ಮರುಭೂಮಿ ನಂಟಿನ ತೋಡರು

Update: 2021-06-28 06:43 GMT

ಭಾಗ - 4

ಸಣ್ಣ ಬುಡಕಟ್ಟು ಜನರ ಜಾಡು ಹಿಡಿದು ಮನುಷ್ಯನ ವಲಸೆ, ಸಂಸ್ಕೃತಿ ಮತ್ತು ಚರಿತ್ರೆಗಳನ್ನು ಅರ್ಥಮಾಡಿಕೊಳ್ಳುವುದು ಅತ್ಯಂತ ರೋಮಾಂಚನಕಾರಿಯಾದ ಸಂಗತಿ. ಅವರ ಜಾಡು ಹಿಡಿದು ನೋಡಲು ತಳಿವಿಜ್ಞಾನವು ಹಲವು ದಿಕ್ಕುಗಳಲ್ಲಿ ನೆರವು ನೀಡುತ್ತಿದೆ. ಆಫ್ರಿಕಾ ನೆಲದಲ್ಲಿ ವಾನರ ಪ್ರಭೇದವೊಂದು ನಿರ್ದಿಷ್ಟವಾದ ಭೌಗೋಳಿಕ, ಜೈವಿಕ, ನೈಸರ್ಗಿಕ ಒತ್ತಡಗಳ ಕಾರಣದಿಂದ ರೂಪಾಂತರ ಹೊಂದಿ ಮನುಷ್ಯನಾಗುವ ಪ್ರಕ್ರಿಯೆ 30 ಲಕ್ಷ ವರ್ಷಗಳಿಗೂ ಹಿಂದೆ ಹೋಗುತ್ತದೆ. ಮರಗಳಿಂದ ಇಳಿದ ನರವಾನರಗಳು ತನ್ನ ರಕ್ಷಣೆ ಮತ್ತು ಹೊಟ್ಟೆಪಾಡಿಗಾಗಿ ಅತ್ಯಂತ ಭೀಕರ ಸಂಘರ್ಷ ನಡೆಸಿವೆ. ಸವಾಲುಗಳು ಮಾತ್ರ ಜೀವ ಜಗತ್ತಿನ ವಿಕಾಸ ಮತ್ತು ಮಾನವ ಪ್ರಗತಿಗೆ ದಾರಿಮಾಡಿವೆ. ಮರದ ಆಸರೆ ತಪ್ಪಿದ ಕಾರಣಕ್ಕೆ ದುರ್ಬಲವಾದ ನರವಾನರರು ರಕ್ಷಣೆಗಾಗಿ ಆಯುಧಗಳನ್ನು, ಗುಹೆಗಳನ್ನು ಮತ್ತು ಮರದಿಂದಿಳಿದ ಹತ್ತು ಹನ್ನೆರಡು ಲಕ್ಷ ವರ್ಷಗಳ ನಂತರ ಬೆಂಕಿಯನ್ನು ಕಂಡುಕೊಂಡರು. ಅಷ್ಟೊತ್ತಿಗಾಗಲೇ ವ್ಯಾಪಕ ವಲಸೆಗಳು ನಿಧಾನ ಗತಿಯಲ್ಲಿ ನಡೆಯುತ್ತಿದ್ದವು. ಸಮಾರು 18-20 ಲಕ್ಷ ವರ್ಷಗಳ ಹಿಂದೆಯೇ ಭೂ ಭಾಗದ ಬೇರೆ ಬೇರೆ ಭಾಗಗಳಿಗೆ ವಲಸೆ ಪ್ರಾರಂಭಿಸಿದ್ದ ಕುರುಹುಗಳನ್ನು ಮಾನವಶಾಸ್ತ್ರಜ್ಞರು ವಿವರಿಸುತ್ತಾರೆ. ರೇಮಂಡ್ ಡಾರ್ಟ್ ಎಂಬ ಮಾನವಶಾಸ್ತ್ರಜ್ಞ ದಕ್ಷಿಣ ಆಫ್ರಿಕಾದ ಗಣಿ ಪ್ರದೇಶದಲ್ಲಿ ಪತ್ತೆ ಹಚ್ಚಿದ ಟಾಂಗ್ ಬೇಬಿಯ (ಲೂಸಿ ಎಂದು ಹೆಸರಿಸಲಾಗಿದೆ)ಅವಶೇಷ ಸುಮಾರು 28 ಲಕ್ಷ ವರ್ಷಗಳಷ್ಟು ಹಿಂದಿನದು ಎಂದು ಕಾಲ ನಿರ್ಣಯ ಮಾಡಲಾಗಿದೆ. ಹೀಗೆ ಪ್ರಾರಂಭವಾದ ಮನುಷ್ಯನ ವಿಕಾಸದ ಕತೆ ನಿಯಾಂಡ್ರತಾಲ್ ಮತ್ತು ಡೆನಿಸೋವಾ, ಪೀಕಿಂಗ್, ಜಾವ ಮತ್ತು ಶಿವಾಲಿಕ್ ಬೆಟ್ಟಗಳು, ಗುಹೆಗಳಲ್ಲಿ ಹಲವು ಅನ್ವೇಷಣೆಗಳನ್ನು ಮಾಡಿದರು. ಅಲ್ಲಿಗೆ ಸುಮಾರು ಹದಿಮೂರು ಮನುಷ್ಯ ಪ್ರಭೇದಗಳು ಮರೆಯಾಗಿದ್ದವು. ಕಡೆಯದಾಗಿ ಉಳಿದ ಹೋಮೋ ಸೇಪಿಯನ್ನರು ಯುಫ್ರೆಟಿಸ್ ನದಿ ಬಯಲುಗಳಲ್ಲಿ, ಕಾಕಸಸ್, ಝಾಗ್ರೋಸ್ ಬೆಟ್ಟಗಳ ತಪ್ಪಲುಗಳಲ್ಲಿ ಹಾಗೂ ಸ್ಟೆಪ್ಪಿ- ಯಾಮ್ನಾಯ ಹುಲ್ಲುಗಾವಲುಗಳಲ್ಲಿ ಹಿಮಯುಗ ಮುಗಿದ ಕೂಡಲೇ ಕೃಷಿಯನ್ನು ಅನ್ವೇಷಿಸಿದರು. ಅದಾದ ಮೇಲೆ ಪಶುಪಾಲನೆಯನ್ನು ಕಂಡುಕೊಂಡರು. ಕೃಷಿ ಮತ್ತು ಪಶುಪಾಲನೆಗಳು ಮನುಷ್ಯರ ಹಸಿವು ನೀಗಿಸಿದವು. ಈ ಎರಡು ಹೊಸ ಅನ್ವೇಷಣೆಗಳಿಂದ ಜನಸಂಖ್ಯೆ ಹೆಚ್ಚಲು ಕಾರಣವಾಯಿತು. ಮನುಷ್ಯರ ರಕ್ಷಣೆಯಲ್ಲಿ ಪಶುಮಂದೆಗಳೂ ದೊಡ್ಡದಾದವು. ಮನುಷ್ಯರ ಚಟುವಟಿಕೆ ಹೆಚ್ಚುತ್ತಾ ಹೋದಂತೆ ಯುಫ್ರೆಟಿಸ್, ಟೈಗ್ರಿಸ್ ನದಿ ಮುಖಜ ಭೂಮಿಗಳು ಒಣಗತೊಡಗಿದವು. ಹವಾಮಾನದ ವೈಪರೀತ್ಯಗಳೂ ಸಹ ತೊಂದರೆ ಕೊಡಲಾರಂಭಿಸಿದ ಮೇಲೆ ಹೋಮೋಸೇಪಿಯನ್ನರ ಗುಂಪುಗಳು ಭೂಮಿಯ ಸಕಲ ದಿಕ್ಕುಗಳ ಕಡೆಗೆ ವಲಸೆ ಪ್ರಾರಂಭಿಸಿದವು. 40 ಸಾವಿರ ವರ್ಷಗಳ ಹಿಂದೆ ವಲಸೆಗಳು ನಡೆದಾಗ ಸಮುದ್ರ ತೀರಗಳು ಪ್ರಮುಖ ಪಾತ್ರ ವಹಿಸಿದ್ದವು. ಅಲ್ಲಿ ಸಿಗುತ್ತಿದ್ದ ಜಲಚರಗಳು ಹಸಿವಿನ ಸಮಸ್ಯೆಯನ್ನಂತೂ ನೀಗುತ್ತವೆ ಎಂಬ ಖಾತ್ರಿಯಿತ್ತು. ಹಿಮಯುಗದ ಅವಧಿಯಲ್ಲಿ ನೀರಿಗಿಂತ ಕಾಡು ಮೇಡುಗಳಲ್ಲಿದ್ದ ಪ್ರಾಣಿಗಳ ಬೇಟೆ ಮತ್ತು ಗುಹೆಗಳ ರಕ್ಷಣೆ ತೀರ ಅಗತ್ಯವಾದ ಹಾಗೆ ಕಾಣುತ್ತದೆ. ನವಶಿಲಾಯುಗದ ಅವಧಿಯಲ್ಲಿ ಸುಮಾರು 10 ಸಾವಿರ ವರ್ಷಗಳ ಆಸುಪಾಸಿನಲ್ಲಿ ಮಧ್ಯ ಏಶ್ಯ, ಪಶ್ಚಿಮ ಏಶ್ಯದಿಂದ ಪ್ರಾರಂಭವಾದ ವಲಸೆಯಲ್ಲಿ ಮನುಷ್ಯರ ಜೊತೆ ಕೃಷಿ ಜ್ಞಾನವಿತ್ತು. ಪಶು ಮಂದೆಗಳಿದ್ದವು. ಕೆಲವರು ಮೂಲ ಅವಲಂಬನೆಯಾದ ಬೇಟೆ ಮತ್ತು ಸಂಗ್ರಹಣೆಯನ್ನೆ ಅವಲಂಬಿಸಿ ವಲಸೆ ಹೊರಟರು ಅಥವಾ ಕೃಷಿ, ಪಶುಪಾಲನೆಯ ಬುಡಕಟ್ಟುಗಳ ಜೊತೆಗೆ ಸಂಯೋಗ ಹೊಂದಿದರು. ನಗರ ಗ್ರಾಮ ಸಂಸ್ಕೃತಿಗಳನ್ನು ಪ್ರಾರಂಭಿಸಿದರು. ಫೆಲೆಸ್ತೀನ್ ಪ್ರದೇಶದಲ್ಲಿ ಪತ್ತೆಯಾದ ನಟುಫಿಯನ್ ಸಂಸ್ಕೃತಿಯು ಸದ್ಯಕ್ಕೆ ದೊರಕಿರುವ ಮಟ್ಟಿಗೆ ಜಗತ್ತಿನ ಆದಿಮ ಗ್ರಾಮವಾಗಿದೆ. ನಂತರದ ದಿನಗಳಲ್ಲಿ ನಗರವಾಗಿ ಬದಲಾಗಿದೆ. ಟರ್ಕಿಯ (ಅನಟೋಲಿ) ಗೊಬೆಕ್ಲಿ ಟೆಪೆಯಲ್ಲಿ ಪಶುಪಾಲಕ, ಕೃಷಿಕರು ಶಿಲಾ ದೇವಾಲಯದಂತಹ ಸಂರಚನೆಯನ್ನು ನಿರ್ಮಿಸಿದ್ದಾರೆ. ಜನರ ಸಾಂಸ್ಕೃತಿಕ ಅಗತ್ಯಗಳಿಗಾಗಿ ನಿರ್ಮಿಸಿರುವ ಸಂರಚನೆಯು ಜಗತ್ತಿನ ಅತ್ಯಂತ ಕೇಂದ್ರವಾಗಿದೆ. ಈ ಸಂರಚನೆಯನ್ನು ಪತ್ತೆ ಮಾಡಿದಾಗ ಮೊದಲಿಗೆ ಬೇಟೆ ಮತ್ತು ಸಂಗ್ರಹಣೆಯ ಮೇಲೆ ಅವಲಂಬಿಸಿದ್ದ ಜನರೇ ನಿರ್ಮಿಸಿರಬೇಕು ಎಂದು ಭಾವಿಸಲಾಗಿತ್ತು. ಆದರೆ ಟೆಪೆಯಿಂದ 30 ಕಿ.