ಡೆಲ್ಟಾ ವೈರಸ್ ಸೋಂಕು ಹೆಚ್ಚಳ: ಇಸ್ರೇಲ್ ನಲ್ಲಿ ಮಾಸ್ಕ್ ಧಾರಣೆ ನಿಯಮ ಮತ್ತೆ ಜಾರಿ

Update: 2021-06-25 15:20 GMT

ಟೆಲ್ಅವೀವ್, ಜೂ.25: ಇಸ್ರೇಲ್ ನಲ್ಲಿ ಡೆಲ್ಟಾ ವೈರಸ್ ಸೋಂಕು ಪ್ರಕರಣ ಹಠಾತ್ ಹೆಚ್ಚಿರುವುದರಿಂದ ಸಾರ್ವಜನಿಕ ಪ್ರದೇಶದಲ್ಲಿ ಮಾಸ್ಕ್ ಧಾರಣೆ ಕಡ್ಡಾಯಗೊಳಿಸುವ ನಿಯಮವನ್ನು ಮತ್ತೆ ಜಾರಿಗೊಳಿಸಲಾಗಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಶುಕ್ರವಾರ ಹೇಳಿದೆ. ವಿಶ್ವದಲ್ಲಿ ಲಸಿಕೀಕರಣ ಅಭಿಯಾನವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ ದೇಶಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಸ್ರೇಲ್ ನಲ್ಲಿ ಕಳೆದ 10 ದಿನಗಳ ಹಿಂದೆ ಕೊರೋನ ಸೋಂಕು ಕನಿಷ್ಟ ಮಟ್ಟಕ್ಕೆ ಇಳಿದಿತ್ತು. 

ಈಗ ಡೆಲ್ಟಾ ಸೋಂಕು ಪ್ರಕರಣ ಉಲ್ಬಣಗೊಂಡಿರುವುದರಿಂದ ದೇಶಕ್ಕೆ ಮತ್ತೊಂದು ಆಘಾತ ಎದುರಾಗಿದೆ. ಕಳೆದ 4 ದಿನಗಳಲ್ಲಿ ದಿನಾ 100ಕ್ಕೂ ಹೆಚ್ಚು ಸೋಂಕು ಪ್ರಕರಣ ದೃಢಪಟ್ಟಿದ್ದು ಗುರುವಾರ ಒಂದೇ ದಿನ 227 ಪ್ರಕರಣ ದೃಢಪಟ್ಟಿರುವುದರಿಂದ ಮಾಸ್ಕ್ ಧಾರಣೆ ಕಡ್ಡಾಯಗೊಳಿಸಬೇಕಾಗಿದೆ ಎಂದು ಇಸ್ರೇಲ್ ನ ಸಾಂಕ್ರಾಮಿಕ ನಿರ್ವಹಣಾ ಕಾರ್ಯಪಡೆಯ ಮುಖ್ಯಸ್ಥ ನಚ್ಮಾನ್ ಆ್ಯಶ್ ರೇಡಿಯೋ ಮೂಲಕ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ. ಒಂಟಿ ಪ್ರವಾಸಿಗರಿಗೆ ದೇಶಕ್ಕೆ ಭೇಟಿ ನೀಡಲು ಅವಕಾಶ ಕಲ್ಪಿಸಿದ ನಿರ್ಧಾರವನ್ನು ಸದ್ಯದ ಮಟ್ಟಿಗೆ ತಡೆಹಿಡಿಯಲಾಗಿದೆ. ಡೆಲ್ಟಾ ಸೋಂಕು ಹರಡುವುದನ್ನು ತಡೆಯಲು ಇತರ ನಿರ್ಬಂಧ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂದು ಬುಧವಾರ ಅಧಿಕಾರಿಗಳು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News