ಜು.31ರೊಳಗೆ 12ನೇ ತರಗತಿ ಫಲಿತಾಂಶ ಪ್ರಕಟಿಸಲು ಶಿಕ್ಷಣ ಮಂಡಳಿಗಳಿಗೆ ಸುಪ್ರೀಂ ಸೂಚನೆ

Update: 2021-06-24 17:14 GMT

ಹೊಸದಿಲ್ಲಿ, ಜು.24: 12ನೇ ತರಗತಿಯ ವಿದ್ಯಾರ್ಥಿಗಳ  ಆಂತರಿಕ ಮೌಲ್ಯಮಾಪನ ನಡೆಸುವ ಯೋಜನೆಯ ಬಗ್ಗೆ 10 ದಿನದೊಳಗೆ ವಿವರ ಒದಗಿಸಬೇಕು  ಹಾಗೂ ಜುಲೈ ೩೧ರೊಳಗೆ ಫಲಿತಾಂಶ ಪ್ರಕಟಿಸಬೇಕು ಎಂದು ನ್ಯಾ. ಎಎಂ ಖಾನ್ವಿಲ್ಕರ್ ಮತ್ತು ನ್ಯಾ. ದಿನೇಶ್ ಮಹೇಶ್ವರಿ ಅವರಿದ್ದ ಸುಪ್ರೀಂಕೋರ್ಟ್ ಎಲ್ಲಾ ರಾಜ್ಯಗಳ ಶಿಕ್ಷಣ ಮಂಡಳಿಗಳಿಗೆ ಸೂಚಿಸಿದೆ.

ಇದೇ ಸಂದರ್ಭ, ಆಂತರಿಕ ಮೌಲ್ಯಮಾಪನದ ಬಗ್ಗೆ ಎಲ್ಲಾ ಶಿಕ್ಷಣ ಮಂಡಳಿಗಳೂ ಏಕರೀತಿಯ ಯೋಜನೆ ರೂಪಿಸಲು ಸೂಚಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ತಿರಸ್ಕರಿಸಿದೆ. ಸಿಬಿಎಸ್ಇ, ಐಸಿಎಸ್ಇ ಅಥವಾ ರಾಜ್ಯ ಶಿಕ್ಷಣ ಮಂಡಳಿಗಳು ಸ್ವಾಯತ್ತ ಮತ್ತು ಸ್ವತಂತ್ರ ಸಂಸ್ಥೆಗಳಾಗಿದ್ದು ತಜ್ಞರ ಜೊತೆ ಚರ್ಚಿಸಿ ತಮ್ಮದೇ ಆದ ಯೋಜನೆ ರೂಪಿಸಬಹುದು. ಆದರೆ, ಈ ಸ್ವತಂತ್ರ ಯೋಜನೆಗಳು ಅಗತ್ಯಬಿದ್ದರೆ ನ್ಯಾಯಾಲಯದ ಪರಿಶೀಲನೆಯ ವ್ಯಾಪ್ತಿಗೆ ಒಳಪಟ್ಟಿದೆ ಎಂದು ನ್ಯಾಯಾಲಯ ಹೇಳಿದೆ.

ಜುಲೈ 31ರೊಳಗೆ ಫಲಿತಾಂಶ ಪ್ರಕಟಿಸುವಂತೆ ಸೂಚಿಸುವ ಮೂಲಕ ದೇಶದಾದ್ಯಂತದ ಎಲ್ಲಾ ವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣಕ್ಕೆ ದಾಖಲಾತಿ ಸಹಿತ ಇತರ ಉನ್ನತ ಶಿಕ್ಷಣದ ಬಗ್ಗೆ ನಿರ್ಧರಿಸಲು ಸಮಯ ದೊರಕಿದಂತಾಗಿದೆ. ಕಾಲೇಜುಗಳಿಗೆ ದಾಖಲಾತಿ ಪಡೆಯಲು ಯುಜಿಸಿ ನಿರ್ಧಿಷ್ಟ ದಿನಾಂಕವನ್ನು ಪ್ರಕಟಿಸಿದರೆ ಆಗ ಎಲ್ಲಾ ಶಿಕ್ಷಣ ಮಂಡಳಿಗಳೂ ಸಕಾಲದಲ್ಲಿ 12ನೇ ತರಗತಿ ಫಲಿತಾಂಶ ಪ್ರಕಟಿಸುತ್ತವೆ ಎಂದು ನ್ಯಾ. ಖಾನ್ವಿಲ್ಕರ್ ಹೇಳಿದರು. 2ನೇ ಅಲೆ ಹೇಗೆ ಉಲ್ಬಣಗೊಂಡಿತು ಮತ್ತು 10 ದಿನದೊಳಗೆ ಎಲ್ಲಾ ಬದಲಾಗಿರುವುದನ್ನು ನಾವು ಗಮನಿಸಿದ್ದೇವೆ. 3ನೇ ಅಲೆ ಹೇಗಿರುತ್ತದೆ ಎಂಬುದು ನಮಗೆ ತಿಳಿದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ನ್ಯಾಯಪೀಠ ಹೇಳಿದೆ.

ಕೊರೋನ ಸೋಂಕಿನ ಹಿನ್ನೆಲೆಯಲ್ಲಿ ಬಹುತೇಕ ರಾಜ್ಯಗಳು 12ನೇ ತರಗತಿ ಪರೀಕ್ಷೆಯನ್ನು ರದ್ದುಗೊಳಿಸಿವೆ. 12ನೇ ತರಗತಿ ಪರೀಕ್ಷೆ ರದ್ದುಗೊಳಿಸಿರುವುದಾಗಿ ಗುರುವಾರ ಅಸ್ಸಾಂ ಕೂಡಾ ಸುಪ್ರೀಂಕೋರ್ಟ್ಗೆ ತಿಳಿಸಿದೆ. ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ರದ್ದುಗೊಳಿಸಿರುವುದಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್(ಎನ್ಐಒಎಸ್) ಗುರುವಾರ ಪ್ರಕಟಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News