ಮೀ. ದೂರದಲ್ಲಿರುವ ಕಾರಚಡಗ್ ಎಂಬ ಬೆಟ್ಟದ ಬಯಲಲ್ಲಿ ಬರಪೀಡಿತ ಪ್ರದೇಶದಲ್ಲಿ ಬೆಳೆಯುವ ಗೋಧಿಯನ್ನು ಬೆಳೆದಿರುವ ಅವಶೇಷಗಳು ಪತ್ತೆಯಾಗಿವೆ. ಸುಮಾರು 7 ಟನ್‌ಗಳಿಗೂ ಅಧಿಕ ತೂಕದ ಕಲ್ಲುಗಳನ್ನು ಎತ್ತಿ ನಿಲ್ಲಿಸಿ ಹಲವು ಕೆತ್ತನೆಗಳನ್ನು ಮಾಡಿರುವ 11,500 ವರ್ಷಗಳ ಹಿಂದಿನ ಬೃಹತ್ ಸಂರಚನೆ ಇದು (ಸೇಪಿಯನ್ಸ್- ಯುವಾಲ್ ಹರಾರಿ-2011). ಕೃಷಿ ಮತ್ತು ಪಶುಪಾಲನೆಗಳ ಅನ್ವೇಷಣೆಯಿಂದಾಗಿ ಪಶ್ಚಿಮ ಏಶ್ಯದ ಬಯಲುಗಳಲ್ಲಿ ಪಾರಂಪರಿಕ ಜ್ಞಾನದ ನೆರವಿನಿಂದ ಬೇಟೆ, ಸಂಗ್ರಹಣೆಗಳನ್ನು ಆಶ್ರಯಿಸಿ ಬದುಕುತ್ತಿದ್ದ ಜನರಿಗೆ ಹಲವು ಸಂಕಟಗಳು ಎದುರಾಗಿರಬೇಕು. ಅಂಥ ಸಂಕಟಗಳನ್ನು ಬೆನ್ನಿಗಿಟ್ಟುಕೊಂಡೆ ತೋಡರು, ಚೆಂಚುಗಳು ಮುಂತಾದವರು ಉಪಖಂಡದ ಕಡೆಗೆ ಹೊರಟಿದ್ದಾರೆ.

ತೋಡ, ಚೆಂಚು, ಬಂಜಾರ, ಕಾಂಬೋಜ, ಲೋಹನ, ಮತ್ತು ಕಾಶ್ಮೀರಿ ಮುಸ್ಲಿಮರ ತಳಿ ವಿಜ್ಞಾನದ ಪ್ರಕಾರ ಹ್ಯಾಪ್ಲೋಗುಂಪು ಜೆ-ಎಂ 172 ಕ್ಕೆ ಸೇರಿದ ಪ್ರಮಾಣ ಶೇ. 50 ರ ವರೆಗೂ ಇರುವುದನ್ನು ಪತ್ತೆ ಹಚ್ಚಲಾಗಿದೆ. 2016 ರ ಜನವರಿ 12 ರಂದು ಜೆ2-ಎಂ 172 ರ ವೈ ಕ್ರೋಮೋಸೊಮುಗಳ ಮೂಲಕ ಪಿತೃಮೂಲವನ್ನು ಪತ್ತೆ ಹಚ್ಚುವ ಕುರಿತಂತೆ ಸುಮಾರು 16 ಜನ ಭಾರತದ ವಿಜ್ಞಾನಿಗಳು ಸೇರಿ ಪ್ರಕಟಿಸಿದ ಸಂಶೋಧನಾ ಪ್ರಬಂಧದ ಪ್ರಕಾರ ತೋಡರು ಮುಂತಾದ ಮೇಲಿನ ಬುಡಕಟ್ಟುಗಳ ಮೂಲ ಪಶ್ಚಿಮ ಏಶ್ಯ ಹಾಗೂ ಲೆವಾಂಟ್ ಪ್ರದೇಶಕ್ಕೆ ಹೋಗಿ ತಲುಪುತ್ತದೆ. ಮೈಸೂರಿನ ದಕ್ಷಿಣ ಭಾಗ, ಪಾಕಿಸ್ತಾನದ ಸಿಂಧೂ ಕಣಿವೆ, ಇರಾನ್ ಮತ್ತು ಇಸ್ರೇಲ್ ಭಾಗದಲ್ಲಿ ವಾಸಿಸುತ್ತಿರುವ ಜನರ ತಳಿ ಗುಂಪುಗಳ ನಡುವೆ ಇರುವ ಸಾಮ್ಯತೆಗಳನ್ನು ಈ ವಿಜ್ಞಾನಿಗಳು ಪತ್ತೆ ಹಚ್ಚಿದ್ದಾರೆ. ಈ ಬುಡಕಟ್ಟುಗಳಲ್ಲಿ ತೋಡರು ಮುಂತಾದವರಲ್ಲಿ ಏಕರೂಪತೆ ಇಲ್ಲ. ತೋಡರು ಎಮ್ಮೆ ಸಾಕಣೆಯನ್ನು ಮತ್ತು ಚೆಂಚುಗಳು ಬೇಟೆ ಮತ್ತು ಸಂಗ್ರಹಣೆಯನ್ನು ಅವಲಂಬಿಸಿ ಬದುಕುತ್ತಿದ್ದಾರೆ.

