ಕೋವಿಡ್ ಮಾರ್ಗಸೂಚಿ ಉಲ್ಲಂಘನೆ : ಬ್ರಿಟನ್ ಆರೋಗ್ಯ ಕಾರ್ಯದರ್ಶಿ ರಾಜೀನಾಮೆ

Update: 2021-06-27 04:09 GMT

ಲಂಡನ್ : ಪ್ರಿಯತಮೆಯನ್ನು ಚುಂಬಿಸುವ ಮೂಲಕ ಬ್ರಿಟನ್ ಸರ್ಕಾರದ ಕೊರೋನ ವೈರಸ್ ನಿರ್ಬಂಧಗಳನ್ನು ಉಲ್ಲಂಘಿಸಿ, ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾದ ಬ್ರಿಟನ್ ಆರೋಗ್ಯ ಕಾರ್ಯದರ್ಶಿ ಮ್ಯಾಟ್ ಹ್ಯಾಂಕಾಕ್ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ಕೋವಿಡ್-19 ವಿರುದ್ಧದ ಸಮರದಲ್ಲಿ ದೇಶವನ್ನು ಮುನ್ನಡೆಸಿದ ಮತ್ತು ರಾಷ್ಟ್ರವಾಪಿ ಸಾರ್ವತ್ರಿಕ ಲಸಿಕೆ ಅಭಿಯಾನದ ಸಾರಥ್ಯ ವಹಿಸಿದ್ದ ಹ್ಯಾಂಕಾಕ್, ಪ್ರಧಾನಿ ಬೋರಿಸ್ ಜಾನ್ಸನ್ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

"ಈ ಸಾಂಕ್ರಾಮಿಕದಲ್ಲಿ ಸಾಕಷ್ಟು ತ್ಯಾಗ ಮಾಡಿದ ಜನತೆಗೆ ನಾನು ಋಣಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಮಾರ್ಗಸೂಚಿಯನ್ನು ಉಲ್ಲಂಘಿಸುವ ಮೂಲಕ ಅವರಿಗೆ ನೆರವಾಗಲು ವಿಫಲನಾಗಿದ್ದೇನೆ" ಎಂದು ಪತ್ರದಲ್ಲಿ ವಿವರಿಸಿದ್ದಾರೆ. ಹ್ಯಾಂಕಾಕ್ ರಾಜೀನಾಮೆ ಆಂಗೀಕರಿಸಲು ವಿಷಾದವಾಗುತ್ತಿದೆ ಎಂದು ಜಾನ್ಸನ್ ಪ್ರತಿಕ್ರಿಯಿಸಿದ್ದಾರೆ. ಅವರ ಸೇವೆ ಬಗ್ಗೆ ಅಪಾರ ಹೆಮ್ಮೆ ಇದೆ ಎಂದು ಬಣ್ಣಿಸಿದ್ದಾರೆ.

ಸುರಕ್ಷಿತ ಅಂತರದ ಕೋವಿಡ್ ನಿಯಮಾವಳಿಯನ್ನು ಉಲ್ಲಂಘಿಸಿದ್ದನ್ನು ಒಪ್ಪಿಕೊಂಡು ಪೇಚಿಗೆ ಸಿಲುಕಿದ್ದ ಆರೋಗ್ಯ ಕಾರ್ಯದರ್ಶಿಯ ಪರವಾಗಿ ಪ್ರಧಾನಿ ನಿಂತಿದ್ದರು. ಕಟ್ಟುನಿಟ್ಟಿನ ನಿರ್ಬಂಧಗಳನ್ನು ಪಾಲಿಸುವಂತೆ ಅವರು ಜನರಿಗೆ ಮನವಿ ಮಾಡಿದ್ದರು. ಆದರೆ ಸಾರ್ವಜನಿಕರು ನಿಯಮ ಉಲ್ಲಂಘಿಸಿದರೆ ದಂಡ ಹಾಕುವ ಸರ್ಕಾರ ಇದೀಗ ತಾನೇ ನಿಯಮ ಉಲ್ಲಂಘಿಸುವ ಮೂಲಕ ಬೂಟಾಟಿಕೆ ಎಸಗುತ್ತಿದೆ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಆರೋಗ್ಯ ಕಾರ್ಯದರ್ಶಿ ಮೇ 6ರಂದು ತಮ್ಮ ಕಚೇರಿಯಲ್ಲಿ ತನ್ನ ಸಹವರ್ತಿಯೊಬ್ಬರನ್ನು ಚುಂಬಿಸುತ್ತಿರುವ ಭಾವಚಿತ್ರವನ್ನು ’ದ ಸನ್’ ಪತ್ರಿಕೆ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News