ಉತ್ತರಪ್ರದೇಶ,ಉತ್ತರಾಖಂಡದಲ್ಲಿ ಬಿಎಸ್ಪಿ ಏಕಾಂಗಿ ಸ್ಪರ್ಧೆ: ಮಾಯಾವತಿ

Update: 2021-06-27 05:30 GMT

ಲಕ್ನೋ: ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯ ಚುನಾವಣೆಗಳಲ್ಲಿ ಬಹುಜನ ಸಮಾಜ ಪಕ್ಷವು(ಬಿಎಸ್ಪಿ) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ ಇಂದು ಬೆಳಿಗ್ಗೆ ಟ್ವೀಟ್ ಮಾಡಿದ್ದಾರೆ,

ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಜೊತೆ ಒಪ್ಪಂದ ಮಾಡಿಕೊಳ್ಳಲು ಯೋಜಿಸಲಾಗಿದೆ ಎಂಬ ಮಾಧ್ಯಮ ವರದಿಗಳನ್ನು ಮಾಯಾವತಿ ನಿರಾಕರಿಸಿದ್ದಾರೆ.

ಮುಂದಿನ ವರ್ಷವೇ ನಡೆಯಲಿರುವ ಪಂಜಾಬ್ ಚುನಾವಣೆಯಲ್ಲಿ ತಮ್ಮ ಪಕ್ಷವು ಶಿರೋಮಣಿ ಅಕಾಲಿ ದಳದೊಂದಿಗೆ ರಾಜಕೀಯ ಮೈತ್ರಿಯನ್ನು ಘೋಷಿಸಿದೆ ಎಂದು ಮಾಯಾವತಿ ಒತ್ತಿ ಹೇಳಿದ್ದಾರೆ.

117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಉಭಯ ಪಕ್ಷಗಳು ಸ್ಥಾನ ಹಂಚಿಕೆ ಒಪ್ಪಂದವನ್ನು ಅಂತಿಮಗೊಳಿಸಿವೆ: ಅಕಾಲಿ ದಳ 97 ಸ್ಥಾನಗಳಲ್ಲಿ ಹಾಗೂ  ಬಿಎಸ್‌ಪಿ 20 ಸ್ಥಾನಗಳಲ್ಲಿ ಸ್ಪರ್ಧಿಸುತ್ತದೆ.

"ಎಐಎಂಐಎಂ ಹಾಗೂ  ಬಿಎಸ್ಪಿ ಉತ್ತರಪ್ರದೇಶದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಒಟ್ಟಾಗಿ ಹೋರಾಡಲಿವೆ ಎಂಬ ಸುದ್ದಿಯು ಸುದ್ದಿ ವಾಹಿನಿಯಲ್ಲಿ ಪ್ರಸಾರವಾಗಿತ್ತು. ಈ ಸುದ್ದಿ ಸಂಪೂರ್ಣವಾಗಿ ಸುಳ್ಳು, ದಾರಿತಪ್ಪಿಸುವ ಹಾಗೂ  ಆಧಾರರಹಿತವಾಗಿದೆ. ಇದರಲ್ಲಿ ಎಳ್ಳಷ್ಟೂ ಸತ್ಯವಿಲ್ಲ. ಬಿಎಸ್ಪಿ ಅದನ್ನು ತೀವ್ರವಾಗಿ ನಿರಾಕರಿಸುತ್ತದೆ’’ ಎಂದರು.

"ಈ ನಿಟ್ಟಿನಲ್ಲಿ, ಮುಂದಿನ ವರ್ಷದ ಆರಂಭದಲ್ಲಿ ಪಂಜಾಬ್ ಹೊರತುಪಡಿಸಿ, ಬಿಎಸ್ಪಿ ಉತ್ತರಪ್ರದೇಶ ಹಾಗೂ ಉತ್ತರಾಖಂಡ ರಾಜ್ಯ ಚುನಾವಣೆಗಳಲ್ಲಿ ಯಾವುದೇ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸುವುದಿಲ್ಲ ಎಂದು ಮತ್ತೆ ಸ್ಪಷ್ಟಪಡಿಸಲಾಗಿದೆ; ಇದರರ್ಥ ನಾವು  ಏಕಾಂಗಿಯಾಗಿ ಹೋರಾಡುತ್ತೇವೆ " ಎಂದು ಮಾಯಾವತಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News