ಇವರೆಲ್ಲರಲ್ಲಿ ತೋಡರದ್ದು ವಿಶೇಷ. ಅವರ ಪವಿತ್ರ ಪ್ರಾಣಿಗಳಾದ ಎಮ್ಮೆಗಳು ಹಾಗೂ ಅವರ ಆಕಾರ, ಉಡುಗೆ ತೊಡುಗೆ ಮತ್ತು ಸಾಂಸ್ಕೃತಿಕ ಸಂಗತಿಗಳು ಎಲ್ಲೆಲ್ಲಿ ನೆಲೆಸಿದ್ದರು ಎಂಬ ಹೆಜ್ಜೆ ಗುರುತುಗಳನ್ನು ಉಳಿಸುವಂತೆ ಮಾಡಿವೆ. ವಿಲಿಯಂ ಎಚ್ ರಿವರ್ಸ್‌ ಎಂಬ ವೈದ್ಯ (ವಿಶೇಷವಾಗಿ ನರರೋಗ ಮತ್ತು ಮಾನಸಿಕ ರೋಗಗಳ ತಜ್ಞ) 1906 ರಲ್ಲಿ ‘ದ ತೋಡಾಸ್’ ಎಂಬ ಕೃತಿ ರಚಿಸಿದ್ದಾನೆ. ಈತನ ನಂತರ ಮುರ್ರೆ ಬಾನ್ಸನ್ ಎಮಿನೊ ಎಂಬ ಕೆನಡಾ ಮೂಲದ ಭಾಷಾಶಾಸ್ತ್ರಜ್ಞ 1971 ರಲ್ಲಿ ‘ತೋಡ ಸಾಂಗ್ಸ್’, 1974ರಲ್ಲಿ ‘ರಿಚುವಲ್ ಸ್ಟ್ರಕ್ಚರ್ ಆ್ಯಂಡ್ ಲಾಂಗ್ವೇಜ್ ಸ್ಟ್ರಕ್ಚರ್ ಆಫ್ ದ ತೋಡಾಸ್’ ಸೇರಿದಂತೆ ಒಟ್ಟು 4 ಪುಸ್ತಕಗಳನ್ನು ಬರೆದಿದ್ದಾನೆ. ಎಡ್ಗರ್ ಥರ್ಸ್ಟನ್‌ನ ‘ಕ್ಯಾಸ್ಟ್ಸ್ ಆ್ಯಂಡ್ ಟ್ರೈಬ್ಸ್ ಆಫ್ ಸದರನ್ ಇಂಡಿಯಾ (1909)’ ಕೃತಿ ಸಹ ಮಾನವಶಾಸ್ತ್ರೀಯ ಹಾಗೂ ಸಮಾಜಶಾಸ್ತ್ರೀಯ ಆಯಾಮಗಳಿಂದ ಅತ್ಯಂತ ಮಹತ್ವದ ಸಂಗತಿಗಳನ್ನು ವಿವರಿಸುತ್ತದೆ. ಅಳಿವಿನ ಅಂಚಿನಲ್ಲಿರುವ, 2011 ರ ಜನಗಣತಿ ವರದಿಯಂತೆ ಕೇವಲ 2,978 ಜನಸಂಖ್ಯೆ ಇರುವ ಬುಡಕಟ್ಟಿನ ಮೇಲೆ ಪ್ರಖ್ಯಾತ ಅಂತರ್‌ರಾಷ್ಟ್ರೀಯ ಮಟ್ಟದ ದ್ರಾವಿಡ ಭಾಷೆಗಳ ಮೇಲೆ ವಿಶೇಷ ಪರಿಣತಿ ಹೊಂದಿದ್ದ ಭಾಷಾಶಾಸ್ತ್ರಜ್ಞ, ವೈದ್ಯ ಹಾಗೂ ಸಮಾಜಶಾಸ್ತ್ರಜ್ಞ ಮತ್ತು ಮಾನವಶಾಸ್ತ್ರಜ್ಞರು ಈ ಪರಿಯ ಕೆಲಸ ಮಾಡಿರುವುದು ನಮಗೆ ಲಜ್ಜೆ ಹುಟ್ಟಿಸಬೇಕು. ರಿವರ್ಸ್‌ ಮತ್ತು ಎಮಿನೊ ಇಬ್ಬರ ಸಂಶೋಧನೆಗಳ ಪ್ರಕಾರ ತೋಡ ಬುಡಕಟ್ಟಿನ ಜನರ ದೈಹಿಕ ಆಕಾರ ಹಾಗೂ ವೇಷ ಭೂಷಣ ನೋಡಿದರೆ ಓಲ್ಡ್ ಟೆಸ್ಟಮೆಂಟುಗಳಲ್ಲಿ ಬರುವ ಇಸ್ರೇಲ್, ಲೆಬನಾನ್ ಭಾಗದ ಜನರಿಗೆ ಹೋಲಿಕೆಯಾಗುತ್ತಾರೆಂಬ ಪ್ರಸ್ತಾಪಗಳಿವೆ. ತೋಡರು ಚಂದ್ರನನ್ನು ಆರಾಧಿಸುತ್ತಾರೆ. ಆತನನ್ನು ಸಂಪತ್ತಿನ ಅಧಿದೇವತೆ ಎಂದು ನಂಬುತ್ತಾರೆ. ಬಹುಪತಿತ್ವವನ್ನು ಅಳವಡಿಸಿಕೊಂಡಿದ್ದಾರೆ. ಹುಟ್ಟಿದ ಹೆಣ್ಣು ಮಗುವನ್ನು ಕೊಲ್ಲುವ ಪದ್ಧತಿಗಳೂ ಇರುವ ಕುರಿತು ಥರ್ಸ್ಟನ್ ಉಲ್ಲೇಖ ಮಾಡಿದ್ದಾನೆ. ಸತ್ತವರ ಶೋಕ ಸೂಚಕವಾಗಿ ಮತ್ತು ಹಬ್ಬಗಳ ಸಂದರ್ಭದಲ್ಲಿ ಕೋಣಗಳ ಬಲಿ ನೀಡುವ ಪದ್ಧತಿ ಇದೆ. ಕೋಣಗಳ ಬಲಿ ಮತ್ತು