ಕೆನಡಾ: ಕ್ಯಾಥೊಲಿಕ್ ವಸತಿ ಶಾಲೆಯ ಆವರಣದಲ್ಲಿ ನೂರಾರು ಗೋರಿ ಪತ್ತೆ

Update: 2021-06-24 18:30 GMT

ಮಾಂಟ್ರಿಯಲ್, ಜೂ.24: ಪಶ್ಚಿಮ ಕೆನಡಾದಲ್ಲಿ ಈ ಹಿಂದಿನ ಕ್ಯಾಥೊಲಿಕ್ ವಸತಿ ಶಾಲೆಯ ಬಳಿ ನೂರಾರು ಗೋರಿಗಳು ಪತ್ತೆಯಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ. ‌

ಇತ್ತೀಚೆಗೆ ಕೆನಡಾದ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದ ಕಮ್ಲೂಪ್ಸ್‌ ನ ಮತ್ತೊಂದು ಪ್ರಾಚೀನ ವಸತಿ ಶಾಲೆಯ ಆವರಣದಲ್ಲಿ 215 ಶಾಲಾ ಮಕ್ಕಳ ಅಸ್ತಿಪಂಜರ ಪತ್ತೆಯಾಗಿರುವ ವರದಿಯ ಬೆನ್ನಲ್ಲೇ ಇದೇ ರೀತಿಯ ಮತ್ತೊಂದು ಪ್ರಕರಣ ಇದೀಗ ಕೆನಡಾದಲ್ಲಿ ವರದಿಯಾಗಿದೆ. 

ಕಮ್ಲೂಪ್ಸ್ ಪ್ರಕರಣದ ಹಿನ್ನೆಲೆಯಲ್ಲಿ, ಕೆನಡಾದಲ್ಲಿ ಇರುವ ಹಲವಾರು ಪ್ರಾಚೀನ ಶಾಲೆಗಳ ಆವರಣದಲ್ಲಿ ಉತ್ಖನನ ಕಾರ್ಯ ಸರಕಾರದ ನೆರವಿನಿಂದ ನಡೆಯುತ್ತಿದೆ. ಇದರಂತೆ, ಕೆನಡಾದ ಪೂರ್ವದಲ್ಲಿರುವ ಸಸ್ಕಾಚೆವನ್ ಪ್ರಾಂತ್ಯದಲ್ಲಿ ಸ್ಥಳೀಯ ಮಕ್ಕಳಿಗಾಗಿ 1899ರಿಂದ 1997ರವರೆಗೆ ಕಾರ್ಯನಿರ್ವಹಿಸಿದ್ದ ಮೆರೀವಲ್ ವಸತಿ ಶಾಲೆಯ ಆವರಣದಲ್ಲಿ ಮೇ ತಿಂಗಳಿನಲ್ಲಿ ಉತ್ಖನನ ಕಾರ್ಯ ಆರಂಭವಾಗಿದೆ. 

ಈ ಶಾಲೆಯನ್ನು 1997ರಲ್ಲಿ ಕೆಡವಿ, ಹಗಲು ಶಾಲೆಯನ್ನು ಆರಂಭಿಸಲಾಗಿದೆ. ಉತ್ಖನದ ಸಂದರ್ಭ ಭಯಾನಕ ಮತ್ತು ಆಘಾತಕಾರಿ ರೀತಿಯಲ್ಲಿ ನೂರಾರು ಹೆಸರು ಕೆತ್ತದ ಗೋರಿಗಳನ್ನು ಅನ್ವೇಷಿಸಲಾಗಿದೆ ಎಂದು ಸ್ಥಳೀಯ ಕೊವೆಸೆಸ್ ಸಮುದಾಯ ಹೇಳಿರುವುದಾಗಿ ಸಿಬಿಸಿ, ಸಿಟಿವಿ ಸಹಿತ ಹಲವು ಕೆನಡಿಯನ್ ಮಾಧ್ಯಮಗಳು ವರದಿ ಮಾಡಿವೆ. ಇಲ್ಲಿ ಪತ್ತೆಯಾಗಿರುವ ಗೋರಿಗಳು ಕೆನಡಾದಲ್ಲಿ ಇದುವರೆಗಿನ ಬೃಹತ್ ಪ್ರಮಾಣವಾಗಿದೆ ಎಂದು ಸಾರ್ವಭೌಮ ರಾಷ್ಟ್ರಗಳ ಸ್ಥಳೀಯ ಒಕ್ಕೂಟ(ಎಫ್ಎಸ್ಐಎನ್) ಹೇಳಿದೆ. 

ಇದೊಂದು ದುರಂತಮಯ, ಆದರೆ ಅಚ್ಚರಿದಾಯಕವಲ್ಲದ ಸುದ್ಧಿ. ಈ ಅತ್ಯಂತ ಕಷ್ಟದ ಮತ್ತು ಭಾವನಾತ್ಮಕ ಸಮಯದಲ್ಲಿ ಎಲ್ಲಾ ಕೆನಡಿಯನ್ನರೂ ಫಸ್ಟ್ ನೇಷನ್ಸ್ನ ಜತೆ ನಿಲ್ಲಬೇಕೆಂದು ಆಗ್ರಹಿಸುವುದಾಗಿ ಅಸೆಂಬ್ಲಿ ಆಫ್ ಫಸ್ಟ್ ನೇಷನ್ಸ್(ವಿಧಾನಸಭೆ)ನ ರಾಷ್ಟ್ರೀಯ ಮುಖ್ಯಸ್ಥ ಪೆರೀ ಬೆಲ್ಗ್ರೇಡ್ ಹೇಳಿದ್ದಾರೆ. ವಿದ್ಯಾರ್ಥಿಗಳನ್ನು ಬಲವಂತವಾಗಿ ಪ್ರಬಲ ಸಂಸ್ಕತಿ ಜತೆ ವಿಲೀನಗೊಳಿಸಲಾಗಿರುವ ವಸತಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಅನುಭವಿಸಿದ ನಿಂದನೆ ಮತ್ತು ಹಿಂಸೆಗಾಗಿ ಪೋಪ್ ಹಾಗೂ ಕ್ಯಾಥೊಲಿಕ್ ಚರ್ಚ್ಗಳು ಕ್ಷಮೆ ಯಾಚಿಸಬೇಕು ಎಂಬ ಆಗ್ರಹವನ್ನು ಈ ಪ್ರಕರಣ ಪುನರೂರ್ಜಿತಗೊಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News