‘ಏಕ ಶ್ರೇಣಿ-ಏಕ ಪಿಂಚಣಿ’ ಭರವಸೆಯನ್ನು ಪ್ರಧಾನಿ ಈಡೇರಿಸಿದ್ದಾರೆ: ರಾಜನಾಥ್ ಸಿಂಗ್

Update: 2021-06-27 18:01 GMT

ಲೇಹ್, ಜೂ. 27: ಶಸಸ್ತ್ರ ಪಡೆಗಳ ನಿವೃತ್ತ ಯೋಧರಿಗೆ ‘ಏಕ ಶ್ರೇಣಿ -ಏಕ ಪಿಂಚಣಿ’ ಯೋಜನೆ ಒದಗಿಸುವ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಮೂರು ದಿನಗಳ ಪ್ರವಾಸದ ಮೊದಲ ದಿನವಾದ ರವಿವಾರ ಲೇಹ್ನಲ್ಲಿ ಸೇನಾ ಪಡೆಗಳ ನಿವೃತ್ತ ಯೋಧರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಏಕ ಶ್ರೇಣಿ-ಏಕ ಪಿಂಚಣಿ’ ನೀಡುವ ಮೂಲಕ ಶಸಸ್ತ್ರ ಸೇನಾ ಪಡೆಗಳ ನಿವೃತ್ತ ಯೋಧರಿಗೆ ನೀಡಲಾದ ಭರವಸೆಯನ್ನು ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆೆ’ ಎಂದರು. ‌

ಸೇವೆಯ ಬಳಿಕ ಪುನರ್ವಸತಿ ಸಮಸ್ಯೆ ಬಗ್ಗೆ ಮಾತನಾಡಿದ ಅವರು, ಸಮಸ್ಯೆ ಇನ್ನೂ ಮುಂದುವರಿದಿದೆ. ‘‘ಇದರೊಂದಿಗೆ, ಪುನರ್ವಸತಿ ಜಾರಿ ನಿರ್ದೇಶನಾಲಯ ಕಾಲ ಕಾಲಕ್ಕೆ ಉದ್ಯೋಗ ಮೇಳ ಆಯೋಜಿಸಿದೆ. ಈ ಮೂಲಕ ದೊಡ್ಡ ಸಂಖ್ಯೆಯ ನಿವೃತ್ತ ಯೋಧರಿಗೆ ಉದ್ಯೋಗ ಒದಗಿಸಲಾಗಿದೆ. ನಾವು ಈ ಕಾರ್ಯವನ್ನು ತ್ವರಿತಗೊಳಿಸು ಪ್ರಯತ್ನಿಸುತ್ತಿದ್ದೇವೆ’’ ಎಂದರು.
   
‘‘ನೀವೆಲ್ಲರೂ ದೇಶದ ಭದ್ರತೆಯ ಬಗ್ಗೆ ಕಾಳಜಿ ವಹಿಸಿದ ರೀತಿಯಲ್ಲಿ ನಿಮ್ಮೆಲ್ಲರ ಬಗ್ಗೆ ಕಾಳಜಿ ವಹಿಸಬೇಕು ಎಂಬುದು ನಮ್ಮ ಉದ್ದೇಶ. ಇದರ ಹೊರತಾಗಿ, ನೀವು ಎಲ್ಲಿಯಾದರೂ ಏನಾದರೂ ಸಮಸ್ಯೆ ಎದುರಿಸುತ್ತಿದ್ದರೆ, ಅದಕ್ಕಾಗಿ ಸಹಾಯವಾಣಿ ಕೂಡ ವ್ಯವಸ್ಥೆ ಮಾಡಲಾಗಿದೆ ’’ ಎಂದು ಅವರು ಹೇಳಿದರು.

ದೇಶದ ಬಗ್ಗೆ ನಮ್ಮ ಯೋಧರ ಹಾಗೂ ನಿವೃತ್ತ ಯೋಧರ ಸಮರ್ಪಣಾ ಮನೋಭಾವ ಅನುಕರಣೀಯ. ಅವರೆಲ್ಲರಿಗೂ ಹೃತ್ಪೂಕರ್ವಕವಾಗಿ ಕೃತಜ್ಞತೆ ಅರ್ಪಿಸುತ್ತೇನೆ ಎಂದು ಅವರು ಯೋಧರನ್ನು ಪ್ರಶಂಸಿಸಿದರು.

ರಕ್ಷಣಾ ಸಚಿವರು, ಯೋಧರು ಹಾಗೂ ನಿವೃತ್ತ ಯೋಧರು ‘ಭಾರತ್ ಮಾತಾ ಕಿ ಜೈ’ ಘೋಷಣೆಗಳನ್ನು ಕೂಗಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News