ಹೆಣ್ಣು ಮಕ್ಕಳ ಹತ್ಯೆಯ ಕುರಿತು ಥರ್ಸ್ಟನ್ ಪರೋಕ್ಷವಾಗಿ ಕೆಲವು ಸಂಗತಿಗಳನ್ನು ಪ್ರಸ್ತಾಪಿಸಿದ್ದಾನೆ. ಎಮ್ಮೆ ಗುಂಪುಗಳಲ್ಲಿ ಹೆಚ್ಚು ಕೋಣಗಳಿರುವುದು ಲಾಭದಾಯಕವಲ್ಲ. ಕೋಣಗಳನ್ನು ಬಲಿಯ ನೆಪದಲ್ಲಿ ಹತ್ಯೆ ಮಾಡುವುದರ ಮೂಲಕ ಮೇವಿನ ಸಮಸ್ಯೆ ನೀಗಿಸಿಕೊಳ್ಳುವ ಅನುಕೂಲವೊಂದಿದೆ. ಹಾಗೆಯೇ ಬಹುಪತಿತ್ವದ ಆಚರಣೆ ಮತ್ತು ಆಹಾರದ ತೀವ್ರ ಬಿಕ್ಕಟ್ಟುಗಳಿರುವ ಸಂಸ್ಕೃತಿಗಳಲ್ಲಿ ಹುಟ್ಟಿದ ಕೂಡಲೇ ಹೆಣ್ಣು ಮಕ್ಕಳನ್ನು ಕೊಲ್ಲುವ ಪದ್ಧತಿ ಇದೆ ಎಂದು ಥರ್ಸ್ಟನ್ ವಿವರಿಸುತ್ತಾರೆ.

ಎಮ್ಮೆಯನ್ನು ಪವಿತ್ರ ಪ್ರಾಣಿ ಎಂದು ಭಾವಿಸಿ ಐನ್ಹ್ ದೇವತೆಯನ್ನು ಆರಾಧಿಸುತ್ತಾರೆ. (ನಮ್ಮ ಹೈನುಗಾರಿಕೆಗೂ ತೋಡರ ಐನ್ಹ್ ದೇವತೆಗೂ ಸಂಬಂಧವಿರಬಹುದೆ?) ಆದರೆ ದ್ರಾವಿಡ ಭಾಷೆಯನ್ನು ಮಾತನಾಡುತ್ತಾರೆ. ಉಡುಗೆ, ತೊಡುಗೆ, ಮನೆಯ ವಿನ್ಯಾಸ, ಶವಸಂಸ್ಕಾರ, ವಿವಾಹ ಪದ್ಧತಿ ಮುಂತಾದವುಗಳಲ್ಲಿ ಪ್ರತ್ಯೇಕತೆಯನ್ನು ಉಳಿಸಿಕೊಂಡ ತೋಡರು ಭಾಷೆಯ ವಿಚಾರದಲ್ಲಿ ಮಾತ್ರ 2,500-3,000 ವರ್ಷಗಳ ಹಿಂದೆಯೇ ದ್ರಾವಿಡ ಭಾಷಿಕರೊಂದಿಗೆ ಬೆರೆತು ಅವರ ಭಾಷೆಗಳೊಂದಿಗೆ ವ್ಯವರಿಸಿದ್ದಾರೆಂದು ಎಮಿನೊ ಮುಂತಾದ ಭಾಷಾಶಾಸ್ತ್ರಜ್ಞರು ಹೇಳುತ್ತಾರೆ. ಆದರೆ ಮೆಕಾಲ್ಪಿನ್ ಪ್ರಕಾರ ಆದಿ ಎಲಾಮೊ ಮತ್ತು ಆದಿದ್ರಾವಿಡ ಭಾಷೆಗಳು ಇಂದಿನ ಇರಾನಿನ ಝಾಗ್ರೋಸ್ ಬೆಟ್ಟ ತಪ್ಪಲುಗಳವರೆಗೆ ವ್ಯಾಪಿಸಿಕೊಂಡು ನಿಕಟ ಸಂಪರ್ಕದಲ್ಲಿದ್ದುದರ ಕುರಿತು ಆಳವಾದ ಭಾಷಿಕ ಪ್ರಮೇಯಗಳನ್ನು ಮಂಡಿಸುತ್ತಾರೆ. ಹಾಗಾಗಿ ಭೌಗೋಳಿಕ, ಜನಾಂಗಿಕ ಮುಂತಾದ ಒತ್ತಡಗಳಿಂದಾಗಿ ದ್ರಾವಿಡ ಭಾಷೆ ದಕ್ಷಿಣಕ್ಕೆ ಒತ್ತುತ್ತಾ ಬಂದಿದೆ. ಎಲಾಮೊ ಭಾಷೆ ಸಂಘರ್ಷಗಳನ್ನು ತಾಳಿಕೊಳ್ಳಲಾರದೆ ಸುಮಾರು 5,000 ವರ್ಷಗಳ ಹಿಂದೆಯೇ ಕರಗಿ ಹೋಗಿದೆ. ದ್ರಾವಿಡ ಭಾಷೆಯನ್ನು ಮಾತನಾಡುವ ಜನರು ಬಲೂಚಿಸ್ತಾನದ ಕಣಿವೆಗಳಲ್ಲಿ ಈಗಲೂ ಕುರಿ-ಮೇಕೆಗಳೊಂದಿಗೆ ತಿರುಗಾಡುತ್ತಿರುವುದನ್ನು ಡೇವಿಡ್ ಮೆಕಾಲ್ಪಿನ್ (ಪ್ರೊಟೋಎಲಾಮೊ-ದ್ರಾವಿಡಿಯನ್; ದ ಎವಿಡೆನ್ಸ್ ಆ್ಯಂಡ್ ಇಟ್ಸ್ ಇಂಪ್ಲಿಕೇಷನ್ಸ್-1981-ದ ಅಮೆರಿಕನ್ ಫಿಲಾಸೊಫಿಕಲ್ ಸೊಸೈಟಿ) ಕೃತಿಯಲ್ಲಿ ಪ್ರಸ್ತಾಪಿಸುತ್ತಾನೆ.

