ಬಲೂಚಿಸ್ತಾನ: ಭದ್ರತಾ ಪಡೆ ಮೇಲೆ ದಾಳಿ; 5 ಯೋಧರ ಮೃತ್ಯು

Update: 2021-06-25 16:54 GMT
photo : twitter/@TimesofIslambad

ಕರಾಚಿ, ಜೂ.25: ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಗಸ್ತು ತಿರುಗುತ್ತಿದ್ದ ಭದ್ರತಾ ಪಡೆ ತಂಡದ ಮೇಲೆ ಉಗ್ರರು ನಡೆಸಿದ ಹೊಂಚುದಾಳಿಯಲ್ಲಿ ಅರೆಸೇನಾಪಡೆಯ 5 ಯೋಧರು ಮೃತಪಟ್ಟಿರುವುದಾಗಿ ವರದಿಯಾಗಿದೆ. 

ಬಲೂಚಿಸ್ತಾನದ ಸಿಬಿ ಜಿಲ್ಲೆಯ ಸಂಗ್ನಾನ್ ಪ್ರದೇಶದಲ್ಲಿ ಉಗ್ರರು ಗುಂಡಿನ ದಾಳಿ ಆರಂಭಿಸಿದಾಗ ಯೋಧರೂ ಮರುದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಸಂದರ್ಭ ಬಲೂಚಿಸ್ತಾನ ಫ್ರಾಂಟಿಯರ್ ಕಾರ್ಪ್ಸ್ನ 5 ಯೋಧರು ಮೃತರಾಗಿದ್ದು ಉಗ್ರರ ತಂಡಕ್ಕೂ ಭಾರೀ ನಷ್ಟವಾಗಿದೆ. ಸ್ಥಳಕ್ಕೆ ಹೆಚ್ಚುವರಿ ಪಡೆಗಳನ್ನು ರವಾನಿಸಿದ್ದು ನಾಕಾಬಂದಿ ನಡೆಸಿ ಉಗ್ರರ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಪಾಕಿಸ್ತಾನದ ಒಳಾಡಳಿತ ಸಚಿವ ಶೇಕ್ ಅಹ್ಮದ್ ದಾಳಿಯನ್ನು ಖಂಡಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಲೂಚಿಸ್ತಾನದ ಮಾರ್ಗೆಟ್-ಕ್ವೆಟ್ಟಾ ರಸ್ತೆಯಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟದಲ್ಲಿ ಬಲೂಚಿಸ್ತಾನ ಫ್ರಾಂಟಿಯರ್ ಕಾರ್ಪ್ಸ್ನ 4 ಯೋಧರು ಮೃತರಾಗಿದ್ದರು. ಬಲೂಚಿಸ್ತಾನದಲ್ಲಿ ಪ್ರತ್ಯೇಕ ದೇಶದ ಕೂಗು ಕೇಳಿಬರುತ್ತಿದ್ದು ಇಲ್ಲಿ ತಾಲಿಬಾನ್ ಹಾಗೂ ಸ್ಥಳೀಯ ನಿವಾಸಿಗಳು ಪಾಕಿಸ್ತಾನ ಸರಕಾರದ ವಿರುದ್ಧ ಅಸಮಾಧಾನಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News