"ಗೋಳ್ವಾಲ್ಕರ್ ಚಿಂತನೆಯ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿದರೆ ಮಾತ್ರ ಚಿರಾಗ್ ತಂದೆಯ ಪರಂಪರೆ ಮುಂದುವರಿಸಬಹುದು"

Update: 2021-06-27 18:43 GMT

ಹೊಸದಿಲ್ಲಿ: ಎಲ್ಜೆಪಿ ಮುಖಂಡ ಚಿರಾಗ್ ಪಾಸ್ವಾನ್ ಹಾಗೂ ಬಿಜೆಪಿ ನೇತೃತ್ವದ ಎನ್ಡಿಎ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿದೆ ಎಂಬ ವರದಿಯ ಮಧ್ಯೆ, ವಿಪಕ್ಷಗಳ ಜತೆ ಕೈಜೋಡಿಸುವಂತೆ ಚಿರಾಗ್  ಮನವೊಲಿಸಲು  ಆರ್ಜೆಡಿ ಮುಖಂಡ ತೇಜಸ್ವಿ ಯಾದವ್ ರವಿವಾರ ಚಿರಾಗ್ ರನ್ನು ಭೇಟಿಯಾದರು ಎಂದು ವರದಿಯಾಗಿದೆ.

ಆರೆಸ್ಸೆಸ್ ಮುಖಂಡ ಎಂಎಸ್ ಗೋಳ್ವಾಲ್ಕರ್ ವಿರುದ್ಧದ ಅಸ್ತಿತ್ವವಾದದ ಹೋರಾಟದಲ್ಲಿ ಚಿರಾಗ್ ಕೈಜೋಡಿಸಿದರೆ ಮಾತ್ರ ಅವರು ತನ್ನ ತಂದೆ ರಾಮ್ ವಿಲಾಸ್ ಪಾಸ್ವಾನ್ ರ ಪರಂಪರೆಯನ್ನು ಮುಂದುವರಿಸಲು ಸಾಧ್ಯ ಎಂದು ಈ ಸಂದರ್ಭ ತೇಜಸ್ವಿ ಯಾದವ್ ಹೇಳಿದರು. 

ಮಿತ್ರಪಕ್ಷಗಳನ್ನು ಅಧಿಕಾರ ಪಡೆಯಲು ಬಳಸಿಕೊಂಡು ಆ ಬಳಿಕ ಮೂಲೆಗುಂಪು ಮಾಡುವುದು ಬಿಜೆಪಿಯ ಜಾಯಮಾನವಾಗಿದೆ ಎಂದು ಆರೋಪಿಸಿದ ತೇಜಸ್ವಿ, ತಮ್ಮ ಪಕ್ಷ ಯಾವತ್ತೂ ರಾಮ್ ವಿಲಾಸ್ ಪಾಸ್ವಾನ್ ರ ಕೈಬಿಟ್ಟಿರಲಿಲ್ಲ. ೨೦೦೯ರಲ್ಲಿ ಎಲ್ಜೆಪಿ ಒಂದೇ ಒಂದು ಶಾಸಕರನ್ನು ಹೊಂದಿರಲಿಲ್ಲ ಮತ್ತು ರಾಮ್ ವಿಲಾಸ್ ಪಾಸ್ವಾನರೂ ಚುನಾವಣೆಯಲ್ಲಿ ಸೋತಿದ್ದರು. ಆಗ ಆರ್ಜೆಡಿಯ ಲಾಲೂಪ್ರಸಾದ್ ಯಾದವ್ ಪಾಸ್ವಾನ್ರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳಿಸಿದ್ದರು . ಈ ರೀತಿ ಇತರ ಪಕ್ಷದ ಮುಖಂಡರಿಗಾಗಿ ತನ್ನ ರಾಜ್ಯಸಭಾ ಸ್ಥಾನ ತ್ಯಾಗಮಾಡಿದ ಉದಾಹರಣೆ ಈ ದೇಶದಲ್ಲಿದೆಯೇ,  ದಲಿತರ ಉದ್ಧಾರಕ ರಾಮ್ ವಿಲಾಸ್ ಪಾಸ್ವಾನ್ ಉತ್ತರಪ್ರದೇಶಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸುವ ಮೂಲಕ ಅವರ ಜನ್ಮದಿನವನ್ನು ಆಚರಿಸಲು ಆರ್ಜೆಡಿ ನಿರ್ಧರಿಸಿದೆ. ಇದಕ್ಕಿಂತ ಬೇರೆ ಉದಾಹರಣೆಯ ಅಗತ್ಯವಿದೆಯೇ ಎಂದು ಪ್ರಶ್ನಿಸಿದರು. 

ದೇಶವು ಈಗ ಸಂವಿಧಾನ ಪರ, ಪ್ರಜಾಪ್ರಭುತ್ವದ ಪರ, ರೈತರ ಪರ ಮತ್ತು ಜನತೆಯ ಪರವಾಗಿರುವವರು ಹಾಗೂ ಇದಕ್ಕೆ ವಿರುದ್ಧವಾಗಿರುವವರ ನಡುವಿನ ಹೋರಾಟದ ಸಂಧಿಕಾಲದಲ್ಲಿದೆ. ದಿವಂಗತ ರಾಮ್ವಿಲಾಸ್ ಪಾಸ್ವಾನ್ ಸಮಾಜವಾದಿಯಾಗಿದ್ದರು ಮತ್ತು ತಮ್ಮ ಬದುಕಿನುದ್ದಕ್ಕೂ ಜಾತಿ ಪ್ರಾಬಲ್ಯ, ಬಡತನ ಮತ್ತು ಅಸಮಾನತೆಯ ವಿರುದ್ಧ ಹೋರಾಡಿದವರು. ಅವರ ಪರಂಪರೆ, ಸಿದ್ಧಾಂತವನ್ನು ಮುಂದುವರಿಸಬೇಕಿದ್ದರೆ ಚಿರಾಗ್, ಗೋಳ್ವಾಲ್ಕರ್ ಚಿಂತನೆಯ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕೈಜೋಡಿಸಬೇಕು ಎಂದು ತೇಜಸ್ವಿ ಹೇಳಿದರು. 

ಎಲ್ಜೆಪಿ ಹೋಳಾಗಲು ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಕಾರಣ ಎಂಬ ಚಿರಾಗ್ ಪಾಸ್ವಾನ್ ಆರೋಪದ ಕುರಿತ ಪ್ರಶ್ನೆಗೆ ಉತ್ತರಿಸಿದ ತೇಜಸ್ವಿ, ಎಲ್ಜೆಪಿಯನ್ನು ೨೦೦೫ ಮತ್ತು ೨೦೧೦ರಲ್ಲಿ ಇಬ್ಬಾಗ ಮಾಡಲು ಸಂಚು ಹೂಡಿದವರೇ ಈಗಲೂ ಮಾಡಿದ್ದಾರೆ. ಬಾಡಿಗೆ ಪಡೆದ ಬಂಟರ ನೆರವಿನಿಂದ ಅಧಿಕಾರ ನಡೆಸುವುದು ನಿತೀಶ್ ಕುಮಾರ್ ಅವರ ಚಾಳಿಯಾಗಿದೆ. ಅವರು ಎಲ್ಲರಿಗೂ ದ್ರೋಹ ಬಗೆದವರು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News