ಆದರೆ, ಸಮಸ್ಯೆಯಿರುವುದು ಅವರ ಪಶುಪಾಲನೆಯ ವಿಚಾರದಲ್ಲಿ. ಏಕೆಂದರೆ ತೋಡರ ವಲಸೆ ಪ್ರಾರಂಭವಾದ ಯುಫ್ರೆಟಿಸ್ ನದಿ ಬಯಲುಗಳಲ್ಲಿ ಎಮ್ಮೆ ಸಾಕುವಿಕೆ ಇರಲಿಲ್ಲ. ನೈಲ್ ಮತ್ತು ಯುಫ್ರೆಟಿಸ್ ನದಿ ಬಯಲುಗಳಿಗೆ ಎಮ್ಮೆಗಳು ಹೋಗಿದ್ದು ಸಿಂಧೂ ಕಣಿವೆಯಿಂದ ಎಂದು ಅನೇಕ ಸಂಶೋಧನೆಗಳು ಹೇಳುತ್ತವೆ. ತಳಿ ವಿಜ್ಞಾನ ಮತ್ತು ಪುರಾತತ್ವಶಾಸ್ತ್ರಗಳ ಅಧ್ಯಯನಗಳ ಪ್ರಕಾರ 9,500 ವರ್ಷಗಳಿಗೂ ಹಿಂದೆ ಎಮ್ಮೆ ಸಾಕಣೆೆ ಶುರುವಾದದ್ದರ ಅವಶೇಷಗಳು ಕಂಡುಬರುವುದು ಇಂದಿನ ಪಾಕಿಸ್ತಾನದ, ಬಲೂಚಿಸ್ತಾನ್‌ನ ದಕ್ಷಿಣ ಭಾಗದಲ್ಲಿರುವ ಮೆಹರಗಡ ಎಂಬ ಹಸಿ ಇಟ್ಟಿಗೆ ನಾಗರಿಕತೆಯ ನಿವೇಶನದಲ್ಲಿ. ಈ ನಿವೇಶನವನ್ನು ಫ್ರಾನ್ಸ್ ಮೂಲದ ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞರಾದ ಜೀನ್ ಫ್ರಾಂಕೊಯಿಸ್ ಜರ್ರಿಗೆ ಮತ್ತು ಕ್ಯಾಥರಿನ್ ಜರ್ರಿಗೆ ಎಂಬವರು 1974 ರಿಂದ 2000ನೇ ಇಸವಿಯವರೆಗೆ ಉತ್ಖನನಗಳನ್ನು ನಡೆಸಿ ಪತ್ತೆ ಹಚ್ಚಿದ್ದಾರೆ. ಇಲ್ಲಿ 9,500 ವರ್ಷಗಳ ಹಿಂದೆಯೇ ಸುಮಾರು 500 ಎಕರೆ ಪ್ರದೇಶದಲ್ಲಿ ಕೋಟೆ ಮಾದರಿಯಲ್ಲಿ ಕಟ್ಟಿದ ಮೆಹರಗಡದಲ್ಲಿ ಹಸು, ಎಮ್ಮೆ, ಕುರಿ, ಮೇಕೆ ಮತ್ತು ನಾಯಿಗಳ ಸಾಕಣೆಯ ಕುರಿತ ಅವಶೇಷಗಳು ದೊಡ್ಡ ಪ್ರಮಾಣದಲ್ಲಿ ದೊರೆತಿವೆ. ಜೊತೆಗೆ ನಾಯಿಯನ್ನು ಹೊರತು ಪಡಿಸಿ ಉಳಿದ ಪ್ರಾಣಿಗಳನ್ನು ತಿಂದಿರುವುದರ ಕುರಿತಾದ ವಿವರಗಳೂ ದೊರೆತಿವೆ. ಈ ನಿವೇಶನದ ಸುತ್ತಮುತ್ತಲ ಪ್ರದೇಶಗಳಲ್ಲಿ ತೋಡರ ತಳಿ ಗುಂಪಿಗೆ ಸೇರಿದ ಜೆ2-ಎಂ 172, ಜೆ2ಎ-ಎಂ 410 ಗುಂಪುಗಳ ಜನ ವ್ಯಾಪಕವಾಗಿ ವಾಸಿಸುತ್ತಿದ್ದಾರೆ.

