×
Ad

"ಬಿಜೆಪಿಯ ರಾಜಕೀಯ ವೈಖರಿ ಸರ್ವಾಧಿಕಾರದತ್ತ ಸಾಗುತ್ತಿದೆ": ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ಬಿಜೆಪಿ ಕೌನ್ಸಿಲರ್

Update: 2021-06-27 14:16 IST
photo: twitter

ಹೊಸದಿಲ್ಲಿ: ಬ್ರಹ್ಮಪುರಿ ವಾರ್ಡ್‌ ನ ಗೊಂಡಾ ಅಸೆಂಬ್ಲಿ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕೌನ್ಸಿಲರ್‌ ಆಗಿದ್ದ ರಾಜ್‌ ಕುಮಾರ್‌ ಬಲ್ಲಾನ್‌ ಎಂಬವರು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ದಿಲ್ಲಿಯ ಪೌರ ಇಲಾಖೆಗಳ ಚುನಾವಣೆಗೆ ತಿಂಗಳುಗಳ ಅಂತರವಿರುವಾಗಲೇ ಈ ಬೆಳವಣಿಗೆ ನಡೆದದ್ದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.

ರಾಜ್‌ ಕುಮಾರ್‌ ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ವಿಚಾರದ ಕುರಿತು ಮಾತನಾಡಿದ ದಿಲ್ಲಿ ಪರಿಸರ ಸಚಿವ ಗೋಪಾಲ್‌ ರೈ, "ಬಿಜೆಪಿ ಮತ್ತು ಕಾಂಗ್ರೆಸ್‌ ನಿಂದ ಇನ್ನೂ ಹೆಚ್ಚಿನ ಮಂದಿ ನಮ್ಮ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಸೇರ್ಪಡೆಗೊಳ್ಳಲಿದ್ದಾರೆ" ಎಂದು ಹೇಳಿದ್ದಾರೆ.

"ನಾವೆಲ್ಲರೂ ಒಂದೇ ಗುರಿ ಹೊಂದಿದ್ದೇವೆ. ದಿಲ್ಲಿ ಸರಕಾರದಲ್ಲಿ ಉಂಟಾದ ಬದಲಾವಣೆಗಳಿಂದಾಗಿ ನಮ್ಮ ಕೆಲಸದ ವೇಗವೂ ಹೆಚ್ಚಾಯಿತು. ನಾಗರಿಕ ಇಲಾಖೆಗಳಲ್ಲೂ ಬದಲಾವಣೆಗಳಾಗಬೇಕು" ಎಂದು ಅವರು ಹೇಳಿದರು. ಮೂರು ಕಾರ್ಪೊರೇಷನ್‌ ಗಳ ಪೌರ ಇಲಾಖೆಗಳಿಗೆ ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆ ನಡೆಯಲಿದೆ.

ಮುಂದುವರಿದು ಮಾತನಾಡಿದ ರಾಜ್‌ ಕುಮಾರ್‌, "ಬಿಜೆಪಿಯು ನಡೆಸುತ್ತಿರುವ ರಾಜಕಾರಣದಿಂದ ನಾನು ತುಂಬಾ ನಿರಾಶೆಗೊಂಡಿದ್ದೇನೆ. ಅವರ ರಾಜಕೀಯದ ಹಾದಿಯಲ್ಲಿ ನಾವು ಸಿಲುಕಿಕೊಂಡಿದ್ದೇವೆ. ಅವರು ಕೇವಲ ಸೇಡು ತೀರಿಸಿಕೊಳ್ಳುವಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯಗಳು ಸರ್ವಾಧಿಕಾರದತ್ತ ಸಾಗುತ್ತಿವೆ. ಆದ್ದರಿಂದ ನಾನು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೇನೆ" ಎಂದು ರಾಜ್‌ ಕುಮಾರ್‌ ಹೇಳಿದ್ದಾಗಿ indianexpress.com ವರದಿ ಮಾಡಿದೆ.

ರಾಜ್‌ ಕುಮಾರ್‌ ಬಲ್ಲಾನ್‌ ಭಾರತೀಯ ಜನತಾ ಪಕ್ಷದ ಕಿಸಾನ್‌ ಮೋರ್ಛಾದ ರಾಜ್ಯ ಅಧ್ಯಕ್ಷರಾಗಿ ಸತತ ನಾಲ್ಕು ಅವಧಿಗಳಿಂದ ಆಯ್ಕೆಗೊಂಡಿದ್ದರು ಎಂದು ಆಮ್‌ ಆದ್ಮಿ ಪಕ್ಷವು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News