಡಿಯು, ಎಲ್‌ಜೆಪಿ ಸೇರಿದಂತೆ 13 ಪಕ್ಷಗಳು 83.46 ಕೋ.ರೂ. ಅಥವಾ ಒಟ್ಟು ದೇಣಿಗೆಗಳ ಶೇ.23ರಷ್ಟನ್ನು ಸ್ವೀಕರಿಸಿವೆ. ಒಟ್ಟು ದೇಣಿಗೆಗಳ ಶೇ.15.98ರಷ್ಟು ಅಥವಾ 58 ಕೋ.ರೂ.ಗಳು ಕಾಂಗ್ರೆಸ್‌ ಗೆ  ಸಂದಾಯವಾಗಿವೆ.
ಸತತ ಮೂರು ವರ್ಷಗಳಿಂದ ಚುನಾವಣಾ ಟ್ರಸ್ಟ್ ಗಳಿಂದ ಗರಿಷ್ಠ ದೇಣಿಗೆಗಳು ಬಿಜೆಪಿಯ ಪಾಲಾಗುತ್ತಿವೆ. ಪಕ್ಷವು 2017-18ರಲ್ಲಿ 167.8 ಕೋ.ರೂ. (ಶೇ.86.59) ಮತ್ತು 2018-19ರಲ್ಲಿ 100.25 ಕೋ.ರೂ.(ಶೇ.40)ಗಳ ದೇಣಿಗೆಗಳನ್ನು ಸ್ವೀಕರಿಸಿತ್ತು.

ಕೇಂದ್ರಿಯ ನೇರ ತೆರಿಗೆಗಳ ಮಂಡಳಿಯಲ್ಲಿ ನೋಂದಣಿಯಾಗಿರುವ 21 ಚುನಾವಣಾ ಟ್ರಸ್ಟ್ ಗಳ ಪೈಕಿ 14 ಟ್ರಸ್ಟ್ಗಳು ಚುನಾವಣಾ ಆಯೋಗಕ್ಕೆ ತಮ್ಮ ವಾರ್ಷಿಕ ವರದಿಗಳನ್ನು ಸಲ್ಲಿಸಿವೆ. ಈ ಪೈಕಿ ಏಳು ಟ್ರಸ್ಟ್ ಗಳು ರಾಜಕೀಯ ಪಕ್ಷಗಳಿಗೆ ನೀಡಿದ್ದ ದೇಣಿಗೆಗಳನ್ನು ಸ್ವೀಕರಿಸಿದ್ದವು. ವಿವಿಧ ಕಾರ್ಪೊರೇಟ್ ಗಳು ಮತ್ತು ವ್ಯಕ್ತಿಗಳಿಂದ ಈ ಟ್ರಸ್ಟ್ ಗಳು ಒಟ್ಟು 363.51 ಕೋ.ರೂ.ಗಳನ್ನು ಸ್ವೀಕರಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News