ಸಿಂಧೂ ಕಣಿವೆಗಳಲ್ಲಿ ಹಸು- ಎಮ್ಮೆಗಳು ಕೃಷಿ ಮತ್ತು ಸಾಗಣೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿವೆ. ಹಸುಗಳಿಗೆ ಹೋಲಿಸಿದರೆ ಅತ್ಯಂತ ಉಗ್ರ ಪ್ರಾಣಿಯಾದ ಎಮ್ಮೆಯನ್ನು ಪಳಗಿಸಲು ಬಹುಶಃ ಯಮಸಾಹಸ ಪಟ್ಟಿರಬೇಕು. ಪೂರ್ವ ಆಫ್ರಿಕಾದಲ್ಲಿ ಈಗಲೂ ಎಮ್ಮೆಗಳ ದಾಳಿಗೆ ಸಿಕ್ಕಿ ಮೃತಪಡುತ್ತಿರುವವರ ಪ್ರಮಾಣ ಉಳಿದೆಲ್ಲ ಪ್ರಾಣಿಗಳ ದಾಳಿಯಿಂದ ಮೃತಪಡುತ್ತಿರುವವರಿಗಿಂತ ಹೆಚ್ಚಿನದಾಗಿವೆ

ಈ ನಿವೇಶನದ ಇನ್ನೊಂದು ವಿಶೇಷವೆಂದರೆ ಜಗತ್ತಿನಲ್ಲೇ ಮೊದಲ ಬಾರಿಗೆ ಸುಮಾರು 10,000 ವರ್ಷಗಳ ಹಿಂದೆ ಮನುಷ್ಯರು ಜಾನುವಾರುಗಳ ಹಾಲು ಕುಡಿದ ಕಾರಣಕ್ಕೆ ಲ್ಯಾಕ್ಟೋಸ್ ಸೈರಣೆಯ ರೂಪಾಂತರಗಳು ನಡೆದಿರುವ ಕುರಿತು ರೊಬ್ ಮಿಚುಮ್ ತನ್ನ ಲ್ಯಾಕ್ಟೋಸ್ ಇನ್ ದ ಇಂಡಿಯನ್ ಡೈರಿಲ್ಯಾಂಡ್-2011 ಎಂಬ ಲೇಖನದಲ್ಲಿ ಪ್ರಸ್ತಾಪಿಸುತ್ತಾನೆ. ಈ ಬರಹದಲ್ಲಿ ಗ್ಯಾಲೆಗೊ ರೊಮೊೊ ಎಂಬ ತಳಿವಿಜ್ಞಾನಿ ನಡೆಸಿದ ಅಧ್ಯಯನಗಳ ಕುರಿತು ಚರ್ಚಿಸಿದ್ದಾನೆ. ಪಶ್ಚಿಮ ಏಶ್ಯದ ಝಾಗ್ರೋಸ್ ಬೆಟ್ಟದ ತಪ್ಪಲುಗಳು ಮತ್ತು ಮೆಸಪೊಟೆಮಿಯಾದ ಬಯಲುಗಳಲ್ಲಿ ಮೊದಲ ಬಾರಿಗೆ ಹಾಲು ಮತ್ತಿತರ ಹೈನು ಪದಾರ್ಥಗಳನ್ನು ಜನರು ಸೇವಿಸತೊಡಗಿದ್ದಾರೆ. ಈ ಕುರಿತಂತೆ ಹೆಚ್ಚು ನಿಖರ ದಾಖಲೆಗಳು ದೊರೆಯುವುದು ಮೆಹರಗಡದ ನೆಲದಲ್ಲಿ ಬದುಕಿದ್ದ ಜನರಲ್ಲಿ. ಭಾರತದಲ್ಲಿ ಇಂದು ಶೇ.18 ರಷ್ಟು ಜನ ವಯಸ್ಕರು ಹಾಲು ಕುಡಿಯುತ್ತಾರೆ ಎಂಬ ಮಾಹಿತಿಯನ್ನು ರೊಮೊೊ ಪ್ರಸ್ತಾಪಿಸುತ್ತಾನೆ. ತಳಿವಿಜ್ಞಾನದ ಆರಂಭ ಘಟ್ಟದ ಅನ್ವೇಷಣೆಗಳ ಪ್ರಕಾರ ಪೂರ್ವ ಆಫ್ರಿಕಾದ ಪ್ರದೇಶಗಳಲ್ಲಿ ಮೊದಲಿಗೆ 3,000 ಸಾವಿರ ವರ್ಷಗಳ ಹಿಂದೆ ಹಾಲು ಕುಡಿದಿದ್ದಾರೆ ಎಂಬಂತೆ ಅಧ್ಯಯನಗಳು ನಡೆದಿದ್ದವು. ಆದರೆ ಮೆಹರಗಡ ಮತ್ತು ದಕ್ಷಿಣ ಭಾರತದ ಜನರ ಮೇಲೆ ಅಧ್ಯಯನಗಳು ನಡೆದಾಗ ಹೊಸ ಸತ್ಯಗಳು ಬೆಳಕಿಗೆ ಬಂದಿವೆ.

ಯಾವು ಯಾವುದೊ ಒತ್ತಡಗಳಿಗೆ ಸಿಲುಕಿದ ಲೆವಾಂಟ್, ಝಾಗ್ರೋಸ್ ಮತ್ತು ಮೆಸಪೊಟೆಮಿಯಾದ ಬಯಲುಗಳಿಂದ ಪೂರ್ವಕ್ಕೆ ಬಂದ ಜನರು ಸ್ಥಳೀಯರೊಂದಿಗೆ ಬೆರೆತು ಮೆಹರಗಡ ಸಂಸ್ಕೃತಿಯನ್ನು ಕಟ್ಟಿದ್ದಾರೆ. ಇದರಿಂದ ಸ್ಫೂರ್ತಿಗೊಂಡ ಆದಿದ್ರಾವಿಡ ಭಾಷಿಕರು ಸಿಂಧೂ ಕೊಳ್ಳದ ನಾಗರಿಕತೆಯನ್ನು ಕಟ್ಟಿದ್ದಾರೆ. ಸಿಂಧೂ ನಾಗರಿಕತೆಯ ಜೊತೆಗೆ ಮೆಸಪೊಟೆಮಿಯಾದ ವ್ಯಾಪಾರಿಗಳೂ, ಉತ್ಪಾದಕರೂ ಸೇರಿಕೊಂಡಿದ್ದಾರೆ. (ಈ ಎರಡೂ ನಾಗರಿಕತೆಗಳ ತುಸು ಉತ್ತರ ದಿಕ್ಕಿನಲ್ಲಿ ಮೆಲುಹ-ಇಂದಿನ ಅಫ್ಘಾನಿಸ್ತಾನ (ಮೆಲುಕ್ಕಾ- ಮ್ಲೇಚ್ಛ)ದವರು ಪಚ್ಚೆ ಕಲ್ಲುಗಳನ್ನು ತೆಗೆದು ಮೆಸಪೊಟೆಮಿಯಾದ ಜನರಿಗೆ ಮಾರುತ್ತಿದ್ದ ಕುರಿತು ಉಲ್ಲೇಖಗಳಿವೆ). ಪಶ್ಚಿಮದಿಂದ ಬಂದ ತೋಡರ ಹಿರೀಕರು ಬಹುಶಃ ಮೆಹರಗಡದ ಆಸುಪಾಸಿನಲ್ಲಿ ಸಾವಿರಗಟ್ಟಲೆ ವರ್ಷಗಳ ಕಾಲ ವಾಸ ಮಾಡಿರಬಹುದು. ಉಪಖಂಡದ ಮೊದಲ ಎಮ್ಮೆ (ಬ್ಯಾಬುಲಸ್ ಬ್ಯಾಬುಲಿಸ್ ತಳಿ) ಮತ್ತು ಹಸುಗಳ (ಬಾಸ್ ಇಂಡಿಕಸ್-ಝೆಬು) ಸಾಕಣೆಯನ್ನು ಆದಿದ್ರಾವಿಡ ಜನರೊಂದಿಗೆ ಸೇರಿ ಪ್ರಾರಂಭಿಸಿದ್ದಾರೆ. ಯಾಕೆಂದರೆ ಪಶುಗಳನ್ನು ಪಳಗಿಸುವ, ಸಾಕುವ ಕುರಿತು ತುಸುವಾದರೂ ಅರಿವಿದ್ದದ್ದು ಬಹುಶಃ ಇವರಿಗೆ ಮಾತ್ರ. ಇವರು ಉಪಖಂಡದ ವ್ಯಾಪ್ತಿಗೆ ಬರುವ ಕನಿಷ್ಠ 2,000 ವರ್ಷಗಳ ಹಿಂದೆಯೇ ಲೆವಾಂಟ್, ಸ್ಟೆಪ್ಪಿ, ಕಾಕಸಸ್ ಬೆಟ್ಟದ ತಪ್ಪಲುಗಳಲ್ಲಿ ಪಶುಪಾಲನೆ ಪ್ರಾರಂಭವಾಗಿತ್ತು. ನಟುಫಿಯನ್ ಪ್ರದೇಶವನ್ನು ತೋಡ, ಚೆಂಚುಗಳ ಮೂಲ ಜನರು ಬಿಟ್ಟು ಹೊರಡುವ ಕನಿಷ್ಠ 4,000 ವರ್ಷಗಳ ಹಿಂದೆಯೇ ಅಲ್ಲಿ ಕೃಷಿ ಪ್ರಾರಂಭವಾಗಿತ್ತು. ಕನಿಷ್ಠ 1,500 ವರ್ಷಗಳ ಹಿಂದೆಯೇ ಪಶುಪಾಲನೆ ದಟ್ಟವಾಗಿತ್ತು.

ಮೆಹರಗಡದ ನಿವೇಶನಕ್ಕೆ ಬಂದ ಜನರಲ್ಲಿ ಹಲವು ಹಿನ್ನೆಲೆಯವರು ಇರಲಿಕ್ಕೆ ಸಾಧ್ಯವಿದೆ. ಅವರಲ್ಲಿ ಪಶುಪಾಲಕರು, ಗೋಧಿ, ಆಲೂಗಡ್ಡೆ ಬೆಳೆಯುವ ಕೃಷಿಕರು, ಆದಿಮ ಕಸುಬುಗಳಾದ ಬೇಟೆ, ಸಂಗ್ರಹಣೆಗಳನ್ನು ಬಿಡಲೊಲ್ಲದ ಬುಡಕಟ್ಟಿನವರು ಇದ್ದಿರುವ ಸಾಧ್ಯತೆಗಳಿವೆ. ಈ ನೆನಪುಗಳು ಅಥವಾ ಅರಿವು ಇದ್ದ ಕಾರಣಕ್ಕೆ ಮೆಹರಗಡದ ಬಳಿ ಪಶುಸಾಕಣೆ ಪ್ರಾರಂಭಿಸಿದ್ದಾರೆ. ಸಿಂಧೂ ಕಣಿವೆಗಳಲ್ಲಿ ಹಸು- ಎಮ್ಮೆಗಳು ಕೃಷಿ ಮತ್ತು ಸಾಗಣೆಗೆ ಬಹಳ ದೊಡ್ಡ ಕೊಡುಗೆಯನ್ನು ನೀಡಿವೆ. ಹಸುಗಳಿಗೆ ಹೋಲಿಸಿದರೆ ಅತ್ಯಂತ ಉಗ್ರ ಪ್ರಾಣಿಯಾದ ಎಮ್ಮೆಯನ್ನು ಪಳಗಿಸಲು ಬಹುಶಃ ಯಮಸಾಹಸ ಪಟ್ಟಿರಬೇಕು. ಪೂರ್ವ ಆಫ್ರಿಕಾದಲ್ಲಿ ಈಗಲೂ ಎಮ್ಮೆಗಳ ದಾಳಿಗೆ ಸಿಕ್ಕಿ ಮೃತಪಡುತ್ತಿರುವವರ ಪ್ರಮಾಣ ಉಳಿದೆಲ್ಲ ಪ್ರಾಣಿಗಳ ದಾಳಿಯಿಂದ ಮೃತಪಡುತ್ತಿರುವವರಿಗಿಂತ ಹೆಚ್ಚಿನದಾಗಿವೆ ಎಂದು ಅಂಕಿ ಅಂಶಗಳು ಹೇಳುತ್ತಿವೆ.

(ಮುಂದುವರಿಯುವುದು)

Similar News